ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ ವೇಗಿ ಡೇವಿಡ್ ವಿಲ್ಲಿಡೇವಿಡ್ ವಿಲ್ಲಿ ಬದಲಿಗೆ ಅನುಭವಿ ಆಲ್ರೌಂಡರ್ ಕೇದಾರ್ ಜಾಧವ್‌ಗೆ ಸ್ಥಾನಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಆರ್‌ಸಿಬಿ ಪಡೆ

ಬೆಂಗಳೂರು(ಮೇ.01): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಇಂಗ್ಲೆಂಡ್ ಮೂಲದ ಎಡಗೈ ವೇಗಿ ಡೇವಿಡ್ ವಿಲ್ಲಿ ಹೊರಬಿದ್ದಿದ್ದು, ಅವರ ಬದಲಿಗೆ ಇನ್ನುಳಿದ ಐಪಿಎಲ್ ಪಂದ್ಯಾವಳಿಗೆ ಭಾರತದ ಅನುಭವಿ ಆಲ್ರೌಂಡರ್ ಕೇದಾರ್ ಜಾಧವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ಐಪಿಎಲ್‌ನಲ್ಲಿ ಈ ಹಿಂದೆ 17 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಬಲಗೈ ಬ್ಯಾಟರ್ ಕೇದಾರ್ ಜಾಧವ್ ಅವರಿಗೆ ಒಂದು ಕೋಟಿ ರುಪಾಯಿ ನೀಡಿ ಆರ್‌ಸಿಬಿ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. 

Scroll to load tweet…

ಇಂಗ್ಲೆಂಡ್ ಮೂಲದ ಯುವ ಆಲ್ರೌಂಡರ್ ಡೇವಿಡ್ ವಿಲ್ಲಿ, ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ 4 ಪಂದ್ಯಗಳನ್ನಾಡಿ ಮೂರು ವಿಕೆಟ್ ಕಬಳಿಸಿದ್ದರು. ಇನ್ನು ಕೇದಾರ್ ಜಾಧವ್, 2010ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ಒಟ್ಟು 93 ಐಪಿಎಲ್ ಪಂದ್ಯಗಳನ್ನಾಡಿರುವ ಕೇದಾರ್ ಜಾಧವ್ 1,196 ರನ್ ಬಾರಿಸಿದ್ದಾರೆ.

ಕೇದಾರ್ ಜಾಧವ್, 2016 ಹಾಗೂ 2017ರಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿದ್ದರು. ಇದಾದ ಬಳಿಕ 2021ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಕೂಡಿಕೊಂಡಿದ್ದ ಕೇದಾರ್, ಕಳೆದ ಬಾರಿ ಅನ್‌ಸೋಲ್ಡ್ ಆಗಿದ್ದರು. ಈ ಹಿಂದಿನ ಐಪಿಎಲ್‌ಗಳಲ್ಲಿ ಮಂದಗತಿಯ ಬ್ಯಾಟಿಂಗ್ ನಡೆಸುವ ಮೂಲಕ ಕೇದಾರ್ ಜಾದವ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈ ಬಾರಿ ಈ ಎಲ್ಲಾ ಟೀಕೆಗಳಿಗೆ ಕೇದಾರ್ ಜಾಧವ್ ಉತ್ತರ ನೀಡುತ್ತಾರಾ ಕಾದು ನೋಡಬೇಕಿದೆ.

IPL ಟೂರ್ನಿಯಲ್ಲಿ ಬೇಡದ ದಾಖಲೆ ಬರೆದ ಎಂ ಎಸ್ ಧೋನಿ..!

38 ವರ್ಷದ ಮಹಾರಾಷ್ಟ್ರ ಮೂಲದ ಆಲ್ರೌಂಡರ್‌ ಭಾರತ ಪರ 73 ಏಕದಿನ ಪಂದ್ಯಗಳನ್ನಾಡಿ 1,389 ರನ್‌ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ 27 ವಿಕೆಟ್ ಕಬಳಿಸಿದ್ದಾರೆ. ಇನ್ನು ಭಾರತ ಪರ 9 ಟಿ20 ಪಂದ್ಯಗಳನ್ನಾಡಿರುವ ಕೇದಾರ್ ಜಾಧವ್ 58 ರನ್ ಗಳಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೇದಾರ್ ಜಾದವ್ ಅನ್‌ಸೋಲ್ಡ್ ಆಗಿದ್ದರು. ಹೀಗಾಗಿ ಮರಾಠಿ ಕಾಮೆಂಟ್ರಿ ಮಾಡುತ್ತಿದ್ದ ಕೇದಾರ್ ಜಾಧವ್‌ಗೆ ಇದೀಗ ಮತ್ತೊಮ್ಮೆ ಐಪಿಎಲ್ ಆಡುವ ಲಕ್ ಖುಲಾಯಿಸಿದೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ 8 ಐಪಿಎಲ್ ಪಂದ್ಯಗಳನ್ನಾಡಿ 4 ಗೆಲುವು ಹಾಗೂ 4 ಸೋಲು ಸಹಿತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇಂದು ಆರ್‌ಸಿಬಿ ತಂಡವು ಲಖನೌದಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್‌ ತಂಡವನ್ನು ಎದುರಿಸಲಿದ್ದು, ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ.