ಹಿಮ್ಮಡಿ ಗಾಯಕ್ಕೆ ಒಳಗಾಗಿರುವ ಆರ್‌ಸಿಬಿ ಕ್ರಿಕೆಟಿಗ ರಜತ್ ಪಾಟೀದಾರ್16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿರುವ ರಜತ್ ಪಾಟೀದಾರ್ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾದ ಪಾಟೀದಾರ್
ಬೆಂಗಳೂರು(ಮೇ.04): ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬ್ಯಾಟರ್ ರಜತ್ ಪಾಟೀದಾರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ತಮ್ಮ ಫೋಟೋ ಹಂಚಿಕೊಂಡು ಮಾಹಿತಿ ನೀಡಿರುವ ರಜತ್, ‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಚೇತರಿಸಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ಅಭ್ಯಾಸ ಶಿಬಿರದ ವೇಳೆ ಆರ್‌ಸಿಬಿ ತಂಡವನ್ನು ಕೂಡಿಕೊಂಡಿದ್ದರೂ ಗಾಯದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಬಳಿಕ ಬೆಂಗಳೂರಿನ ಎನ್ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಯುಪಿ ಪೊಲೀಸ್ ಟ್ವೀಟಲ್ಲೂ ‘ಕೊಹ್ಲಿ-ಗಂಭೀರ್ ಕದನ’!
ಲಖನೌ: ಐಪಿಎಲ್ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ಕದನವನ್ನು ಇದೀಗ ಉತ್ತರ ಪ್ರದೇಶ ಪೊಲೀಸರು ಟ್ವೀಟರ್ನಲ್ಲಿ ಜಾಗೃತಿಗಾಗಿ ಬಳಸಿಕೊಂಡಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ತುರ್ತು ಸಹಾಯವಾಣಿ ‘112’ರ ಪ್ರಚಾರದ ಬಗ್ಗೆ ಟ್ವೀಟ್ ಮಾಡಿರುವ ಯುಪಿ ಪೊಲೀಸರು, ‘ಯಾವುದೇ ಸಮಸ್ಯೆಯೂ ನಮಗೆ ವಿರಾಟ್(ದೊಡ್ಡ), ಗಂಭೀರ್(ಗಂಭೀರ) ಅಲ್ಲ. ತುರ್ತು ಸಂದರ್ಭಗಳಲ್ಲಿ 112ಕ್ಕೆ ಕರೆ ಮಾಡಿ’ ಎಂದು ತಿಳಿಸಿದ್ದಾರೆ.
ವೃಷಭ- ವೃಶ್ಚಿಕ ರಾಶಿಯ ಅಪರೂಪದ ಹೊಂದಾಣಿಕೆಯಲ್ಲಿದೆ ವಿರುಷ್ಕಾ ಜೋಡಿಯ ಸುಖ ದಾಂಪತ್ಯದ ಗುಟ್ಟು!
ಮತ್ತೊಂದು ಟ್ವೀಟ್ನಲ್ಲಿ ‘ವಾಗ್ವಾದದಿಂದ ಹಿಂದೆ ಸರಿಯಬೇಕೇ ಹೊರತು ನಮಗೆ ಕರೆ ಮಾಡುವುದರಿಂದ ಅಲ್ಲ’ ಎಂದಿದೆ. ಇದೇ ವೇಳೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು, ‘ಗಂಭೀರ ಸಮಸ್ಯೆಗಳಿದ್ದಾಗ 112ಕ್ಕೆ ಕರೆ ಮಾಡಿ. ವಿರಾಟ್ ರೂಪದಲ್ಲಿ ಸಹಾಯ ಮಾಡುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಶಮಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಪತ್ನಿ ಹಸಿನ್!
ನವದೆಹಲಿ: ಭಾರತದ ವೇಗಿ ಮೊಹಮದ್ ಶಮಿಗೆ ಮತ್ತೆ ಸಂಕಷ್ಟಎದುರಾಗಿದ್ದು, ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ನೀಡಿದ್ದ ತಡೆ ಪ್ರಶ್ನಿಸಿ ಅವರ ಪತ್ನಿ ಹಸಿನ್ ಜಹಾನ್ ಸುಪ್ರೀಂ ಕೋರ್ಚ್ ಮೆಟ್ಟಿಲೇರಿದ್ದಾರೆ. ಅಲ್ಲದೇ, ಶಮಿ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಹಸಿನ್ ಮತ್ತೆ ಆರೋಪಿಸಿದ್ದಾರೆ. 2018ರಲ್ಲಿ ಶಮಿ ತಮಗೆ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿ ಹಸಿನ್ ಕೇಸ್ ದಾಖಲಿಸಿದ್ದರು. ಹೀಗಾಗಿ ಶಮಿ ವಿರುದ್ಧ 2019ರಲ್ಲಿ ಅಲಿಪುರ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು.
ಆದರೆ ಕೋಲ್ಕತಾ ಸೆಷನ್ಸ್ ನ್ಯಾಯಾಲಯ ಇದಕ್ಕೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಹಸಿನ್ ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲಿ, ಶಮಿ ಹಾಗೂ ಕುಟುಂಬಸ್ಥರು ವರದಕ್ಷಿಣೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದ್ದು, ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ. ಶಮಿ-ಹಸಿನ್ 2018ರಿಂದಲೂ ಪರಸ್ಪರ ದೂರವಾಗಿದ್ದಾರೆ.
ಏಷ್ಯಾಕಪ್ ಕ್ರಿಕೆಟ್‌ಗೆ ಅರ್ಹತೆ ಪಡೆದ ನೇಪಾಳ
ಕಾಠ್ಮಂಡು: 2023ರ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಗೆ ನೇಪಾಳ ತಂಡ ಅರ್ಹತೆ ಪಡೆದಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳ ಜೊತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಏಷ್ಯಾಕಪ್‌ನ ಅರ್ಹತಾ ಟೂರ್ನಿಯಾದ ಎಸಿಸಿ ಪ್ರೀಮಿಯರ್ ಕಪ್ ಫೈನಲ್‌ನಲ್ಲಿ ನೇಪಾಳ 7 ವಿಕೆಟ್‌ಗಳಿಂದ ಯುಎಇ ತಂಡವನ್ನು ಸೋಲಿಸಿತು. ಅರ್ಹತಾ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಂಡಿದ್ದವು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಒಟ್ಟು 6 ತಂಡಗಳು ಸೆಣಸಲಿದ್ದು, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಅಷ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳಿವೆ.
ICC Test Rankings: ನಂ.1 ಪಟ್ಟಕ್ಕೇರಿದ ಭಾರತ
ದುಬೈ: ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಪ್ರೇಲಿಯಾವನ್ನು ಹಿಂದಿಕ್ಕಿ ಭಾರತ ಅಗ್ರಸ್ಥಾನಕ್ಕೇರಿದೆ. ಎರಡೂ ತಂಡಗಳು ಇತ್ತೀಚೆಗೆ ಯಾವುದೇ ಟೆಸ್ಟ್ ಸರಣಿ ಆಡದಿದ್ದರೂ ವಾರ್ಷಿಕ ಶ್ರೇಯಾಂಕ ಪರಿಷ್ಕರಣೆ ವೇಳೆ ಭಾರತದ ರೇಟಿಂಗ್ ಅಂಕ 119ರಿಂದ 121ಕ್ಕೆ ಏರಿಕೆಯಾಗಿದ್ದು, ಆಸೀಸ್ ರೇಟಿಂಗ್ ಅಂಕ 122ರಿಂದ 116ಕ್ಕೆ ಇಳಿಕೆಯಾಗಿದೆ. 2019-20ರ ಋುತುವಿನ ಫಲಿತಾಂಶಗಳ ಮೂಲಕ ಗಳಿಸಿದ್ದ ಅಂಕಗಳನ್ನು ಕೈಬಿಡಲಾಗಿದ್ದು, ಮೇ 2020ರಿಂದ ಮೇ 2022ರ ಅವಧಿಯಲ್ಲಿ ಗಳಿಸಿದ ಅಂಕಗಳ ಶೇ.50ರಷ್ಟು, ಪ್ರಸಕ್ತ ವರ್ಷದಲ್ಲಿ ಗಳಿಸಿದ ಅಂಕಗಳ ಶೇ.100ರಷ್ಟನ್ನು ಒಟ್ಟುಗೂಡಿಸಿ ರೇಟಿಂಗ್ ಅಂಕ ನಿರ್ಧರಿಸಲಾಗಿದೆ.
