ಲಕ್ನೋ ಸೂಪರ್‌ ಜೈಂಟ್ಸ್‌ನ ಅಗಾಧ ಮೊತ್ತವನ್ನು ಚೇಸಿಂಗ್‌ ಮಾಡಲು ವಿಫಲ ಯತ್ನ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ ಸೋಲು ಕಂಡಿದೆ. ಬ್ಯಾಟಿಂಗ್‌ ಪ್ರತಾಪ ತೋರಿದರೂ 56 ರನ್‌ಗಳ ಸೋಲು ತಂಡದ್ದಾಗಿದೆ.

ಮೊಹಾಲಿ (ಏ.28): ಕೇವಲ 128 ಎಸೆತಗಳಲ್ಲಿ ಬರೋಬ್ಬರಿ 258 ರನ್‌ಗಳನ್ನು ಬಾರಿಸಬೇಕಾದ ಅಗಾಧ ಸವಾಲಿನ ಮುಂದೆ ಮಂಡಿಯೂರಿದ ಪಂಜಾಬ್‌ ಕಿಂಗ್ಸ್‌ ತಂಡ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ದೊಡ್ಡ ಅಂತರದ ಸೋಲು ಕಂಡಿದೆ. ಯುವ ಆಟಗಾರ ಅಥರ್ವ ಟೈಡೆ ಹೋರಾಟ ಇನ್ನಿಂಗ್ಸ್‌ ಆಡಿದರೂ, ಇದು ಪಂಜಾಬ್‌ ಕಿಂಗ್ಸ್‌ ತಂಡದ ಗೆಲುವಿಗಾಗಲಿ, ಕನಿಷ್ಠ ಪಕ್ಷ ಲಕ್ನೂ ಸೂಪರ್‌ ಜೈಂಟ್ಸ್‌ ತಂಡಕ್ಕೆ ಆತಂಕ ನೀಡುವುದಕ್ಕೂ ನೆರವಾಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂಪಾಕ್ಟ್‌ ಪ್ಲೇಯರ್‌ ಆಗಿದ್ದ ಪ್ರಭ್‌ಸಿಮ್ರನ್‌ ಸಿಂಗ್‌ ನಾಯಕ ಶಿಖರ್‌ ಧವನ್‌ ಅವರ ದಯನೀಯ ವೈಫಲ್ಯದಿಂದಾಗಿ ಪಂಜಾಬ್‌ ಕಿಂಗ್ಸ್‌ ತಂಡ 19.5 ಓವರ್‌ಗಳಲ್ಲಿ 201 ರನ್‌ಗೆ ಆಲೌಟ್‌ ಆಯಿತು. ಇದರಿಂದಾಗಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 56 ರನ್‌ಗಳ ಭರ್ಜರಿ ಗೆಲುವು ಕಂಡಿದೆ. ಈ ಗೆಲುವಿನಿಂದಾಗಿ ಅಂಕಪಟ್ಟಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ 2ನೇ ಸ್ಥಾನಕ್ಕೇರಿದೆ. ಕೇವಲ ನೆಟ್‌ ರನ್‌ರೇಟ್‌ ಆಧಾರದಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್‌ಗಿಂತ ಕೆಳಗಿನ ಸ್ಥಾನದಲ್ಲಿದೆ.

ಚೇಸಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ 31 ರನ್‌ ಬಾರಿಸುವಾಗಲೇ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಭುಜದ ಗಾಯದಿಂದಾಗಿ ಕಲೆದ ಕೆಲವು ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಮಡಿದ್ದ ನಾಯಕ ಶಿಖರ್‌ ಧವನ್,‌ ಕೇವಲ 1 ರನ್‌ ಬಾರಿಸಿ ಔಟಾದರೆ, ಇಂಪಾಕ್ಟ್‌ ಪ್ಲೇಯರ್‌ ಆಗಿದ್ದ ಪ್ರಭ್‌ಸಿಮ್ರನ್‌ ಸಿಂಗ್ 13 ಎಸೆತಗಳಲ್ಲಿ 2 ಬೌಂಡರಿಗಳಿದ್ದ 9 ರನ್‌ ಬಾರಿಸಿ ಔಟಾದರು. ಈ ಹಂತದಲ್ಲಿ ಜೊತೆಯಾದ ಅಥರ್ವ ಟೈಡೆ (66ರನ್‌, 36 ಎಸೆತ, 8 ಬೌಂಡರಿ, 2 ಸಿಕ್ಸರ್‌) ಹಾಗೂ ಸಿಕಂದರ್‌ ರಾಜಾ (36ರನ್‌, 22 ಎಸೆತ, 4 ಬೌಂಡರಿ, 1 ಸಿಕ್ಸರ್) ಮೂರನೇ ವಿಕೆಟ್‌ಗೆ 47 ಎಸೆತಗಳಲ್ಲಿ 78 ರನ್‌ ಜೊತೆಯಾಟವಾಡಿದರು. ಈ ಜೋಡಿ ದೊಡ್ಡ ಮೊತ್ತದ ಚೇಸಿಂಗ್‌ ಹಾದಿಯಲ್ಲಿ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಿದಲ್ಲಿ ಇವರ ಇನ್ನಿಂಗ್ಸ್‌ ಪ್ರಮುಖವಾಯಿತು. ಆದರೆ, ಸತತ ಎರಡು ಓವರ್‌ಗಳಲ್ಲಿ ಸಿಕಂದರ್‌ ರಾಜಾ ಹಾಗೂ ಅಥರ್ವ ಟೈಡೆ ಔಟಾಗಿ ಹೊರನಡೆದರು. ನಂತರ ಬಂದ ಲಿಯಾಮ್‌ ಲಿವಿಂಗ್‌ ಸ್ಟೋನ್‌ (23 ರನ್‌), ಸ್ಯಾಮ್‌ ಕರ್ರನ್‌ (21) ಹಾಗೂ ಜಿತೇಶ್‌ ಶರ್ಮ್ (24) ತಂಡದ ದೊಡ್ಡ ಅಂತರದ ಸೋಲನ್ನು ತಪ್ಪಿಸಲು ಹೋರಾಟ ಮಾಡಿದರು. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರವಾಗಿ ಯಶ್‌ ಠಾಕೂರ್‌ 37 ರನ್‌ಗೆ 4 ವಿಕೆಟ್‌ ಉರುಳಿಸಿದರೆ, ನವೀನ್‌ ಉಲ್‌ ಹಕ್‌ 30 ರನ್‌ಗೆ 3 ವಿಕೆಟ್‌ ಉರುಳಿಸಿ ಮಿಂಚಿದರು.

ROYAL CHALLENGERS BANGALORE: ಲಕ್ನೋ ಅಬ್ಬರದ ನಡುವೆ 'ಓನ್ಲಿ ಆರ್‌ಸಿಬಿ' ಟ್ವಿಟರ್‌ನಲ್ಲಿ ಫುಲ್‌ ಟ್ರೆಂಡ್‌!

ಚೇಸಿಂಗ್‌ ಮಾಡಲು ಅಸಾಧ್ಯವಾದ ಟಾರ್ಗೆಟ್‌ ಆಗಿದ್ದರೂ, ತಂಡ 201 ರನ್‌ ಪೇರಿಸಲು ಯಶಸ್ವಿಯಾಯಿತು. ಕೊನೆಗೆ ಗೆಲುವಿನಿಂದ 56 ರನ್‌ಗಳಿಂದ ದೂರವುಳಿಯಿತು. ಲಕ್ನೋ ಸೂಪರ್‌ ಜೈಂಟ್ಸ್‌ ಹಾಲಿ ಆವೃತ್ತಿಯಲ್ಲಿ ತಂಡವೊಂದರ ಗರಿಷ್ಠ ರನ್‌ ಬಾರಿಸಿತ್ತು. ಇಡೀ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ನ ಪಾಸಿಟಿವ್‌ ಅಂಶ ಏನಾದರೂ ಇದ್ದರೆ ಅದು ಟೈಡೆ ಅವರ ಸ್ಪೋಟಕ 66 ರನ್‌ಗಳ ಇನ್ನಿಂಗ್ಸ್‌ ಮಾತ್ರ.

IPL 2023: ಪಂಜಾಬ್‌ ಬೌಲಿಂಗ್‌ಅನ್ನು ಚೆಂಡಾಡಿದ ಲಕ್ನೋ, RCB ದಾಖಲೆ ಸೇಫ್‌!

ಈ ಗೆಲುವಿನೊಂದಿಗೆ ರಾಜಸ್ಥಾನ, ಲಕ್ನೋ, ಗುಜರಾತ್‌ ಹಾಗೂ ಚೆನ್ನೈ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿದೆ. ಈ ನಾಲ್ಕೂ ತಂಡಗಳು ಸಮಾನ ಅಂಕಗಳನ್ನು ಹೊಂದಿದ್ದರೂ ನೆಟ್‌ ರನ್‌ರೇಟ್‌ ಸ್ಥಾನಗಳನ್ನು ನಿರ್ಧಾರ ಮಾಡಿದೆ. ಇನ್ನೊಂದೆಡೆ ಪಂಜಾಬ್‌ ಕಿಂಗ್ಸ್‌ ಎದುರಿಸಿದ ನಾಲ್ಕನೇ ಸೋಲಿನೊಂದಿಗೆ 6ನೇ ಸ್ಥಾನಕ್ಕೆ ಇಳಿದಿದ್ದು, ರನ್‌ರೇಟ್‌ ಪಾತಾಳಕ್ಕೆ ಇಳಿದಿದೆ.