ವರುಣನ ಕೈಯಲ್ಲಿ ಐಪಿಎಲ್ ಪ್ಲೇ ಆಫ್ ಭವಿಷ್ಯಆರ್‌ಸಿಬಿ-ಗುಜರಾತ್ ನಡುವಿನ ಪಂದ್ಯಕ್ಕೆ ಮಳೆ ಭೀತಿಮಳೆಯಿಂದ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? ಯಾರಿಗೆ ನಷ್ಟ
ಬೆಂಗಳೂರು(ಮೇ.21): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ಇಂದು ಲೀಗ್ ಹಂತದ ಕೊನೆಯ ಪಂದ್ಯಗಳು ನಡೆಯುತ್ತಿವೆ. ಸೂಪರ್ ಸಂಡೇಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡುತ್ತಿವೆ. ಇನ್ನು ಇಂದು ನಡೆಯಬೇಕಿರುವ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಎರಡನೇ ಪಂದ್ಯವು ನಡೆಯುವುದು ಆರ್‌ಸಿಬಿ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಆದರೆ ಎರಡನೇ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಇದು ಪ್ಲೇ ಆಫ್ ಪ್ರವೇಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಆದರೆ ಇಂದು ನಡೆಯಬೇಕಿರುವ ಪಂದ್ಯಕ್ಕೂ ಮುನ್ನ ಇಂದು ಮಧ್ಯಾಹ್ನದಿಂದಲೇ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಪಂದ್ಯ ಆಯೋಜನೆ ಕುರಿತಂತೆ ಆತಂಕದ ಕಾರ್ಮೋಡ ಕವಿಯಲಾರಂಭಿಸಿದೆ. ಇಂದು ಸಂಜೆಯ ವೇಳೆಗೂ ಶೇಕಡ 56 ರಷ್ಟು ಮಳೆ ಬೀಳುವ ಸಾಧ್ಯತೆಗಳಿವೆ ಎಂದು ವರದಿಯಾಗಿವೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೇ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸುವ ತಂಡ ಯಾವುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಸದ್ಯ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಈಗಾಗಲೇ ತಮ್ಮ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿದ್ದು, ಈ ಎರಡು ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಬೆಂಗಳೂರಿನಲ್ಲಿ ಭಾರಿ ಮಳೆ, ಆರ್‌ಸಿಬಿ ಪಂದ್ಯಕ್ಕಾಗಿ ಕಾದು ಕುಳಿತ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!
ಸದ್ಯ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ವಾಂಖೇಡೆ ಮೈದಾನದಲ್ಲಿ ಗೆಲುವಿಗಾಗಿ ಹೋರಾಟ ನಡೆಸುತ್ತಿವೆ. ಮೊದಲು ಬ್ಯಾಟ್ ಮಾಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು 5 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿದೆ. ಒಂದು ವೇಳೆ ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಸೋತರೇ, ಇದೇ ವೇಳೆ ಆರ್‌ಸಿಬಿ-ಗುಜರಾತ್ ನಡುವಿನ ಪಂದ್ಯ ಗೆದ್ದರೇ, ಆರ್‌ಸಿಬಿ ನೇರವಾಗಿ 15 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಯಾಕೆಂದರೆ ಮುಂಬೈ ಹಾಗೂ ರಾಜಸ್ಥಾನ ತಂಡಗಳು 14 ಅಂಕಗಳೊಂದಿಗೆ ಅಭಿಯಾನ ಮುಗಿಸಲಿದೆ.
ಒಂದು ವೇಳೆ ಮುಂಬೈ ಇಂಡಿಯನ್ಸ್ ತಂಡವು ಗೆಲುವು ಸಾಧಿಸಿದರೆ, ಇದೇ ವೇಳೆ ಆರ್‌ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯ ರದ್ದಾದರೇ, 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ. ಇನ್ನು ಆರ್‌ಸಿಬಿಯ ಪ್ಲೇ ಆಫ್ ಕನಸು ಭಗ್ನವಾಗಲಿದೆ.
ಒಂದು ವೇಳೆ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಂದು ನಡೆಯುವ ಪಂದ್ಯದಲ್ಲಿ ಭಾರೀ ಅಂತರದಲ್ಲಿ ಸೋತರೆ ಮಾತ್ರ ಅದೃಷ್ಟವಶಾತ್ ರಾಜಸ್ಥಾನ ರಾಯಲ್ಸ್ ತಂಡವು ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.
