ವಾಂಖೇಡೆ ಮೈದಾನದಲ್ಲಿಂದು ಮುಂಬೈಗೆ ಗುಜರಾತ್ ಸವಾಲು ಗುಜರಾತ್ ಟೈಟಾನ್ಸ್‌ ಗೆದ್ದರೆ ಪ್ಲೇ-ಆಫ್‌ ಪ್ರವೇಶಮುಂಬೈ ಇಂಡಿಯನ್ಸ್ ಗೆದ್ದರೆ ಹಲವು ತಂಡಗಳಿಗೆ ತಲೆನೋವು

ಮುಂಬೈ(ಮೇ.12): ಒಂದು ಕಡೆ ಮುಂಬೈ ಇಂಡಿಯನ್ಸ್‌, ಕಳೆದ 4 ಪಂದ್ಯಗಳಲ್ಲಿ 3ರಲ್ಲಿ 200+ ರನ್‌ ಗುರಿಯನ್ನು ನಿರಾಯಾಸವಾಗಿ ಚೇಸ್‌ ಮಾಡಿ ಗೆದ್ದಿದೆ. ಮತ್ತೊಂದೆಡೆ ಗುಜರಾತ್‌ ಟೈಟಾನ್ಸ್‌, ಕಳೆದ 3 ಪಂದ್ಯಗಳಲ್ಲಿ ತನ್ನ ಎದುರಾಳಿಯನ್ನು ಕ್ರಮವಾಗಿ 130, 118, 171 ರನ್‌ಗಳಿಗೆ ಕಟ್ಟಿಹಾಕಿದೆ. ಶುಕ್ರವಾರದ ಪಂದ್ಯ ಮುಂಬೈನ ಬಲಿಷ್ಠ ಬ್ಯಾಟರ್‌ಗಳು ಹಾಗೂ ಟೈಟಾನ್ಸ್‌ನ ಪ್ರಬಲ ಬೌಲರ್‌ಗಳ ನಡುವಿನ ಸೆಣಸಾಟಕ್ಕೆ ಸಾಕ್ಷಿಯಾಗಲಿದೆ.

ಗುಜರಾತ್‌ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 16 ಅಂಕ ಸಂಪಾದಿಸಿದ್ದು, ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ ಪ್ರವೇಶಿಸುವುದು ಖಚಿತ. ಜೊತೆಗೆ ಲೀಗ್‌ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲೇ ಉಳಿದು ಕ್ವಾಲಿಫೈಯರ್‌-1 ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಇನ್ನು ಮುಂಬೈ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ ಹೊಸ್ತಿಲಿಗೆ ತಲುಪಲಿದೆ. ಸೋತರೆ ಬಾಕಿ ಉಳಿಯುವ 2 ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಲಿದೆ.

ಒಂದು ಗೆಲುವು ಹಲವು, ಹಲವು ಲೆಕ್ಕಾಚಾರ: ಹೌದು, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಭರ್ಜರಿ ಲಯದಲ್ಲಿದ್ದು, ಇಂದಿನ ಪಂದ್ಯದ ಒಂದು ಗೆಲವು, ತಂಡವನ್ನು ಸತತ ಎರಡನೇ ಬಾರಿಗೆ ಪ್ಲೇ ಆಫ್‌ ಹಂತಕ್ಕೆ ಕೊಂಡೊಯ್ಯಲಿದೆ. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡವು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ರಾಜಸ್ಥಾನ ರಾಯಲ್ಸ್, ಲಖನೌ ಸೂಪರ್ ಜೈಂಟ್ಸ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತಾ ನೈಟ್ ರೈಡರ್ಸ್‌, ಪಂಜಾಬ್ ಕಿಂಗ್ಸ್‌, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ದುರ್ಗಮವಾಗಲಿದೆ.

ಬಾಸ್ಕೆಟ್‌ಬಾಲ್‌ ಬಿಟ್ಟು ಶೂಟರ್‌ ಆದ ದಿವ್ಯಾ; ದೇಶಕ್ಕೆ ಚಿನ್ನ ಗೆದ್ದ ರಾಜ್ಯದ ಪ್ರತಿಭೆ

ಸದ್ಯ ಗುಜರಾತ್ ಟೈಟಾನ್ಸ್ ತಂಡವು 11 ಪಂದ್ಯಗಳನ್ನಾಡಿ 8 ಗೆಲುವು ಹಾಗೂ 3 ಸೋಲುಗಳೊಂದಿಗೆ 16 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೊಂದೆಡೆ 5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವು 11 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 5 ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 4 ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದೆ.

ಮುಖಾಮುಖಿ: 02

ಮುಂಬೈ: 01

ಗುಜ​ರಾ​ತ್‌: 01

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ ಇಂಡಿಯನ್ಸ್: ರೋಹಿತ್‌ ಶರ್ಮಾ(ನಾ​ಯ​ಕ​), ಇಶಾನ್‌ ಕಿಶನ್, ಕ್ಯಾಮರೋನ್ ಗ್ರೀನ್‌, ಸೂರ್ಯಕುಮಾರ್ ಯಾದವ್​, ತಿಲಕ್‌ ವರ್ಮಾ, ನಿಹಾಲ್ ವಧೇರಾ, ಟಿಮ್ ಡೇವಿಡ್‌, ಕ್ರಿಸ್ ಜೊರ್ಡನ್‌, ಪೀಯೂಸ್ ಚಾವ್ಲಾ, ಆಕಾಶ್‌, ಜೇಸನ್ ಬೆಹ್ರ​ನ್‌​ಡ್ರಾಫ್‌, ಕುಮಾರ್ ಕಾರ್ತಿ​ಕೇ​ಯ.

ಗುಜ​ರಾ​ತ್‌ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಅಭಿ​ನವ್‌ ಮನೋಹರ್, ವಿಜಯ್ ಶಂಕರ್‌, ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್‌, ನೂರ್‌ ಅಹ್ಮದ್‌, ಮೋಹಿ​ತ್‌ ಶರ್ಮಾ, ಮೊಹಮ್ಮದ್ ಶಮಿ, ಅಲ್ಜಾ​ರಿ ಜೋಸೆಫ್.

ಪಂದ್ಯ: ಸಂಜೆ 7.30ರಿಂದ,

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌: ವಾಂಖೇಡೆ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ದಾಖ​ಲಾ​ಗುವ ಸಾಧ್ಯತೆ ಹೆಚ್ಚು. ಇಲ್ಲಿ ನಡೆದ 5 ಪಂದ್ಯ​ಗ​ಳಲ್ಲಿ 4ರಲ್ಲಿ ಚೇಸ್‌ ಮಾಡಿದ ತಂಡ ಗೆದ್ದಿದೆ.