ಬರೋಬ್ಬರಿ 1427 ದಿನಗಳ ಬಳಿಕ ಚೆನ್ನೈನಲ್ಲಿ ನಡೆದ ಐಪಿಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಭರ್ಜರಿಯಾಗಿ ಬ್ಯಾಟಿಂಗ್‌ ಮಾಡಿದೆ. ಆರಂಭಿಕ ಆಟಗಾರು ರುತುರಾಜ್‌ ಗಾಯಕ್ವಾಡ್‌ ಹಾಗೂ ಡೆವೋನ್‌ ಕಾನ್ವೆ ಅವರ ಶತಕದ ಜೊತೆಯಾಟದ ನೆರವಿನಿಂದ ಚೆನ್ನೈ  ಹಾಲಿ ಐಪಿಎಲ್‌ನಲ್ಲಿ ತನ್ನ ಮೊದಲ 200 ಪ್ಲಸ್‌ ಮೊತ್ತ ದಾಖಲಿಸಿದೆ.

ಚೆನ್ನೈ(ಏ.03): ಸೋಲಿನೊಂದಿಗೆ ಈ ಬಾರಿಯ ಐಪಿಎಲ್‌ ಅಭಿಯಾನ ಆರಂಭಿಸಿರುವ ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಭರ್ಜರಿ ಬ್ಯಾಟಿಂಗ್‌ ಮೂಲಕ ಗಮನಸೆಳೆದಿದೆ. ಚೆಪಾಕ್‌ ಮೈದಾನದಲ್ಲಿ ಲಖನೌ ಬೌಲರ್‌ಗಳನ್ನು ಚಿಂದಿ ಉಡಾಯಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ಬ್ಯಾಟ್ಸ್‌ಮನ್‌ಗಳು ತಂಡದ ದೊಡ್ಡ ಮೊತ್ತಕ್ಕೆ ಕಾರಣರಾಗಿದ್ದಾರೆ. ಆರಂಭಿಕ ಆಟಗಾರ ರುತುರಾಜ್‌ ಗಾಯಕ್ವಾಡ್‌ (57 ರನ್‌, 31 ಎಸೆತ, 3 ಬೌಂಡರಿ, 4 ಸಿಕ್ಸರ್‌) ಸ್ಫೋಟಕ ಅರ್ಧಶತಕ ಹಾಗೂ ಕೆಳಕ್ರಮಾಂಕದಲ್ಲಿ ಅಂಬಟಿ ರಾಯುಡು ಇನ್ನಿಂಗ್ಸ್‌ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 7 ವಿಕೆಟ್‌ಗೆ 217 ರನ್‌ ಪೇರಿಸಿದೆ. ಇದು ಹಾಲಿ ಐಪಿಎಲ್‌ನಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಮೊತ್ತ ಎನಿಸಿದೆ. ಇದಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್‌ ತಂಡ 203 ರನ್‌ ಬಾರಿಸಿದ್ದು 16ನೇ ಆವೃತ್ತಿಯ ಐಪಿಎಲ್‌ನ ಗರಿಷ್ಠ ಮೊತ್ತ ಎನಿಸಿತ್ತು. ಪವರ್‌ ಪ್ಲೇ ಅವಧಿಯ ಆರು ಓವರ್‌ಗಳಲ್ಲಿ 79 ರನ್‌ ಪೇರಿಸಿದ್ದ ಚೆನ್ನ ತಂಡ ನಂತರದ 7-15 ಓವರ್‌ಗಳಲ್ಲಿ 85 ರನ್‌ ಕಲೆಹಾಕಿತು. ಕೊನೆಯ ಐದು ಓವರ್‌ಗಳಲ್ಲಿ 53 ರನ್‌ ಸಿಡಿಸುವ ಮೂಲಕ ಲಖನೌ ತಂಡಕ್ಕೆ ದೊಡ್ಡ ಮೊತ್ತದ ಟಾರ್ಗೆಟ್‌ ನೀಡಿತು. 

2019ರ ಬಳಿಕ ಮೊದಲ ಬಾರಿಗೆ ಚೆನ್ನೈ ಸ್ಟೇಡಿಯಂನಲ್ಲಿ ಆಡಲು ಇಳಿದ ಎಂಎಸ್‌ ಧೋನಿ ಟಾಸ್‌ನಲ್ಲಿ ಸೋಲು ಕಂಡರು. ಲಖನೌ ತಂಡದ ನಾಯಕ ಕೆಎಲ್‌ ರಾಹುಲ್‌ ಒಂದು ಕ್ಷಣವೂ ಯೋಚಿಸದೇ ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ಮಾಡಿದ್ದರು. ಚೆನ್ನೈ ಪರವಾಗಿ ರುತುರಾಜ್‌ ಗಾಯಕ್ವಾಡ್‌ ಕೇವಲ 25 ಎಸೆತಗಳಲ್ಲಿ ಅಬ್ಬರದ ಅರ್ಧಶತಕ ಬಾರಿಸಿ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದರು. ಇವರಿಗೆ ತಾವೇನು ಕಮ್ಮಿ ಎನ್ನುವಂತೆ ಬ್ಯಾಟಿಂಗ್‌ ಮಾಡಿದ ಡೆವೋನ್‌ ಕಾನ್ವೆ 29 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್‌ಗಳಿದ್ದ 47 ರನ್‌ ಸಿಡಿಸಿದರು. ಅದರಲ್ಲೂ ಕೃನಾಲ್‌ ಪಾಂಡ್ಯ ಓವರ್‌ನಲ್ಲಿ ಸತತ 2 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಚೆನ್ನೈ ತಂಡ 8ನೇ ಓವರ್‌ನಲ್ಲಿಯೆ 100 ರನ್‌ಗಳ ಗಡಿ ದಾಟಿತ್ತು.

WATCH: ಪಂದ್ಯ ಬಿಟ್ಟು ನಾಯಿ ಹಿಡಿಯೋಕೆ ಹೋದ ಅಂಪೈರ್‌!

ಈ ವೇಳೆ ದಾಳಿಗಿಳಿದ ರವಿ ಬಿಷ್ಣೋಯ್‌ ತಮ್ಮ ಮೊದಲ ಎಸೆತದಲ್ಲಿಯೇ ರುತುರಾಜ್‌ ಗಾಯಕ್ವಾಡ್‌ ವಿಕೆಟ್‌ ಉರುಳಿಸಿದರು. ನಂತರದ ಓವರ್‌ನಲ್ಲಿ ಡೆನೋವ್‌ ಕಾನ್ವೆ, ಕೃನಾಲ್‌ ಪಾಂಡ್ಯ ಹಿಡಿದ ಅತ್ಯಾಕರ್ಷಕ ಕ್ಯಾಚ್‌ನ ಕಾರಣದಿಮದ ಮಾರ್ಕ್‌ವುಡ್‌ಗೆ ವಿಕೆಟ್‌ ನೀಡಿದರು. ಆ ನಂತರ ಭಡ್ತಿ ಪಡೆದು ಬಂದು ಆಡಿದ ಶಿವಂ ದುಬೆ, ಆರಂಭದಲ್ಲಿ ಬ್ಯಾಟಿಂಗ್‌ ಮಾಡಲು ಒದ್ದಾಟ ನಡೆಸಿದರೂ, ಔಟಾಗುವ ಮುನ್ನ ಎದುರಿಸಿದ ನಾಲ್ಕು ಎಸೆತಗಳಲ್ಲಿ 22 ರನ್‌ ಸಿಡಿಸುವ ಮೂಲಕ ಗಮನಸೆಳೆದರು. ಇದರಲ್ಲಿ ಮೂರು ಸಿಕ್ಸರ್ ಹಾಗೂ 1 ಬೌಂಡರಿ ಸೇರಿದ್ದವು. ರವಿ ಬಿಷ್ಣೋಯ್‌ ಇವರ ವಿಕೆಟ್‌ಅನ್ನು ಉರುಳಿಸಿದರು. ನಂತರ ಕ್ರೀಸ್‌ಗಿಳಿದ ಮೊಯಿನ್‌ ಅಲಿ ಆವೇಶ್‌ ಖಾನ್‌ಗೆ ಹ್ಯಾಟ್ರಿಕ್‌ ಬೌಂಡರಿಗಳನ್ನು ಬಾರಿಸಿದ್ದರು.

IPL 2023: ಟಾಸ್‌ ಗೆದ್ದ ಲಖನೌ ಸೂಪರ್‌ ಜೈಂಟ್ಸ್‌, ಬೌಲಿಂಗ್‌ ಆಯ್ಕೆ!

ಕೊನೆಯ ಐದು ಎಸೆತಗಳಿರುವಾಗ ಮೈದಾನಕ್ಕೆ ಇಳಿದ ಚೆನ್ನೈ ನಾಯಕ ಎಂಎಸ್‌ ಧೋನಿ, ಮಾರ್ಕ್‌ವುಡ್‌ನ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿ ಅಭಿಮಾನಿಗಳನ್ನು ರಂಜಿಸಿದರು. ಥರ್ಡ್‌ಮ್ಯಾನ್‌ನಲ್ಲಿ ಆಕರ್ಷಕವಾಗಿ ಸಿಕ್ಸರ್‌ಗಟ್ಟಿದ ಧೋನಿ, ಮರು ಎಸೆತವನ್ನು ಡೀಪ್‌ಸ್ಕ್ವೇರ್‌ ಲೆಗ್‌ನತ್ತ ಸ್ಟ್ಯಾಂಡ್‌ಗೆ ತಳ್ಳಿದಾಗ ಇಡೀ ಸ್ಟೇಡಿಯಂನಲ್ಲಿ ಆದ ರೋಮಾಂಚನಕ್ಕೆ ಲೆಕ್ಕವೇ ಇರಲಿಲ್ಲ. ಅದರೊಂದಿಗೆ ಎಂಎಸ್‌ ಧೋನಿ ಐಪಿಎಲ್‌ನಲ್ಲಿ ತಮ್ಮ 5 ಸಾವಿರ ರನ್‌ ಅನ್ನೂ ಪೂರೈಸಿದರು. ಮೂರನೇ ಎಸೆತವನ್ನು ಸಿಕ್ಸರ್‌ಗಟ್ಟುವ ಪ್ರಯತ್ನ ಮಾಡಿದ ಧೋನಿ, ರವಿ ಬಿಷ್ಣೋಯಿಗೆ ಕ್ಯಾಚ್‌ ನೀಡಿ ಹೊರನಡೆದರು,