ಚೆಪಾಕ್ ಮೈದಾನದಲ್ಲಿ ಚೆನ್ನೈ-ಕೋಲ್ಕತಾ ಮುಖಾಮುಖಿಬಹುತೇಕ ಪ್ಲೇ ಆಫ್ ಹಂತವನ್ನು ಖಚಿತಪಡಿಸಿಕೊಂಡಿರುವ ಸಿಎಸ್‌ಕೆಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಕೆಕೆಆರ್
ಚೆನ್ನೈ(ಮೇ.14): ಈ ಬಾರಿ ಪ್ಲೇ-ಆಫ್ ತಲುಪುವ ನೆಚ್ಚಿನ ತಂಡ ಎನಿಸಿಕೊಂಡಿದ್ದರೂ ಇನ್ನಷ್ಟೇ ತನ್ನ ಸ್ಥಾನ ಖಚಿತಪಡಿಸಿಕೊಳ್ಳಬೇಕಿರುವ ಚೆನ್ನೈ ಸೂಪರ್ ಕಿಂಗ್ಸ್, ಶನಿವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವು ಎರಡೂ ತಂಡಗಳ ಪಾಲಿಗೆ ಸಾಕಷ್ಟು ಮಹತ್ವವಹಿಸಿದ್ದು ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಸ್ಟೇಡಿಯಂ ಆತಿಥ್ಯ ವಹಿಸಿದೆ.
12 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 15 ಅಂಕ ಸಂಪಾದಿಸಿರುವ ಚೆನ್ನೈಗೆ ಅಗ್ರ-2ರಲ್ಲಿ ಉಳಿದು ಕ್ವಾಲಿಫೈಯರ್-1ಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳುವ ಅವಕಾಶವಿದೆ. ಹೀಗಾಗಬೇಕಾದರೆ ಉಳಿದೆರಡು ಪಂದ್ಯಗಳನ್ನು ಗೆಲ್ಲಬೇಕು. ಈ ಪಂದ್ಯ ಗೆದ್ದರೆ ಗುಜರಾತ್ ಟೈಟಾನ್ಸ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದು, ಒಂದು ವೇಳೆ ಸೋತರೂ ಕೊನೆ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್ಗೇರಬಹುದು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ, ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ಅಬ್ಬರಿಸುತ್ತಿದ್ದಾರೆ. ಇನ್ನು ಮೋಯಿನ್ ಅಲಿ ಬ್ಯಾಟಿಂಗ್‌ನಲ್ಲಿ ಕೊಂಚ ಲಯಕ್ಕೆ ಬರಬೇಕಿದ್ದು, ನಾಯಕ ಧೋನಿ ಕೊನೆಯಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಇನ್ನು ಬೌಲರ್‍ಗಳಾದ ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಮತೀಶ್ ಪತಿರಣ ಮಾರಕ ದಾಳಿ ನಡೆಸುತ್ತಿರುವುದು ಚೆನ್ನೈ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
IPL 2023 ಆರ್ಸಿಬಿಗೆ ಡು ಆರ್ ಡೈ ಪಂದ್ಯ: ರಾಜಸ್ಥಾನ ಎದುರಾಳಿ
ಮತ್ತೊಂದೆಡೆ ಕೋಲ್ಕತಾ 12ರಲ್ಲಿ ಕೇವಲ 10 ಅಂಕ ಸಂಪಾದಿಸಿದ್ದು, ಗೆದ್ದರೂ ನಾಕೌಟ್ಗೇರಬೇಕಿದ್ದರೆ ಪವಾಡ ನಡೆಯಬೇಕು. ಹೀಗಾಗಿ ತಂಡಕ್ಕಿದು ಪ್ರತಿಷ್ಠೆಯ ಪಂದ್ಯ. ಬಲಿಷ್ಠ ಚೆನ್ನೈ ಎದುರು ಗೆಲುವು ಸಾಧಿಸಬೇಕಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ ಪರ ಜೇಸನ್ ರಾಯ್, ರೆಹಮನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್‌ನಲ್ಲಿ ಆಸರೆಯಾಗಬೇಕಿದೆ. ಇನ್ನು ಆಲ್ರೌಂಡರ್ ರಸೆಲ್, ಶಾರ್ದೂಲ್ ಠಾಕೂರ್ ಹಾಗೂ ನರೈನ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಆಸರೆಯಾಗಬೇಕಿದೆ. ಇನ್ನು ಬೌಲರ್‍ಗಳಾದ ವರುಣ್ ಚಕ್ರವರ್ತಿ, ಸುಯಾಶ್ ಶರ್ಮಾ, ಉಮೇಶ್ ಯಾದವ್ ಮಾರಕ ದಾಳಿ ನಡೆಸಬೇಕಿದೆ.
ಸಂಭಾವ್ಯ ತಂಡಗಳು ಹೀಗಿವೆ ನೋಡಿ:
ಚೆನ್ನೈ ಸೂಪರ್ ಕಿಂಗ್ಸ್:
ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೋಯಿನ್ ಅಲಿ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ&ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ, ಮತೀಶ್ ಪತಿರಣ.
ಕೋಲ್ಕತಾ ನೈಟ್ ರೈಡರ್ಸ್:
ಜೇಸನ್ ರಾಯ್, ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಉಮೇಶ್ ಯಾದವ್, ಸುಯಾಶ್ ಶರ್ಮಾ, ವರುಣ್ ಚಕ್ರವರ್ತಿ.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
