ಡೆಲ್ಲಿ ಕ್ಯಾಪಿಟಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರುಆಕರ್ಷಕ ಅರ್ಧಶತಕ ಚಚ್ಚಿದ ವಿರಾಟ್ ಕೊಹ್ಲಿತಲಾ 2 ವಿಕೆಟ್ ಕಬಳಿಸಿದ ಮಾರ್ಷ್‌, ಕುಲ್ದೀಪ್

ಬೆಂಗಳೂರು(ಏ.15): ವಿರಾಟ್ ಕೊಹ್ಲಿ ಸ್ಪೋಟಕ ಅರ್ಧಶತಕದ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 7 ವಿಕೆಟ್‌ ಕಳೆದುಕೊಂಡು 174 ರನ್ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ಗೆ ಸವಾಲಿನ ಗುರಿ ನೀಡಿದೆ. ಡೆಲ್ಲಿ ಪರ ಮಿಚೆಲ್ ಮಾರ್ಷ್ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿ ಬೃಹತ್‌ ಮೊತ್ತ ಗಳಿಸುವ ಆರ್‌ಸಿಬಿ ಆಸೆಗೆ ತಣ್ಣೀರೆರಚಿದರು.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ನಾಯಕ ಫಾಫ್ ಡು ಪ್ಲೆಸಿಸ್‌ ಹಾಗೂ ವಿರಾಟ್ ಕೊಹ್ಲಿ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ 4.4 ಓವರ್‌ಗಳಲ್ಲಿ ಈ ಜೋಡಿ 42 ರನ್‌ಗಳ ಜತೆಯಾಟ ನಿಭಾಯಿಸಿತು. ಕೇವಲ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 22 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಫಾಫ್‌, ಮಿಚೆಲ್ ಮಾರ್ಷ್‌ ಬೌಲಿಂಗ್‌ನಲ್ಲಿ ಅಮನ್‌ ಹಕೀಂ ಖಾನ್‌ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್‌ ಸೇರಿದರು. 

ಇನ್ನು ಇದಾದ ಬಳಿಕ ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್‌ ಲೋಮ್ರಾರ್‌ ಜೋಡಿ ಚುರುಕಿನ 47 ರನ್‌ಗಳ ಜತೆಯಾಟ ನಿಭಾಯಿಸಿತು. ಕೇವಲ 33 ಎಸೆತಗಳಲ್ಲಿ ಈ ಜೋಡಿ 47 ರನ್‌ಗಳ ಜತೆಯಾಟವಾಡಿತು. ಸ್ಪೋಟಕ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ, ಮೊತ್ತೊಂದು ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ವಿರಾಟ್ ಕೇವಲ 34 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 50 ರನ್ ಬಾರಿಸಿ ಲಲಿತ್ ಯಾದವ್ ಬೌಲಿಂಗ್‌ನಲ್ಲಿ ಯಶ್‌ ಧುಳ್‌ಗೆ ಸುಲಭ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ಇನ್ನು ಇದಾಗಿ ಕೆಲ ಹೊತ್ತಿನಲ್ಲೇ ಮಹಿಪಾಲ್ ಲೋಮ್ರಾರ್(26) ಕೂಡಾ ಪೆವಿಲಿಯನ್ ಹಾದಿ ಹಿಡಿದರು.

Scroll to load tweet…

IPL 2023: ಆರ್‌ಸಿಬಿ ಎದುರು ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ, ಕನ್ನಡಿಗ ಪಾದಾರ್ಪಣೆ.!

ಇನ್ನು ಕಳೆದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಕೇವಲ 14 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 24 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗಿಳಿದ ಹರ್ಷಲ್ ಪಟೇಲ್ ಒಂದು ಸಿಕ್ಸರ್ ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇದರ ಬೆನ್ನಲ್ಲೇ ಗ್ಲೆನ್‌ ಮ್ಯಾಕ್ಸ್‌ವೆಲ್ ಹಾಗೂ ದಿನೇಶ್ ಕಾರ್ತಿಕ್‌ ಕೂಡಾ ವಿಕೆಟ್‌ ಒಪ್ಪಿಸುವ ಮೂಲಕ ಸತತ ಮೂರು ಎಸೆತಗಳಲ್ಲಿ ಆರ್‌ಸಿಬಿ ಮೂರು ವಿಕೆಟ್ ಕಳೆದುಕೊಂಡಿತು.

ಇನ್ನು ಕೊನೆಯಲ್ಲಿ ಅನೂಜ್ ರಾವತ್‌ ಹಾಗೂ ಶಹಬಾಜ್ ಅಹಮ್ಮದ್ 7ನೇ ವಿಕೆಟ್‌ಗೆ ಮುರಿಯದ 42 ರನ್‌ಗಳ ಜತೆಯಾಟವಾಡುವ ಮೂಲಕ ತಂಡವು 170ರ ಗಡಿದಾಟುವಂತೆ ಮಾಡಿದರು.