* ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಲಖನೌ ನಾಯಕ ಕೆ ಎಲ್ ರಾಹುಲ್* ಕೆ ಎಲ್ ರಾಹುಲ್ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಸ್ಥಾನ* ಅವಕಾಶ ಸದುಪಯೋಗ ಪಡಿಸಿಕೊಳ್ಳುತ್ತಾರಾ ಕೆ ಎಲ್ ರಾಹುಲ್
ನವದೆಹಲಿ(ಮೇ.06): ಗಾಯದ ಸಮಸ್ಯೆಯಿಂದಾಗಿ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಹೊರಬಿದ್ದಿದ್ದಾರೆ. ಇದೀಗ ಕೆ ಎಲ್ ರಾಹುಲ್ ಬದಲಿಗೆ ಮತ್ತೋರ್ವ ಕನ್ನಡಿಗ ಕರುಣ್ ನಾಯರ್ ಅವರನ್ನು 50 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಯಶಸ್ವಿಯಾಗಿದೆ.
ಮೇ 01ರಂದು ಲಖನೌದ ಏಕಾನ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ಲಖನೌ ನಾಯಕ ಕೆ ಎಲ್ ರಾಹುಲ್ ಗಾಯಗೊಂಡಿದ್ದರು. ಪರಿಣಾಮ 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಲೂ ಹೊರಬಿದ್ದಿದ್ದಾರೆ. ಇದೀಗ ಕೆ ಎಲ್ ರಾಹುಲ್, ತೊಡೆ ಸಂದಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಕೃನಾಲ್ ಪಾಂಡ್ಯ, ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಕೆ ಎಲ್ ರಾಹುಲ್, ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಭಾವನಾತ್ಮಾಕ ಸಂದೇಶ ರವಾನಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿಗಳ ಜತೆ ಸಾಕಷ್ಟು ಸಮಾಲೋಚನೆ ಮಾಡಿದ ಬಳಿಕ ಕೊನೆಗೂ ನಾನು ಶೀಘ್ರದಲ್ಲಿಯೇ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರ್ಧಾರಕ್ಕೆ ಬಂದಿದ್ದೇನೆ. ಮುಂಬರುವ ವಾರಗಳಲ್ಲಿ ನಾನು ಪುನಶ್ಚೇತನಗೊಳ್ಳಲು ಹಾಗೂ ಚೇತರಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ. ಇದೊಂದು ಕಠಿಣ ನಿರ್ಧಾರವಾಗಿದ್ದು, ಸಂಪೂರ್ಣ ಗುಣಮುಖರಾಗುವ ನಿಟ್ಟಿನಲ್ಲಿ ಇದೊಂದು ಸರಿಯಾದ ತೀರ್ಮಾನ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
IPL, ಟೆಸ್ಟ್ ವಿಶ್ವಕಪ್‌ನಿಂದ ಹೊರಬಿದ್ದ ಕೆ ಎಲ್ ರಾಹುಲ್..! ಭಾವನಾತ್ಮಕ ಸಂದೇಶ ರವಾನಿಸಿದ ಕನ್ನಡಿಗ
ಕನ್ನಡಿಗ ಕರುಣ್ ನಾಯರ್, ಇದುವರೆಗೂ 76 ಐಪಿಎಲ್ ಪಂದ್ಯಗಳನ್ನಾಡಿ 1496 ರನ್ ಬಾರಿಸಿದ್ದಾರೆ. ಈ ಮೊದಲು ಕರುಣ್ ನಾಯರ್, ಡೆಲ್ಲಿ ಡೇರ್‌ಡೆವಿಲ್ಸ್(ಈಗ ಡೆಲ್ಲಿ ಕ್ಯಾಪಿಟಲ್ಸ್), ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್), ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ. ಪ್ರತಿಭಾನ್ವಿತ ಬ್ಯಾಟರ್ ಕರುಣ್ ನಾಯರ್, ಈ ಆವೃತ್ತಿಯೂ ಸೇರಿದಂತೆ ಮೂರು ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕರುಣ್ ನಾಯರ್ ಮೂರು ತಂಡವನ್ನು ಪ್ರತಿನಿಧಿಸುವಂತಾಗಿದೆ
ಕಳೆದ ಡಿಸೆಂಬರ್‌ನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಅನುಭವಿ ಬ್ಯಾಟರ್ ಆಗಿರುವ ಕರುಣ್ ನಾಯರ್ ಅನ್‌ಸೋಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದ್ದರು. ಕರುಣ್ ನಾಯರ್ 2022-23ರಿಂದೀಚೆಗೆ ಅವರು ಯಾವುದೇ ಮಾದರಿಯ ಕ್ರಿಕೆಟ್ ಆಡಿರಲಿಲ್ಲ. ಇನ್ನು ಕರುಣ್ ನಾಯರ್ ಅವರನ್ನು ಕರ್ನಾಟಕ ತಂಡದಿಂದಲೂ ಕೈಬಿಡಲಾಗಿತ್ತು. ಇದೆಲ್ಲದರ ನಡುವೆ ಡೇವಿಡ್ ವಿಲ್ಲಿ ತಂಡದಿಂದ ಹೊರಬಿದ್ದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕರುಣ್ ನಾಯರ್‌ಗೆ ಮಣೆಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿತ್ತು. ಆದರೆ ಕರುಣ್ ನಾಯರ್ ಬದಲಿಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕೇದಾರ್ ಜಾಧವ್‌ಗೆ ತಂಡದಲ್ಲಿ ಮಣೆ ಹಾಕಿತ್ತು.
ಕಳೆದ ಡಿಸೆಂಬರ್ 10ರಂದು ಕರುಣ್ ನಾಯರ್, ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು ಎಂದು ಟ್ವೀಟ್ ಮಾಡಿದ್ದರು. ಇದೀಗ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಕರುಣ್ ನಾಯರ್‌ಗೆ ಮಣೆ ಹಾಕಿದ್ದು, ಈ ಅವಕಾಶವನ್ನು ಕರುಣ್ ನಾಯರ್ ಯಾವ ರೀತಿ ಬಳಸಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಇದುವರೆಗೂ 10 ಪಂದ್ಯಗಳನ್ನಾಡಿ 5 ಗೆಲುವು 4 ಸೋಲು ಹಾಗೂ ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ. ಸದ್ಯ ಲಖನೌ ತಂಡವು 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
