Asianet Suvarna News Asianet Suvarna News

IPL 2023: ಬಟ್ಲರ್-ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್‌, ಡೆಲ್ಲಿಗೆ ರಾಯಲ್ಸ್‌ ಕಠಿಣ ಗುರಿ..!

ಡೆಲ್ಲಿ ಕ್ಯಾಪಿಟಲ್ಸ್ ಎದುರು ಸ್ಪೋಟಕ ಅರ್ಧಶತಕ ಚಚ್ಚಿದ ಬಟ್ಲರ್-ಜೈಸ್ವಾಲ್
ಡೆಲ್ಲಿ ಎದುರು 4 ವಿಕೆಟ್ ಕಳೆದುಕೊಂಡು 199 ರನ್ ಬಾರಿಸಿದ ರಾಯಲ್ಸ್‌
ಹ್ಯಾಟ್ರಿಕ್ ಸೋಲಿನಿಂದ ಪಾರಾಗುತ್ತಾ ಡೆಲ್ಲಿ ಕ್ಯಾಪಿಟಲ್ಸ್‌

IPL 2023 Jos Buttler Yashasvi Jaiswal blasting fifty powers Rajasthan Royals set 200 runs target to Delhi Capitals kvn
Author
First Published Apr 8, 2023, 5:23 PM IST

ಗುವಾಹಟಿ(ಏ.08): ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್‌ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು 4 ವಿಕೆಟ್ ಕಳೆದುಕೊಂಡು 199 ರನ್ ಬಾರಿಸಿದೆ. ಡೇವಿಡ್‌ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹ್ಯಾಟ್ರಿಕ್ ಸೋಲಿನಿಂದ ಬಚಾವಾಗಲು ಪ್ರತಿ ಓವರ್‌ಗೆ 10ರ ಸರಾಸರಿಯಂತೆ 200 ರನ್ ಬಾರಿಸಬೇಕಾದ ಒತ್ತಡಕ್ಕೆ ಸಿಲುಕಿದೆ.

ಇಲ್ಲಿನ ಬರ್ಸಾಪರ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಲ್ಲೇ 5 ಬೌಂಡರಿ ಸಿಡಿಸುವ ಮೂಲಕ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ಓವರ್‌ನಲ್ಲೇ 50 ರನ್‌ಗಳನ್ನು ಸಿಡಿಸಿದರು. ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲಿ 98 ರನ್‌ಗಳ ಭರ್ಜರಿ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಡೆಲ್ಲಿ ವೇಗಿ ಮುಕೇಶ್ ಕುಮಾರ್ ಯಶಸ್ವಿಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ ಕೇವಲ 31 ಎಸೆತಗಳಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 60 ರನ್ ಬಾರಿಸಿ ಪೆವಿಲಿಯನ್ ಸೇರಿದರು.

IPL 2023: ರಾಜಸ್ಥಾನ ರಾಯಲ್ಸ್‌ ಎದುರು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ

ಇನ್ನು ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ನಾಯಕ ಸಂಜು ಸ್ಯಾಮ್ಸನ್‌ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ನಿಗಟ್ಟುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಇನ್ನು ರಿಯಾನ್‌ ಪರಾಗ್ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ರೋವ್ಮನ್ ಪೋವೆಲ್ ಅವಕಾಶ ನೀಡಲಿಲ್ಲ. ಪರಾಗ್ 7 ರನ್ ಬಾರಿಸಿ ಕ್ಲೀನ್ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಜೋಸ್ ಬಟ್ಲರ್‌, ಮತ್ತೊಂದು ಆಕರ್ಷಕ ಇನಿಂಗ್ಸ್‌ ಆಡಿದರು. ಬಟ್ಲರ್ 51 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 79 ರನ್ ಬಾರಿಸಿ ಮುಕೇಶ್ ಕುಮಾರ್‌ಗೆ ಎರಡನೇ ಬಲಿಯಾದರು. ಇನ್ನು ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಶಿಮ್ರೊನ್ ಹೆಟ್ಮೇಯರ್ ಕೇವಲ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 39 ರನ್ ಸಿಡಿಸಿದರೆ, ದೇವದತ್ ಪಡಿಕ್ಕಲ್ ಬದಲಿಗೆ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ಧೃವ್ ಜ್ವರೆಲ್ 3 ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ ಅಜೇಯ 8 ರನ್ ಬಾರಿಸಿ ತಂಡದ ಮೊತ್ತವನ್ನು ಇನ್ನೂರರ ಸಮೀಪಕ್ಕೆ ಕೊಂಡೊಯ್ಯದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಮುಕೇಶ್ ಕುಮಾರ್ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಕುಲ್ದೀಪ್ ಯಾದವ್ ಹಾಗೂ ರೋವ್ಮನ್ ಪೋವೆಲ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

Follow Us:
Download App:
  • android
  • ios