ಕೆಕೆಆರ್ ಎದುರು ಸುಲಭ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್‌ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ ಇಶಾನ್ ಕಿಶನ್14 ಎಸೆತ ಬಾಕಿ ಇರುವಂತೆ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್
ಮುಂಬೈ(ಏ.16): ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಬಾರಿಸಿದ ಸ್ಪೋಟಕ ಅರ್ಧಶತಕ ಹಾಗೂ ಸೂರ್ಯಕುಮಾರ್ ಯಾದವ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ಎದುರು ಮುಂಬೈ ಇಂಡಿಯನ್ಸ್ ತಂಡವು 6 ವಿಕೆಟ್ ಸುಲಭ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೇರಿದೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ಸವಾಲಿನ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಕ್ಷೇತ್ರರಕ್ಷಣೆ ಮಾಡುವ ವೇಳೆ ಮೈದಾನದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ, ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಕಣಕ್ಕಿಳಿದು, ಇಶಾನ್ ಕಿಶನ್ ಜತೆ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ರೋಹಿತ್-ಇಶಾನ್ ಜೋಡಿ ಕೇವಲ 4.5 ಓವರ್‌ಗಳಲ್ಲಿ 65 ರನ್‌ಗಳ ಜತೆಯಾಟವಾಡಿತು. ರೋಹಿತ್ ಶರ್ಮಾ, 13 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 20 ರನ್ ಬಾರಿಸಿ ಸುಯಾಶ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.
ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಸಿಡಿಲಬ್ಬರದ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇಶಾನ್ ಕಿಶನ್ ಕೇವಲ 25 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 58 ರನ್ ಬಾರಿಸಿ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
IPL 2023: ವೆಂಕಿಯಿಂದ ಬೆಂಕಿ ಶತಕ, ಮುಂಬೈಗೆ ಬೃಹತ್ ಗುರಿ ನೀಡಿದ ಕೆಕೆಆರ್..!
ಫಾರ್ಮ್‌ಗೆ ಮರಳಿದ ಸೂರ್ಯ: ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ರನ್‌ಗಳಿಸಲು ಪರದಾಡಿದ್ದ ಸೂರ್ಯಕುಮಾರ್ ಯಾದವ್, ಕೊನೆಗೂ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ತಿಲಕ್ ವರ್ಮಾ ಜತೆಗೂಡಿ ಮೂರನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಜೋಡಿ ಕೇವಲ 38 ಎಸೆತಗಳಲ್ಲಿ 60 ರನ್‌ಗಳ ಜತೆಯಾಟವಾಡಿತು. ತಿಲಕ್ ವರ್ಮಾ ಕೇವಲ 25 ಎಸೆತಗಳಲ್ಲಿ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 43 ರನ್ ಬಾರಿಸಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಟಿಮ್ ಡೇವಿಡ್ ಕೇವಲ 13 ಎಸೆತಗಳಲ್ಲಿ ಅಜೇಯ 24 ರನ್ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿಯೇ ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್, ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ಎನ್ ಜಗದೀಶನ್ 5 ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮುನ್ನವೇ ಕ್ಯಾಮರೋನ್ ಗ್ರೀನ್ ಬೌಲಿಂಗ್‌ನಲ್ಲಿ ಹೃತ್ತಿಕ್ ಶೊಕೀನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ ಮತ್ತೊಮ್ಮೆ ಅಲ್ಪಮೊತ್ತಕ್ಕೆ(08) ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ನಾಯಕ ನಿತೀಶ್ ರಾಣಾ(05) ಕೂಡಾ ಎರಡಂಕಿ ಮೊತ್ತ ದಾಖಲಿಸಲು ವಿಫಲವಾದರು.
ವೆಂಕಟೇಶ್ ಅಯ್ಯರ್ ಕೆಚ್ಚೆದೆಯ ಶತಕ: ಒಂದು ಕಡೆ ವಿಕೆಟ್ ಉರುಳಿದರೂ, ಮತ್ತೊಂದೆಡೆ ನಿರ್ಭಯವಾಗಿ ಬ್ಯಾಟ್ ಬೀಸಿದ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್, ಆಕರ್ಷಕ ಶತಕ ಸಿಡಿಸಿ ಮಿಂಚಿದರು. ವೆಂಕಟೇಶ್ ಅಯ್ಯರ್ ಒಟ್ಟು 49 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ವೆಂಕಟೇಶ್ ಅಯ್ಯರ್, 51 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 104 ರನ್ ಬಾರಿಸಿ ರಿಲೆ ಮೆರಿಡಿತ್ ಬೌಲಿಂಗ್‌ನಲ್ಲಿ ಡುಯಾನ್ ಯಾನ್ಸೆನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಇನ್ನುಳಿದಂತೆ ಕೊನೆಯಲ್ಲಿ ಶಾರ್ದೂಲ್ ಠಾಕೂರ್(13), ರಿಂಕು ಸಿಂಗ್(18) ಹಾಗೂ ಆಂಡ್ರೆ ರಸೆಲ್ ಅಜೇಯ 20 ರನ್ ಬಾರಿಸುವ ಮೂಲಕ ತಂಡ 180ರ ಗಡಿ ದಾಟಿಸಲು ನೆರವಾದರು.
