ಗುಜರಾತ್ ಟೈಟಾನ್ಸ್‌-ಕೋಲ್ಕತಾ ನೈಟ್ ರೈಡರ್ಸ್‌ ನಡುವಿನ ಪಂದ್ಯಕ್ಕೆ ಮೋದಿ ಸ್ಟೇಡಿಯಂ ಆತಿಥ್ಯಗುಜರಾತ್ ಟೈಟಾನ್ಸ್ ಪರ ನಾಯಕ ಹಾರ್ದಿಕ್ ಪಾಂಡ್ಯ ಅಲಭ್ಯಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಎರಡು ಮಹತ್ವದ ಬದಲಾವಣೆ

ಅಹಮದಾಬಾದ್‌(ಏ.09): 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್‌ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಗುಜರಾತ್ ಟೈಟಾನ್ಸ್‌ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಆಯ್ಕೆಗೆ ಅಲಭ್ಯರಾಗಿದ್ದು, ಪಾಂಡ್ಯ ಬದಲಿಗೆ ಕನ್ನಡಿಗ ಅಭಿನವ್ ಮನೋಹರ್ ತಂಡ ಕೂಡಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ರಶೀದ್ ಖಾನ್ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ಕೋಲ್ಕತಾ ನೈಟ್ ರೈಡರ್ಸ್‌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಟಿಮ್ ಸೌಥಿ ಬದಲಿಗೆ ಲಾಕಿ ಫರ್ಗ್ಯೂಸನ್‌, ಮನ್ದೀಪ್ ಸಿಂಗ್ ಬದಲಿಗೆ ಎನ್‌ ಜಗದೀಶನ್ ಕೆಕೆಆರ್ ತಂಡ ಕೂಡಿಕೊಂಡಿದ್ದಾರೆ.

ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಗೆಲುವು ಸಾಧಿಸಿ ಬೀಗುತ್ತಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದೆ. ಗುಜರಾತ್ ಟೈಟಾನ್ಸ್‌ನ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್‌, ವೃದ್ದಿಮಾನ್ ಸಾಹ ಹಾಗೂ ಸಾಯಿ ಸುದರ್ಶನ್ ಒಳ್ಳೆಯ ಲಯದಲ್ಲಿದ್ದಾರೆ. ಇನ್ನು ಮಿಲ್ಲರ್ ತಂಡ ಸೇರ್ಪಡೆ ಗುಜರಾತ್ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲವಾಗುವಂತೆ ಮಾಡಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ತ್ರಿವಳಿ ವೇಗಿಗಳಾದ ಮೊಹಮ್ಮದ್ ಶಮಿ, ಅಲ್ಜೆರಿ ಜೋಸೆಫ್‌ ಹಾಗೂ ಜೋಶ್ವಾ ಲಿಟ್ಲ್‌ ತಮ್ಮ ಮೊನಚಾದ ದಾಳಿ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಮತ್ತೊಮ್ಮೆ ಕಾಡಲು ಸಜ್ಜಾಗಿದ್ದಾರೆ. ಇನ್ನು ವಿಶ್ವದರ್ಜೆಯ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಹಾಗೂ ರಾಹುಲ್ ತೆವಾಟಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. 

ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ಸೋಲುಂಡು, ಆ ಬಳಿಕ ತವರಿನಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಎದುರು 81 ರನ್‌ಗಳ ಜಯ ಸಾಧಿಸಿ ಗೆಲುವಿನ ಲಯಕ್ಕೆ ಮರಳಿರುವ ನಿತೀಶ್ ರಾಣಾ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್‌ ಮತ್ತೊಂದು ಗೆಲುವಿನ ಕನವರಿಕೆಯಲ್ಲಿದೆ. ಕಳೆದ ಪಂದ್ಯದಲ್ಲಿ ಅಗ್ರಕ್ರಮಾಂಕದ ವೈಫಲ್ಯದ ಹೊರತಾಗಿಯೂ ಕೊನೆಯಲ್ಲಿ ಶಾರ್ದೂಲ್ ಠಾಕೂರ ಸಿಡಿಲಬ್ಬರದ ಅರ್ಧಶತಕ ಹಾಗೂ ರಿಂಕು ಸಿಂಗ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಕಲೆಗಹಾಕಲು ನೆರವಾಗಿದ್ದರು. ಇನ್ನು ಬೌಲಿಂಗ್‌ನಲ್ಲಿ ತ್ರಿವಳಿ ಮಿಸ್ಟ್ರಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಸುಯಾಶ್ ಶರ್ಮಾ, ಆರ್‌ಸಿಬಿಯ 9 ವಿಕೆಟ್ ಉರುಳಿಸಿದ್ದರು. ಹೀಗಾಗಿ ಗುಜರಾತ್ ಬ್ಯಾಟರ್‌ಗಳ ಎದುರು ಕೆಕೆಆರ್ ಬೌಲರ್‌ಗಳು ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ

ತಂಡಗಳು ಹೀಗಿವೆ ನೋಡಿ

ಗುಜರಾತ್‌ ಟೈಟಾನ್ಸ್: ವೃದ್ದಿಮಾನ್‌ ಸಾಹ, ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್‌, ವಿಜಯ್ ಶಂಕರ್, ಡೇವಿಡ್‌ ಮಿಲ್ಲರ್‌, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್‌ ಖಾನ್(ನಾಯಕ), ಅಲ್ಜೆರಿ ಜೋಸೆಫ್‌, ಯಶ್ ದಯಾಳ್‌, ಮೊಹಮ್ಮದ್ ಶಮಿ.

ಕೆಕೆಆರ್‌: ರೆಹಮನುಲ್ಲಾ ಗುರ್ಬಾಜ್‌, ಎನ್ ಜಗದೀಶನ್‌, ನಿತೀಶ್‌ ರಾಣಾ(ನಾಯಕ), ರಿಂಕು ಸಿಂಗ್‌, ಆಂಡ್ರೆ ರಸೆಲ್‌, ಶಾರ್ದೂಲ್‌ ಠಾಕೂರ್, ಸುನಿಲ್‌ ನರೇನ್‌, ಉಮೇಶ್‌ ಯಾದವ್, ಸುಯಾಶ್ ಶರ್ಮಾ, ಲಾಕಿ ಫರ್ಗ್ಯೂಸನ್, ವರುಣ್‌ ಚಕ್ರವರ್ತಿ.

ಪಂದ್ಯ: ಮ.3.30ಕ್ಕೆ 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಸಿನಿಮಾ