ಲಖನೌ ಎದುರು ಭರ್ಜರಿ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್ಆಕರ್ಷಕ ಅರ್ಧಶತಕ ಸಿಡಿಸಿದ ಗಿಲ್, ಸಾಹ4 ವಿಕೆಟ್ ಕಬಳಿಸಿ ಮಿಂಚಿದ ಮೋಹಿತ್ ಶರ್ಮಾ

ಅಹಮದಾಬಾದ್‌(ಮೇ.07): ಶುಭ್‌ಮನ್‌ ಗಿಲ್‌, ವೃದ್ದಿಮಾನ್ ಸಾಹ ಸ್ಪೋಟಕ ಅರ್ಧಶತಕ ಹಾಗೂ ಮೋಯಿತ್ ಶರ್ಮಾ ಮಾರಕ ದಾಳಿಗೆ ತತ್ತರಿಸಿದ ಲಖನೌ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಕೇವಲ 171 ರನ್ ಗಳಿಸಲಷ್ಟೇ ಶಕ್ತವಾಗಿದೆ. ಇದರೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 56 ರನ್‌ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್‌ ಟೈಟಾನ್ಸ್‌ ಬಹುತೇಕ ಪ್ಲೇ ಆಫ್‌ಗೆ ಒಂದು ಹೆಜ್ಜೆಯಿಟ್ಟಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಠಿಣ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಕೈಲ್ ಮೇಯರ್ಸ್‌ ಹಾಗೂ ಕ್ವಿಂಟನ್ ಡಿ ಕಾಕ್‌ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 88 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಕೈಲ್ ಮೇಯರ್ಸ್‌ 32 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 48 ರನ್‌ ಬಾರಿಸಿ ಮೋಯಿತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ 11 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಸ್ಟೋನಿಸ್ ಕೂಡಾ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಕ್ವಿಂಟನ್ ಡಿ ಕಾಕ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 70 ರನ್‌ ಬಾರಿಸಿ ರಶೀದ್ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ನಿಕೋಲಸ್ ಪೂರನ್ ಕಮಾಲ್ ಮಾಡಬಹುದು ಎನ್ನುವ ನಿರೀಕ್ಷೆ ಕೂಡಾ ಹುಸಿಯಾಯಿತು. ಪೂರನ್ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಯುಷ್ ಬದೋನಿ 10 ಎಸೆತಗಳಲ್ಲಿ ಎರಡು ಸಿಕ್ಸರ್ ಸಹಿತ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಇತಿಹಾಸ ಬರೆದ ಪಾಂಡ್ಯ ಬ್ರದರ್ಸ್‌: ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಾಣ..!

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ವಿಕೆಟ್‌ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ ಹಾಗೂ ಶುಭ್‌ಮನ್‌ ಗಿಲ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಶತಕದ ಜತೆಯಾಟವಾಡಿ ಭದ್ರಬುನಾದಿ ಹಾಕಿಕೊಟ್ಟರು. ಆರಂಭದಲ್ಲಿ ವೃದ್ದಿಮಾನ್ ಸಾಹ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಈ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಅತಿವೇಗದ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಮೊದಲ 6 ಓವರ್‌ನಲ್ಲಿ ಗುಜರಾತ್ ತಂಡವು 78 ರನ್‌ಗಳ ಜತೆಯಾಟವಾಡಿತು.

ಮೊದಲ 10 ಓವರ್‌ಗಳಲ್ಲಿ ಟೈಟಾನ್ಸ್ ಪಡೆ ವಿಕೆಟ್ ನಷ್ಟವಿಲ್ಲದೇ 121 ರನ್ ಕಲೆಹಾಕಿತು. ಮೊದಲ ವಿಕೆಟ್‌ಗೆ ಗುಜರಾತ್ ಟೈಟಾನ್ಸ್ ತಂಡವು 12.1 ಓವರ್‌ಗಳಲ್ಲಿ 142 ರನ್‌ಗಳ ಜತೆಯಾಟವಾಡಿತು. ಕೊನೆಗೂ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಆವೇಶ್ ಖಾನ್ ಯಶಸ್ವಿಯಾದರು. ವೃದ್ದಿಮಾನ್ ಸಾಹ 43 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 81 ರನ್ ಬಾರಿಸಿ ಪ್ರೇರಕ್‌ ಮಂಕಡ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಇನ್ನು ಸಾಹ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ನಾಯಕ ಹಾರ್ದಿಕ್ ಪಾಂಡ್ಯ ಕೂಡಾ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಶುಭ್‌ಮನ್‌ ಗಿಲ್ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ ಎರಡನೇ ವಿಕೆಟ್‌ಗೆ ಕೇವಲ 23 ಎಸೆತಗಳಲ್ಲಿ 42 ರನ್‌ಗಳ ಜತೆಯಾಟ ನಿಭಾಯಿಸಿತು. ಸಾಹ ವಿಕೆಟ್‌ ಪತನದ ಬಳಿಕ ಶುಭ್‌ಮನ್‌ ಗಿಲ್‌ ಆಕ್ರಮಣಕಾರಿ ಆಟವಾಡಿದರು. ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ ಒಂದು ಬೌಂಡರಿ ಸಹಿತ ಎರಡು ಸಿಕ್ಸರ್ ಸಹಿತ 25 ರನ್ ಬಾರಿಸಿ ಮೊಯ್ಸಿನ್‌ ಖಾನ್‌ಗೆ ವಿಕೆಟ್ ಒಪ್ಪಿಸಿದರು.

ಗಿಲ್ ಶತಕ ಮಿಸ್‌: ಆರಂಭದಿಂದಲೂ ಮಿಂಚಿನ ಆಟವಾಡಿದ ಶುಭ್‌ಮನ್‌ ಗಿಲ್‌ ಕೊನೆಯ ತನಕ ಬ್ಯಾಟಿಂಗ್ ಮಾಡುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಶುಭ್‌ಮನ್ ಗಿಲ್ 51 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 7 ಮುಗಿಲೆತ್ತರದ ಶತಕದ ಸಹಿತ 94 ರನ್ ಬಾರಿಸಿ ಅಜೇಯ ರಾಗುಳಿದರು. ಇನ್ನು ಕೇವಲ 6 ರನ್ ಅಂತರದಲ್ಲಿ ಶತಕ ಸಿಡಿಸುವ ಅವಕಾಶದಿಂದ ವಂಚಿತರಾದರು.