* ಲಖನೌ ಸೂಪರ್ ಜೈಂಟ್ಸ್ ಎದುರು ಕೆಚ್ಚೆದೆಯ ಹೋರಾಟ ಮಾಡಿದ ರಿಂಕು ಸಿಂಗ್* ರಿಂಕು ಸಿಂಗ್ ಆಟಕ್ಕೆ ಮನಸೋತ ಲಖನೌ ಮೆಂಟರ್ ಗಂಭೀರ್* ಎಂತಹ ಅದ್ಭುತ ಪ್ರತಿಭೆ ಎಂದು ಗುಣಗಾನ ಮಾಡಿದ ಕೆಕೆಆರ್ ಮಾಜಿ ನಾಯಕ
ಕೋಲ್ಕತಾ(ಮೇ.21): ಈ ಬಾರಿಯ ಐಪಿಎಲ್‌ನಲ್ಲಿ ಗೆಲ್ಲಲು ಅಸಾಧ್ಯ ಎನ್ನುವಂತಹ ಹಲವು ಪಂದ್ಯಗಳನ್ನು ಪವಾಡ ಸದೃಶ ರೀತಿಯಲ್ಲಿ ಗೆಲ್ಲಿಸಿಕೊಡುವಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ರತಿಭಾನ್ವಿಯ ಬ್ಯಾಟರ್ ರಿಂಕು ಸಿಂಗ್ ಯಶಸ್ವಿಯಾಗಿದ್ದಾರೆ. ಇನ್ನು ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲೂ ರಿಂಕು ಸಿಂಗ್ ದಿಟ್ಟ ಹೋರಾಟದ ಮೂಲಕ ಕೆಕೆಆರ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಕೆಕೆಆರ್ ಎದುರು ಲಖನೌ ಸೂಪರ್ ಜೈಂಟ್ಸ್ ತಂಡವು ಒಂದು ರನ್ ರೋಚಕ ಜಯ ಗಳಿಸಿತಾದರೂ, ರಿಂಕು ಸಿಂಗ್ ಕೆಚ್ಚೆದೆಯ ಹೋರಾಟಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಲಖನೌ ತಂಡದ ಮೆಂಟರ್ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡಾ ರಿಂಕು ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, ರಿಂಕು ಸಿಂಗ್‌ರ ಮತ್ತೊಂದು ಸ್ಫೋಟಕ ಆಟದ ಹೊರತಾಗಿಯೂ ಕೆಕೆಆರ್ ವಿರುದ್ಧ ಸೋಲಿನ ದವಡೆಯಿಂದ ಪಾರಾದ ಲಖನೌ ಸೂಪರ್ ಜೈಂಟ್ಸ್, ಸತತ 2ನೇ ಬಾರಿ ಪ್ಲೇ-ಆಫ್ ಪ್ರವೇಶಿಸಿದೆ. ಶನಿವಾರ ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಲಖನೌ 1 ರನ್ ರೋಚಕ ಗೆಲುವು ಸಾಧಿಸಿ, ಲೀಗ್ ಹಂತವನ್ನು 3ನೇ ಸ್ಥಾನದೊಂದಿಗೆ ಮುಕ್ತಾಯಗೊಳಿಸಿತು.
ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ ಆರಂಭಿಕ ಆಘಾತ ಕಂಡರೂ, ನಿಕೋಲಸ್ ಪೂರನ್‌ರ ಸಾಹಸದಿಂದ 20 ಓವರಲ್ಲಿ 8 ವಿಕೆಟ್‌ಗೆ 176 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. 73ಕ್ಕೆ 5 ವಿಕೆಟ್ ಕಳೆದುಕೊಂಡ ತಂಡವನ್ನು ಪೂರನ್ ತಮ್ಮ ಆಕರ್ಷಕ ಇನ್ನಿಂಗ್‌್ಸ (58 ರನ್, 30 ಎಸೆತ, 4 ಬೌಂಡರಿ, 5 ಸಿಕ್ಸರ್) ಮೂಲಕ ಮೇಲೆತ್ತಿದರು.
ಕಠಿಣ ಗುರಿ ಬೆನ್ನತ್ತಲು ಇಳಿದ ಕೆಕೆಆರ್‌ಗೆ ರಾಯ್ ಹಾಗೂ ವೆಂಕಿ ಅಯ್ಯರ್ 5.5 ಓವರಲ್ಲಿ 61 ರನ್ ಜೊತೆಯಾಟವಾಡಿ ಉತ್ತಮ ಆರಂಭ ಒದಗಿಸಿದರು. ಆದರೆ ಮಧ್ಯ ಓವರ್‌ಗಳಲ್ಲಿ ಕೆಕೆಆರ್ ಮಂಕಾಯಿತು. ಕೊನೆಯಲ್ಲಿ ರಿಂಕು 33 ಎಸೆತದಲ್ಲಿ 6 ಬೌಂಡರಿ, 4 ಸಿಕ್ಸರ್‌ನೊಂದಿಗೆ ಔಟಾಗದೆ 67 ರನ್ ಸಿಡಿಸಿದ್ದು ವ್ಯರ್ಥವಾಯಿತು.
IPL 2023 ರಿಂಕು ಸಿಂಗ್ ಭಾರತದ ಭವಿಷ್ಯದ ತಾರೆ ಎಂದು ಬಣ್ಣಿಸಿದ ಹರ್ಭಜನ್ ಸಿಂಗ್
ಇನ್ನು ರಿಂಕು ಆಟಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಗಂಭೀರ್, "ರಿಂಕು ಸಿಂಗ್ ಅವರಿಂದ ಎಂತಹ ಒಳ್ಳೆಯ ಪ್ರಯತ್ನ. ಅತ್ಯದ್ಭುತ ಪ್ರತಿಭೆ" ಎಂದು ಗಂಭೀರ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ರಿಂಕು ಸಿಂಗ್ ಪಾಲಿಗೆ ಅತ್ಯಂತ ಫಲಪ್ರದ ಟೂರ್ನಿ ಎನಿಸಿಕೊಂಡಿದೆ. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್, ಕೋಲ್ಕತಾ ನೈಟ್ ರೈಡರ್ಸ್ ಪರ 14 ಪಂದ್ಯಗಳನ್ನಾಡಿ 59.25ರ ಬ್ಯಾಟಿಂಗ್ ಸರಾಸರಿಯಲ್ಲಿ 149.52ರ ಸ್ಟ್ರೈಕ್‌ರೇಟ್‌ನಲ್ಲಿ 474 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳ ಸೇರಿವೆ.
