ಹಾಲಿ ಋತುವಿನ ಆರನೇ ಅರ್ಧಶತಕ ಹಾಗೂ ಒಟ್ಟಾರೆ ಐಪಿಎಲ್‌ನಲ್ಲಿ ಅರ್ಧಶತಕಗಳ ಫಿಫ್ಟಿ ಸಾಧನೆ ಮಾಡಿದ ವಿರಾಟ್ ಕೊಹ್ಲಿಯ ಮತ್ತೊಂದು ಮನಮೋಹಕ ಇನ್ನಿಂಗ್ಸ್ ಹಾಗೂ ಮಹಿಪಾಲ್ ಲೋಮ್ರರ್ ಬಾರಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ ಆರ್‌ಸಿಬಿ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ನವದೆಹಲಿ (ಮೇ.6): ತವರಿನ ಮೈದಾನದಲ್ಲಿ ಆಡುತ್ತಿದ್ದ ವಿರಾಟ್ ಕೊಹ್ಲಿ ಫುಲ್ ಖುಷ್ ಆಗಿದ್ದರು. ಅದಕ್ಕೆ ಕಾರಣ ಅವರ ಫಾರ್ಮ್ ಹಾಗೂ ಮೈದಾನದಲ್ಲಿದ್ದ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ. ಪಂದ್ಯಕ್ಕೂ ಮುನ್ನ ಅವರ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ, ಅವರ ಮುಂದೆ ತಮ್ಮ ಬತ್ತಳಿಕೆಯ ಅಸ್ತ್ರಗಳನ್ನು ಪ್ರಯೋಗಿಸಿದರು. ಅದರೊಂದಿಗೆ ಐಪಿಎಲ್‌ನಲ್ಲಿ 50 ಅರ್ಧಶತಕ ಸಿಡಿಸಿದ ದಾಖಲೆ ಹಾಗೂ ಐಪಿಎಲ್‌ನಲ್ಲಿ 7 ಸಾವಿರ ರನ್ ಗಡಿ ಮುಟ್ಟಿದ ದಾಖಲೆಯನ್ನು ಕೊಹ್ಲಿ ನಿರ್ಮಿಸಿದರು. ವಿರಾಟ್ ಕೊಹ್ಲಿ ಬಾರಿಸಿದ ಭರ್ಜರಿ ಅರ್ಧಶತಕ ಹಾಗೂ ಮಹಿಪಾಲ್ ಲೋಮ್ರರ್ ಬಾರಿಸಿದ ಐಪಿಎಲ್‌ನ ಚೊಚ್ಚಲ ಅರ್ಧಶತಕದ ನೆರವಿನಿಂದ ಆರ್‌ಸಿಬಿ ತಂಡ 4 ವಿಕೆಟ್‌ಗೆ 181 ರನ್ ಕಲೆಹಾಕಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪಂದ್ಯದ ಆರಂಭದಿಂದಲೂ 180ಕ್ಕಿಂತ ಅಧಿಕ ಮೊತ್ತ ಬಾರಿಸಲೇಬೇಕು ಎನ್ನುವ ಗುರಿಯಲ್ಲಿ ಬ್ಯಾಟಿಂಗ್ ಮಾಡಿತು. ದೆಹಲಿ ಮೈದಾನದಲ್ಲಿ ಸರಾಸರಿ 165 ರನ್ ಮೊತ್ತವಾಗಿದ್ದು, ಗೆಲುವು ದಾಖಲಿಸಲು 180ಕ್ಕಿಂತ ಹೆಚ್ಚಿನ ಮೊತ್ತ ಬಾರಿಸುವುದು ಅನಿವಾರ್ಯವಾಗಿತ್ತು. ವಿರಾಟ್ ಕೊಹ್ಲಿ 46 ಎಸೆತಗಳಲ್ಲಿ5 ಬೌಂಡರಿಯೊಂದಿಗೆ 55 ರನ್ ಬಾರಿಸಿದರೆ, ಮಹಿಪಾಲ್ ಲೋಮ್ರರ್ 29 ಎಸೆತಗಳಲ್ಲಿ 3 ಸಿಕ್ಸರ್, 6 ಬೌಂಡರಿಗಳ ನೆರವಿನಿಂದ ಅಜೇಯ 54 ರನ್ ಬಾರಿಸಿ ಮಿಂಚಿದರು.
ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ (45 ರನ್, 32 ಎಸೆತ, 5 ಬೌಂಡರಿ, 1 ಸಿಕ್ಸರ್), ಪವರ್ ಪ್ಲೇಯ ಕೊನೆಯ ಓವರ್‌ನಲ್ಲಿ ಅಬ್ಬರದ ಆಟವಾಡಿದರು. ಇದರಿಂದಾಗಿ ಆರ್‌ಸಿಬಿ 6 ಓವರ್‌ಗಳ ಅಂತ್ಯಕ್ಕೆ 51 ರನ್ ಬಾರಿಸಿತು. ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಪರದಾಟ ನಡೆಸಿದ ವಿರಾಟ್ ಕೊಹ್ಲಿ, ವೇಗದ ಬೌಲರ್‌ಗಳ ಎಸೆತಗಳಿಗೆ ಸರಾಗವಾಗಿ ರನ್ ಬಾರಿಸಿದರು. ಮೊದಲ ವಿಕಟ್‌ಗೆ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಜೋಡಿ 62 ಎಸೆತಗಳಲ್ಲಿ 82 ರನ್ ಬಾರಿಸಿತು. 11ನೇ ಓವರ್‌ನಲ್ಲಿ ದಾಳಿಗಿಳಿದ ಮಿಚೆಲ್ ಮಾರ್ಷ್ ಸತತ ಎರಡು ಎಸೆತಗಳಲ್ಲಿ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಉರುಳಿಸಿ ಆರ್‌ಸಿಬಿಗೆ ಆಘಾತ ನೀಡಿದರು.
ಈ ಹಂತದಲ್ಲಿ ಕ್ರೀಸ್‌ಗಿಳಿದ ಮಹಿಪಾಲ್ ಲೋಮ್ರರ್, ವಿರಾಟ್ ಕೊಹ್ಲಿ ಜೊತೆ 55 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಈ ಹಂತದಲ್ಲಿ ಆರ್‌ಸಿಬಿ 190ಕ್ಕೂ ಅಧಿಕ ಮೊತ್ತ ಬಾರಿಸುವ ನಿರೀಕ್ಷೆಯಲ್ಲಿತ್ತು. ತಂಡದ ಮೊತ್ತ 137 ರನ್ ಆಗಿದ್ದಾಗ ವಿರಾಟ್ ಕೊಹ್ಲಿ ಔಟಾದರೆ, ಆ ಬಳಿಕ ಮಹಿಪಾಲ್ ಲೋಮ್ರರ್ ಬಿರುಸಿನ ಆಟವಾಡಿದರು. ಇಶಾಂತ್ ಶರ್ಮ ಓವರ್‌ನಲ್ಲಿ 14 ರನ್ ಬಾರಿಸಿದ ಲೋಮ್ರರ್ ತಂಡ ದೊಡ್ಡ ಮೊತ್ತದ ನಿರೀಕ್ಷೆ ಜೀವಂತವಾಗಿರಿಸಿಕೊಟ್ಟಿದ್ದರು. ಆದರೆ, ದಿನೇಶ್ ಕಾರ್ತಿಕ್ ಅವರ 9 ಎಸೆತದ 11 ರನ್ ಇನ್ನಿಂಗ್ಸ್ ಆರ್‌ಸಿಬಿಗೆ ಹಿನ್ನಡೆಯಾಯಿತು. ಆದರೆ, 19 ಹಾಗೂ 20ನೇ ಓವರ್‌ನಲ್ಲಿ ಕ್ರಮವಾಗಿ 6 ಹಾಗೂ 9 ರನ್ ಬಂದಿದ್ದು, ಆರ್‌ಸಿಬಿಯ 190 ರನ್‌ಗಳ ಗಡಿ ದಾಟುವ ಆಸೆಯನ್ನು ಕಿವುಚಿಹಾಕಿತು.
IPL 2023 ಚೆನ್ನೈ ಎದುರು ಹೀನಾಯ ಸೋಲುಂಡ ಮುಂಬೈ ಇಂಡಿಯನ್ಸ್..! ಸೋಲಿನ ಲೆಕ್ಕಚುಕ್ತಾ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿ!: ಅಕ್ಸರ್ ಪಟೇಲ್ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 7 ಸಾವಿರ ರನ್ ಪೂರೈಸಿದರು. ಈಗಾಗಲೇ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ ಮನ್ ಆಗಿರುವ ವಿರಾಟ್ ಕೊಹ್ಲಿ, ಆಡಿರುವ 233 ಪಂದ್ಯಗಳಿಂದ 7038 ರನ್ ಬಾರಿಸಿದ್ದಾರೆ, 2ನೇ ಸ್ಥಾನದಲ್ಲಿರುವ ಶಿಖರ್ ಧವನ್ 213 ಪಂದ್ಯಗಳಿಂದ 6536 ರನ್ ಬಾರಿಸಿದ್ದಾರೆ. ಡೇವಿಡ್ ವಾರ್ನರ್ ಮೂರನೇ ಸ್ಥಾನದಲ್ಲಿದ್ದು, 172 ಪಂದ್ಯಗಳಿಂದ 6189 ರನ್ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ 7 ಸಾವಿರ ರನ್‌ಗಳ ಗಡಿ ಮುಟ್ಟಿದ ಮೊದಲ ಆಟಗಾರ ಎನ್ನುವ ದಾಖಲೆಗೂ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.
