Asianet Suvarna News Asianet Suvarna News

IPL 2023 ಚೆನ್ನೈ ಎದುರು ಹೀನಾಯ ಸೋಲುಂಡ ಮುಂಬೈ ಇಂಡಿಯನ್ಸ್..! ಸೋಲಿನ ಲೆಕ್ಕಚುಕ್ತಾ

ತವರಿನಲ್ಲಿ ಮುಂಬೈ ಬೇಟೆಯಾಡಿದ ಚೆನ್ನೈ ಸೂಪರ್ ಕಿಂಗ್ಸ್‌
ಮುಂಬೈ ಎದುರು 6 ವಿಕೆಟ್ ಸುಲಭ ಜಯ ಸಾಧಿಸಿದ ಧೋನಿ ಪಡೆ
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಚೆನ್ನೈ ಸೂಪರ್ ಕಿಂಗ್ಸ್

Chennai Super Kings Thrash Mumbai Indians by 6 wickets at Chepak Stadium kvn
Author
First Published May 6, 2023, 7:05 PM IST

ಚೆನ್ನೈ(ಮೇ.06): 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 6 ವಿಕೆಟ್‌ ಭರ್ಜರಿ ಜಯ ಸಾಧಿಸಿದೆ. ಗೆಲ್ಲಲು 140 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಇನ್ನೂ 14 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್‌ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದೆ. ಈ ಮೊದಲು ವಾಂಖೇಡೆ ಮೈದಾನದಲ್ಲಿ ಮುಂಬೈ ಎದುರು 7 ವಿಕೆಟ್ ಸೋಲು ಅನುಭವಿಸಿದ್ದ ಚೆನ್ನೈ, ಇದೀಗ ತವರಿನಲ್ಲಿ ರೋಹಿತ್ ಪಡೆ ಎದುರು 6 ವಿಕೆಟ್ ಜಯ ಸಾಧಿಸಿದೆ.

ಇಲ್ಲಿನ ಚೆಪಾಕ್ ಮೈದಾನದಲ್ಲಿ ಮುಂಬೈ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿ, ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಆರಂಭಿಕರಾದ ಡೆವೊನ್ ಕಾನ್‌ವೇ ಹಾಗೂ ಋತುರಾಜ್ ಗಾಯಕ್ವಾಡ್‌ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 4.1 ಓವರ್‌ಗಳಲ್ಲಿ 46 ರನ್‌ಗಳ ಜತೆಯಾಟವಾಡುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಗಾಯಕ್ವಾಡ್ ಕೇವಲ 16 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 30 ರನ್‌ ಬಾರಿಸಿ ಪೀಯೂಸ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು.

ಇನ್ನು ಅಜಿಂಕ್ಯ ರಹಾನೆ ಕೇವಲ 17 ಎಸೆತಗಳನ್ನು ಎದುರಿಸಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 21 ರನ್ ಗಳಿಸಿ ಪಿಯೂಸ್ ಚಾವ್ಲಾಗೆ ಎರಡನೇ ಬಲಿಯಾದರು. ಇನ್ನು ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಅಂಬಟಿ ರಾಯುಡು 12 ರನ್ ಗಳಿಸಿ ಸ್ಟಬ್ಸ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಎಡಗೈ ಬ್ಯಾಟರ್ ಡೆವೊನ್ ಕಾನ್‌ವೇ 42 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 44 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಶಿವಂ ದುಬೆ(26*) ಹಾಗೂ ನಾಯಕ ಎಂ ಎಸ್ ಧೋನಿ(2) ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

IPL 2023: ಕುಸಿದ ಮುಂಬೈ ಇಂಡಿಯನ್ಸ್‌ಗೆ ವಧೇರಾ ಆಸರೆ, ಚೆನ್ನೈಗೆ ಸ್ಪರ್ಧಾತ್ಮಕ ಗುರಿ..!

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕೇವಲ 14 ರನ್ ಗಳಿಸುಷ್ಟರಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಾಯಕ ರೋಹಿತ್ ಶರ್ಮಾ ಸೇರಿದಂತೆ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನೆಹಾಲ್ ವಧೇರಾ ಆಕರ್ಷಕ ಅರ್ಧಶತಕ(64) ಹಾಗೂ ಸೂರ್ಯಕುಮಾರ್ ಯಾದವ್(26) ಮತ್ತು ಟ್ರಿಸ್ಟನ್ ಸ್ಟಬ್ಸ್(20) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 139 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನು ಕೊನೆಯ 15 ಎಸೆತಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೇವಲ 16 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಆರ್ಶದ್ ಖಾನ್ ಒಂದು ರನ್ ಗಳಿಸಿ ಪೆವಿಲಿಯನ್ ಪೆರೇಡ್ ನಡೆಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಶಿಸ್ತುಬದ್ದ ದಾಳಿ ನಡೆಸಿದ ಮತೀಶ್ ಪತಿರಣ 4 ಓವರ್ ಬೌಲಿಂಗ್ ಮಾಡಿ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರೆ, ದೀಪಕ್ ಚಹರ್ ಹಾಗೂ ತುಷಾರ್ ದೇಶಪಾಂಡೆ ತಲಾ 2 ವಿಕೆಟ್ ಗಳಿಸಿದರು. ಇನ್ನು ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಖಾತೆಗೆ ಒಂದು ವಿಕೆಟ್ ಸೇರಿಸಿಕೊಂಡರು.

Follow Us:
Download App:
  • android
  • ios