Asianet Suvarna News Asianet Suvarna News

IPL ಫೈನಲ್‌ಗೆ ಲಗ್ಗೆಯಿಟ್ಟ CSK, ಧೋನಿ ಮುಟ್ಟಿದ್ದೆಲ್ಲ ಚಿನ್ನ: ಸುರೇಶ್ ರೈನಾ

ಐಪಿಎಲ್ ಫೈನಲ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ಲಗ್ಗೆ
ಧೋನಿ ನಾಯಕತ್ವ ಕೊಂಡಾಡಿದ ಸುರೇಶ್ ರೈನಾ
ಧೋನಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ಎಂದ ಮಿಸ್ಟರ್ ಐಪಿಎಲ್

IPL 2023 Everything that MS Dhoni touches turns to gold says Suresh Raina kvn
Author
First Published May 24, 2023, 5:27 PM IST

ಚೆನ್ನೈ(ಮೇ.24): ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅದ್ಭುತ ಪ್ರದರ್ಶನವನ್ನು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೊಂಡಾಡಿದ್ದು, ಧೋನಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂದು ಮಿಸ್ಟರ್ ಐಪಿಎಲ್‌ ಹೇಳಿದ್ದಾರೆ.

ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವು 15 ರನ್‌ಗಳ ಜಯ ಸಾಧಿಸುವ ಮೂಲಕ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಸಿಎಸ್‌ಕೆ ತಂಡವು ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಜಿಯೋ ಸಿನಿಮಾದಲ್ಲಿ ಮಾತನಾಡಿದ ರೈನಾ, ಗುಜರಾತ್ ಟೈಟಾನ್ಸ್ ಎದುರು ಧೋನಿ ಎಲ್ಲವನ್ನು ಸಿಂಪಲ್ ಆಗಿಡುವಂತೆ ಮಾಡುವಲ್ಲಿ ಯಶಸ್ವಿಯಾದರು. ಇಡೀ ದೇಶವೇ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಪ್‌ ಗೆಲ್ಲಲಿ ಎಂದು ಬಯಸುತ್ತಿದೆ ಎಂದಿದ್ದಾರೆ. ಧೋನಿ ನೇತೃತ್ವ ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 10ನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, 5ನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

" ಅವರು ಫೈನಲ್‌ ತಲುಪಿದ್ದು ಹೇಗೆ ಎನ್ನುವುದನ್ನು ನೋಡಿ, 14 ಸೀಸನ್‌, 10 ಫೈನಲ್‌. ನನ್ನ ಪ್ರಕಾರ ಇದು ಅತಿದೊಡ್ಡ ಸಾಧನೆ. ಧೋನಿ ಎಲ್ಲವೂ ಸಿಂಪಲ್ ಆಗಿರುವಂತೆ ನೋಡಿಕೊಳ್ಳುತ್ತಾರೆ. ಅವರು ಈ ಯಶಸ್ಸಿಗೆ ನಿಜವಾದ ಕಾರಣಿಕರ್ತರು. ಒಮ್ಮೆ ಋತುರಾಜ್ ಗಾಯಕ್ವಾಡ್ ನನ್ನ ಬಳಿ ಹೇಳಿದ್ದರು, ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಧೋನಿಗಾಗಿ ಕಪ್ ಗೆಲ್ಲಲಿದೆ ಎಂದು. ಇಡೀ ದೇಶವೇ ಧೋನಿ ಈ ಬಾರಿ ಐಪಿಎಲ್ ಕಪ್ ಗೆಲ್ಲಲಿ ಎಂದು ಬಯಸುತ್ತಿದೆ" ಎಂದು ಸುರೇಶ್ ರೈನಾ ಹೇಳಿದ್ದಾರೆ.

IPL 2023 ಪ್ರತಿಯೊಬ್ಬರಿಗೂ ತಂಡದಲ್ಲಿ ತಮ್ಮ ಪಾತ್ರವೇನೆಂಬುದು ಗೊತ್ತು: ಋತುರಾಜ್ ಗಾಯಕ್ವಾಡ್

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತವರು ಮೈದಾನವಾದ ಚೆಪಾಕ್‌ನಲ್ಲಿ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಋತುರಾಜ್ ಗಾಯಕ್ವಾಡ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಕೇವಲ 157 ರನ್‌ಗಳಿಗೆ ಸರ್ವಪತನವಾಗುವ ಮೂಲಕ 15 ರನ್ ಅಂತರದ ಸೋಲು ಅನುಭವಿಸಿತು. ಹೀಗಾಗಿ ಧೋನಿ ಮುಟ್ಟಿದ್ದೆಲ್ಲ ಚಿನ್ನವಾಗಿ ಬದಲಾಗುತ್ತಿದೆ ಎಂದು ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ 16ನೇ ಐಪಿಎಲ್ ಆವೃತ್ತಿಯು ನಡೆಯುತ್ತಿದ್ದು, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 10ನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ 4 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಐದನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. 2023ನೇ ಸಾಲಿನ ಐಪಿಎಲ್ ಫೈನಲ್ ಪಂದ್ಯವು ಮಾರ್ಚ್ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಜರುಗಲಿದ್ದು, ಫೈನಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಜತೆ ಕಾದಾಡುವ ತಂಡ ಯಾವುದು ಎನ್ನುವ ಕುತೂಹಲ ಜೋರಾಗಿದೆ. 

Follow Us:
Download App:
  • android
  • ios