ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ಆರ್‌ಸಿಬಿಗೆ ಮಹತ್ವದ ಪಂದ್ಯಸೋತರೆ ನಾಕೌಟ್ ಹಾದಿ ಕಠಿಣಡೆಲ್ಲಿಗೆ ಕೊನೆಯ ಸ್ಥಾನ ತಪ್ಪಿಸಿಕೊಳ್ಳುವ ಗುರಿತವರು ಕ್ರೀಡಾಂಗಣದಲ್ಲಿ ಆಡಲಿರುವ ವಿರಾಟ್ ಕೊಹ್ಲಿ
ನವದೆಹಲಿ(ಮೇ.06): ಪ್ಲೇ-ಆಫ್ ಸ್ಥಾನಕ್ಕೆ ಪೈಪೋಟಿ ಹೆಚ್ಚುತ್ತಿದ್ದರೂ ತನ್ನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಇನ್ನೂ ಸೂಕ್ತ ಪರಿಹಾರ ಕಂಡುಕೊಳ್ಳದ ಆರ್ಸಿಬಿ ತವರಿನಾಚೆ ಮತ್ತೊಂದು ಸವಾಲಿಗೆ ಸಜ್ಜಾಗಿದ್ದು, ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಆರ್ಸಿಬಿ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಅತ್ತ ಡೆಲ್ಲಿ ರೇಸ್ನಿಂದ ಬಹುತೇಕ ಹೊರಬಿದ್ದಿದ್ದು, ಕೊನೆ ಸ್ಥಾನದಿಂದ ಮೇಲೇರಲು ಹರಸಾಹಸಪಡುತ್ತಿದೆ.
ಆರ್ಸಿಬಿ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆದ್ದು 10 ಅಂಕ ಸಂಪಾದಿಸಿದೆ. ಆದರೆ ನಿರ್ಣಾಯಕ ಹಂತದಲ್ಲಿ ಮುಂಬೈ, ರಾಜಸ್ಥಾನ, ಹೈದ್ರಾಬಾದ್ ಹಾಗೂ ಗುಜರಾತ್ನಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ. ಈ ಪೈಕಿ ಗುಜರಾತ್ನ ಪಂದ್ಯ ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ತವರಿನಾಚೆ ನಡೆಯಲಿದ್ದು, ಕಠಿಣ ಸ್ಪರ್ಧೆ ಎದುರಾಗುವುದು ಖಚಿತ. ಹೀಗಾಗಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ರನ್ನೇ ಹೆಚ್ಚಾಗಿ ನೆಚ್ಚಿಕೊಳ್ಳದೇ ಮಧ್ಯಮ ಕ್ರಮಾಂಕದಲ್ಲೂ ಮಿಂಚಿದರಷ್ಟೇ ತಂಡಕ್ಕೆ ಗೆಲುವು ಸಿಗಬಹುದು. ತವರು ಕ್ರೀಡಾಂಗಣದಲ್ಲಿ ಆಡುತ್ತಿರುವ ಕೊಹ್ಲಿ ಮೇಲೆ ತಂಡದ ಜೊತೆಗೆ ಅಭಿಮಾನಿಗಳಲ್ಲೂ ಭಾರೀ ನಿರೀಕ್ಷೆ ಇದೆ.
ಇನ್ನು, ಆಲ್ರೌಂಡರ್ ಕೇದಾರ್ ಜಾಧವ್ ಸೇರ್ಪಡೆ ತಂಡ ಸಂಯೋಜನೆಗೆ ನೆರವಾಗಬಹುದು. ಬೌಲಿಂಗ್ ವಿಭಾಗ ಹೇಜಲ್ವುಡ್ ಸೇರ್ಪಡೆಯಿಂದ ಬಲಿಷ್ಠವಾದಂತೆ ತೋರುತ್ತಿದ್ದು, ಲಖನೌ ವಿರುದ್ಧದ ಅಭೂತಪೂರ್ವ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಡೆಲ್ಲಿ ಸ್ಪರ್ಧಾತ್ಮಕ ಪಿಚ್ನಲ್ಲಿ ವನಿಂದು ಹಸರಂಗ ಮತ್ತೆ ಟ್ರಂಪ್ಕಾರ್ಡ್ ಎನಿಸಿಕೊಳ್ಳಬಹುದು.
ಈ ತಂಡವೇ ಈ ಬಾರಿ IPL ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ರವಿ ಶಾಸ್ತ್ರಿ
ಮತ್ತೊಂದೆಡೆ ಸತತ 5 ಸೋಲಿನಿಂದ ಹೊರಬಂದು ಕಳೆದ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಡೆಲ್ಲಿ, ಆರ್ಸಿಬಿಗೂ ಆಘಾತ ನೀಡುವ ನಿರೀಕ್ಷೆಯಲ್ಲಿದೆ. ತಂಡ ಎಲ್ಲಾ ವಿಭಾಗದಲ್ಲೂ ವೈಫಲ್ಯ ಕಂಡಿದ್ದು, ಒಮ್ಮೆಯೂ 190+ ರನ್ ಮೊತ್ತ ಕಲೆಹಾಕಿಲ್ಲ. ಡೇವಿಡ್ ವಾರ್ನರ್ ಮೊದಲಿನ ಲಯದಲ್ಲಿಲ್ಲ. ಮನೀಶ್ ಪಾಂಡೆ, ಪ್ರಿಯಂ ಗರ್ಗ್ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್ ಆಲ್ರೌಂಡ್ ಆಟ ತಂಡಕ್ಕೆ ನಿರ್ಣಾಯಕ ಎನಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಲಖನೌ ಹಾಗೂ ಚೆನ್ನೈ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಅವಕಾಶವಿದೆ. ಇನ್ನೊಂದೆಡೆ ಡೆಲ್ಲಿ ತಂಡವು ತವರಿನಲ್ಲಿ ಈ ಪಂದ್ಯವನ್ನು ಜಯಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಿಂದಿಕ್ಕಿ 9ನೇ ಸ್ಥಾನಕ್ಕೇರಲಿದೆ.
ಒಟ್ಟು ಮುಖಾಮುಖಿ: 29
ಆರ್ಸಿಬಿ: 18
ಡೆಲ್ಲಿ: 10
ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿ
ಆರ್ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್ವುಡ್, ಹರ್ಷಲ್ ಪಟೇಲ್.
ಡೆಲ್ಲಿ: ಡೇವಿಡ್ ವಾರ್ನರ್(ನಾಯಕ), ಫಿಲ್ ಸಾಲ್ಟ್, ಮನೀಶ್ ಪಾಂಡೆ, ಮಿಚೆಲ್ ಮಾರ್ಶ್, ಪ್ರಿಯಂ ಗರ್ಗ್, ಅಕ್ಷರ್ ಪಟೇಲ್, ರಿಪಲ್ ಪಟೇಲ್, ಅಮನ್ ಖಾನ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಖಲೀಲ್ ಅಹಮ್ಮದ್.
ಪಂದ್ಯ: ಸಂಜೆ 7.30ಕ್ಕೆ, ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಸ್ಪರ್ಧಾತ್ಮಕ ಕ್ರಿಕೆಟ್ಗೆ ಹೆಸರುವಾಸಿಯಾಗಿರುವ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ನಲ್ಲಿ ದೊಡ್ಡ ಮೊತ್ತ ದಾಖಲಾದ ಉದಾಹರಣ ಕಡಿಮೆ. ಇಲ್ಲಿ ನಡೆದ 4 ಪಂದ್ಯಗಳಲ್ಲಿ 3ರಲ್ಲಿ ಚೇಸಿಂಗ್ ಮಾಡಿದ ತಂಡ ಜಯಗಳಿಸಿದೆ. ಆದರೆ ಮೊದಲು ಬ್ಯಾಟ್ ಮಾಡಿದ ತಂಡ 180+ ಗಳಿಸಿದರೂ ಗೆಲ್ಲುವ ಸಾಧ್ಯತೆ ಇದೆ.
