ಕಳೆದೆರಡು ಪಂದ್ಯದಲ್ಲಿ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ನೀಡಲು ವಿಫಲವಾದ ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್  ವಿರುದ್ಧ ಅಸಲಿ ಬಡ್ಡಿ ಎಲ್ಲಾ ತೀರಿಸಿಕೊಂಡಿದೆ. ಹೈದರಾಬಾದ್ ಬೆಂಕಿ ಬೌಲಿಂಗ್ ನಡುವೆ ಶಿಖರ್ ಧವನ್ ಅಜೇಯ 99 ರನ್ ಸಿಡಿಸಿ ತಂಡವನ್ನು ಅಪಾಯದಿಂದ ಪಾರುಮಾಡಿದ್ದಾರೆ.

ಹೈದರಾಬಾದ್(ಏ.09):ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಮಾರ್ಕೋ ಜಾನ್ಸೀನ್ , ಉಮ್ರಾನ್ ಮಲಿಕ್.. ಒಬ್ಬರ ಹಿಂದೊಬ್ಬರ ಮಾರಕ ದಾಳಿಗೆ ಪಂಜಾಬ್ ಕಿಂಗ್ಸ್ ತತ್ತರಿಸಿದೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ವಿಕೆಟ್ ಪತನಗೊಳ್ಳುತ್ತಿತ್ತು. ಪಂಜಾಬ್ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ಗೆ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಆದರೆ ಮತ್ತೆ ಪಂಜಾಬ್ ತಂಡಕ್ಕೆ ಆಸರೆಯಾಗಿದ್ದು ನಾಯಕ ಶಿಖರ್ ಧವನ್. ಸತತ ವಿಕೆಟ್ ಪತನದ ನಡುವೆ ಶಿಖರ್ ಧವನ್ ಅಜೇಯ 99 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 143 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಪ್ರಭಾಸಿಮ್ರನ್ ಸಿಂಗ್ ಡಕೌಟ್ ಆದರು. ಶಿಖರ್ ಧವನ್ ಹೋರಾಟ ಮುಂದುವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಒಂದೆಡೆ ಭುವನೇಶ್ವರ್ ಕುಮಾರ್ ಮಾರಕ ದಾಳಿ ಆರಂಭಿಸಿದರೆ, ಮತ್ತೊಂದೆಡೆ ಮಯಾಂಕ್ ಮಾರ್ಕಂಡೆ ದಾಳಿ ತೀವ್ರಗೊಂಡಿತು.ಮಾರ್ಕಾ ಜಾನ್ಸೀನ್ ಆರ್ಭಟಕ್ಕೆ ಮ್ಯಾಥ್ಯೂ ಶಾರ್ಟ್ ಹಾಗೂ ಜಿತಿನ್ ಶರ್ಮಾ ವಿಕೆಟ್ ಕಳಚಿತು.

ಸ್ಯಾಮ್ ಕುರನ್ ಹಾಗೂ ಶಿಖರ್ ಧವನ್ ಹೋರಾಟದಿಂದ ಪಂಜಾಬ್ ಕಿಂಗ್ಸ್ ಚೇತರಿಸಿಕೊಂಡಿತು. ಆದರೆ ಕುರನ್ 22 ರನ್ ಸಿಡಿಸಿ ಔಟಾದರು. ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ, ಮತ್ತೊಂದೆಡೆ ಶಿಖರ್ ಧವನ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಿಕಂದರ್ ರಾಜಾ, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಾಹುಲ್ ಚಹಾರ್, ನತನ್ ಎಲ್ಲಿಸ್ ಅಬ್ಬರಿಸದೆ ವಿಕೆಟ್ ಕೈಚೆಲ್ಲಿದರು. 

ಏಕಾಂಗಿ ಹೋರಾಟ ನೀಡಿದ ಧವನ್ ಹಾಫ್ ಸೆಂಚುರಿ ಸಿಡಿಸಿದರು. ಧವನ್ ಹೋರಾಟದಿಂದ ಪಂಜಾಬ್ ಕಿಂಗ್ಸ್ 100 ರನ್ ಗಡಿ ದಾಟಿತು. ಧವನ್ ವಿಕೆಟ್‌ಗಾಗಿ ಸನ್‌ರೈಸರ್ಸ್ ಅದೆಂತಾ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆಯ ವಿಕೆಟ್‌ ಉಳಿಸಿಕೊಂಡು ಧವನ್ ಎಲ್ಲಾ ಎಸೆತಗಳನ್ನು ತಾವೇ ಎದುರಿಸಿ ತಂಡವನ್ನು ಅಲ್ಪ ಮೊತ್ತ ಭೀತಿಯಿಂದ ಪಾರು ಮಾಡಿದರು. ಶಿಖರ್ ಧವನ್ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಈ ಮೂಲಕ 66 ಎಸೆತದಲ್ಲಿ ಅಜೇಯ 99 ರನ್ ಸಿಡಿಸಿದರು.ಪಂಜಾಬ್ 9 ವಿಕೆಟ್ ನಷ್ಟಕ್ಕೆ 143 ರನ್ ಸಿಡಿಸಿತು.