1427 ದಿನಗಳ ಬಳಿಕ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಐಪಿಎಲ್ ಸಂಭ್ರಮ ಮುಡುಗಟ್ಟಿತ್ತು. ಆದರೆ, ಆಟಗಾರರು ಮೈದಾನಕ್ಕೆ ಇಳಿದು ಪಂದ್ಯವನ್ನು ಅಧಿಕೃತ ಆರಂಭ ಮಾಡುವ ಮುನ್ನವೇ ಬೀದಿನಾಯಿ ಪಂದ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಚೆನ್ನೈ (ಏ.3): ದಕ್ಷಿಣ ಭಾರತದಲ್ಲಿ ಪ್ರಮುಖ ಸ್ಟೇಡಿಯಂಗಳಲ್ಲಿ ಒಂದಾಗಿರುವ ಚೆನ್ನೈನ ಚೆಪಾಕ್ ಸ್ಟೇಡಿಯಂ ಅಥವಾ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 1427 ದಿನಗಳ ಬಳಿಕ ಐಪಿಎಲ್ ಪಂದ್ಯ ನಡೆದಿದೆ. ಆತಿಥೇಯ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಸೋಮವಾರ ಕಾದಾಟ ನಡೆಸಿದವು. ಆದರೆ, ಈ ಪಂದ್ಯ ಐದು ನಿಮಿಷ ತಡವಾಗಿ ಪ್ರಾರಂಭವಾಯಿತು. ಹೌದು, ಬಹುನಿರೀಕ್ಷಿತ ಪಂದ್ಯ ಐದು ನಿಮಿಷಗಳ ಕಾಲ ತಡವಾಗಿ ಆರಂಭವಾಗಲು ಕಾರಣವಾಗಿದ್ದು ಬೀದಿ ನಾಯಿ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ರುತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಆರಂಭಿಕರಾಗಿ ಮೈದಾನಕ್ಕೆ ಇಳಿದಿದ್ದರು. ಇನ್ನೊಂದೆಡೆ ಲಖನೌ ತಂಡದಿಂದ ಕೈಲ್ ಮೇಯರ್ಸ್ ಬೌಲಿಂಗ್ ಮಾಡಲು ಅಣಿಯಾಗಿದ್ದರು. ಮೈದಾನದಲ್ಲಿ ನೆರೆದಿದ್ದ ಸಪಾರ ಸಂಖ್ಯೆಯ ಪ್ರೇಕ್ಷಕರು ಕೂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರನೇ ಪಂದ್ಯವನ್ನು ನೋಡಲು ಉತ್ಸುಕರಾಗಿದ್ದರು. ಪಂದ್ಯ ಆರಂಭವಾಗುವ ಸಮಯ ದಾಟಿದರೂ ಬೌಲಿಂಗ್ ಮಾಡುವ ಲಕ್ಷಣ ಕಾಣಲಿಲ್ಲ. ಟಿವಿಯಲ್ಲಿ ಪಂದ್ಯ ನೋಡುತ್ತಿದ್ದ ಎಲ್ಲರಿಗೂ ಇದು ಅಚ್ಚರಿ ಮೂಡಿಸಿತು. ಈ ಹಂತದಲ್ಲಿ ಸ್ಟೇಡಿಯಂನ ಸ್ಪೈಡರ್ ಕ್ಯಾಮೆರಾದಲ್ಲಿ ಮೈದಾನಕ್ಕೆ ಬೀದಿ ನಾಯಿ ನುಗ್ಗಿದ್ದನ್ನು ಪ್ರಸಾರ ಮಾಡಿತು.
ಮೈದಾನದ ಸಿಬ್ಬಂದಿಗಳು ಹಾಗೂ ಭದ್ರತಾ ಅಧಿಕಾರಿಗಳು ಕೆಲ ಹೊತ್ತು ಬೀದಿನಾಯಿಯನ್ನು ಹಿಡಿಯಲು ಪ್ರಯಾಸಪಟ್ಟರು. ಆದರೆ, ಚಾಣಾಕ್ಷ ನಾಯಿ ಯಾರ ಕೈಗೂ ಸಿಗದೆ ಕೆಲ ಹೊತ್ತು ಆಟವಾಡಿಸಿತು. ಐದು ನಿಮಿಷದ ಬಳಿಕ ನಾಯಿಯನ್ನು ಹೊರಗೆ ಓಡಿಸಲಾಯಿತು. ಆ ಬಳಿಕ ಪಂದ್ಯ ಆರಂಭಗೊಂಡಿತು.ಇದರ ನಡುವೆ ಪಂದ್ಯದ ಅಂಪೈರ್ ಆಗಿದ್ದ ಬ್ರೂಸ್ ಆಕ್ಸೆನ್‌ಫರ್ಡ್ ಕೂಡ ನಾಯಿ ಹಿಡಿಯಲು ಪ್ರಯತ್ನ ಮಾಡಿದ್ದನ್ನೂ ಟಿವಿ ಕ್ಯಾಮೆರಾ ಸೆರೆ ಮಾಡಿತು.
