ನಿಧಾನಗತಿಯ ಆರಂಭ, ವಿಕೆಟ್ ಪತನದ ನಡುವೆ ನಾಯಕ ಕೆಎಲ್ ರಾಹುಲ್ ದಿಟ್ಟ ಹೋರಾಟ ನೀಡಿದ್ದಾರೆ. ಅತೀ ವೇಗವಾಗಿ 4,000 ರನ್ ಸಿಡಿಸಿ ಹೊಸ ದಾಖಲೆ ಬರೆದಿದ ರಾಹುಲ್, ಪಂಜಾಬ್ ತಂಡಕ್ಕೆ 160 ರನ್ ಟಾರ್ಗೆಟ್ ನೀಡಿದ್ದಾರೆ.
ಲಖನೌ(ಏ.15): ವಿಕೆಟ್ ಪತನದ ನಡುವೆ ನಾಯಕ ಕೆಎಲ್ ರಾಹುಲ್ ದಿಟ್ಟ ಹೋರಾಟದ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ದ ಲಖನೌ ಸೂಪರ್ ಜೈಂಟ್ಸ್ 8 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ. ನಾಯಕ ಕೆಎಲ್ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಯಲ್ಲಿ ಅತೀ ವೇಗದಲ್ಲಿ 4,000 ರನ್ ಪೂರೈಸಿದ ಭಾರತೀಯ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ರಾಹುಲ್ ಹಾಫ್ ಸೆಂಚುರಿಯಿಂದ ಲಖನೌ ಸೂಪರ್ ಜೈಂಟ್ಸ್ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಲಖನೌ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ಕೆಎಲ್ ರಾಹುಲ್ ಹಾಗೂ ಕೈಲ್ ಮೇಯರ್ಸ್ ಸ್ಫೋಟಕ ಆರಂಭದ ಸೂಚನೆ ನೀಡಿದರು. ಇತ್ತ ಪಂಜಾಬ್ ಅಬ್ಬರದ ಆಟಕ್ಕೆ ಕಟ್ಟಿಹಾಕುವ ಪ್ರಯತ್ನ ಮಾಡಿತು. ಮೇಯರ್ಸ್ 29 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ರಾಹುಲ್ ಹಾಗೂ ಮೇಯರ್ಸ್ 53 ರನ್ ಜೊತೆಯಾಟ ನೀಡಿದರು.
ಕೊಹ್ಲಿ ಗಂಗೂಲಿ ಜಟಾಪಟಿ ಬಹಿರಂಗ, ಗುರಾಯಿಸಿ, ಶೇಕ್‌ಹ್ಯಾಂಡ್ ಮಾಡದೇ ತೆರಳಿದ ವಿರಾಟ್!
ಕೈಲ್ ಮೇಯರ್ಸ್ ಬೆನ್ನಲ್ಲೇ ದೀಪಕ್ ಹೂಡ ವಿಕೆಟ್ ಪತನಗೊಂಡಿತು. ಇದರಿಂದ ರಾಹುಲ್ ಮೇಲೆ ಒತ್ತಡ ಹೆಚ್ಚಾಯಿತು. ರಾಹುಲ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಇತ್ತ ಕ್ರುನಾಲ್ ಪಾಂಡ್ಯ ನಿಧಾನಗತಿಯ ಆಟ ಕೂಡ ತಂಡಕ್ಕೆ ಹೊಡೆತ ನೀಡಿತು. ಕ್ರುನಾಲ್ 17 ಎಸೆತದಲ್ಲಿ 18 ರನ್ ಸಿಡಿಸಿ ಔಟಾದರು. ಇತ್ತ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ಔಟಾದರು.
ನಿಕೂಲಸ್ ಪೂರನ್ ಸಿಕ್ಸರ್ ಹೊಡೆತಕ್ಕೆ ಪ್ರಯತ್ನಿಸಿ ಕೈಸುಟ್ಟುಕೊಂಡರು. ರನ್ ಖಾತೆ ತೆರೆಯುವ ಮುನ್ನವೇ ಪೂರನ್ ನಿರ್ಗಮಿಸಿದರು. ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಸ್ಟೊಯ್ನಿಸ್ 15 ರನ್ ಸಿಡಿಸಿ ಔಟಾದರು. ಇತ್ತ ದಿಟ್ಟ ಹೋರಾಟ ನೀಡಿದ ಕೆಎಲ್ ರಾಹುಲ್ 56 ಎಸೆತದಲ್ಲಿ 76 ರನ್ ಸಿಡಿಸಿದರು.
ಕೃಷ್ಣಪ್ಪ ಗೌತಮ್ ಅಬ್ಬರಿಸಲು ಹೋಗಿ ವಿಕೆಟ್ ಕೈಚೆಲ್ಲಿದರು. ಆಯುಷ್ ಬದೋನಿ ಅಜೇಯ 5 ರನ್ ಸಿಡಿಸಿದರು. ಈ ಮೂಲಕ ಲಖನೌ ಸೂಪರ್ ಜೈಂಟ್ಸ್ 8 ವಿಕೆಟ್ ನಷ್ಟಕ್ಕ 159 ರನ್ ಸಿಡಿಸಿತು.
