* ಸನ್‌ರೈಸರ್ಸ್ ಹೈದರಾಬಾದ್ ಎದುರು ಆಘಾತಕಾರಿ ಸೋಲು ಕಂಡ ಆರ್‌ಸಿಬಿ* ಕೇವಲ 68 ರನ್‌ಗಳಿಗೆ ಆಲೌಟ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು* 9 ವಿಕೆಟ್‌ಗಳ ಹೀನಾಯ ಸೋಲು ಕಂಡ ಫಾಫ್ ಡು ಪ್ಲೆಸಿಸ್ ಪಡೆ
ಬೆಂಗಳೂರು(ಏ.24): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳು ಮುಖಾಮುಖಿಯಾಗಿದ್ದವು. ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಏಪ್ರಿಲ್ 23ಕ್ಕೂ ಅವಿನಾಭವ ಸಂಬಂಧ ಇರುವಂತೆ ತೋರುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ್ದ ಆರ್‌ಸಿಬಿ ಅದೇ ಏ.23ರಂದು ಕನಿಷ್ಠ ಮೊತ್ತವನ್ನೂ ಕಲೆ ಹಾಕಿ ಭಾರೀ ಟ್ರೋಲ್‌ಗೆ ಒಳಗಾಗಿದ್ದು ಈಗ ಇತಿಹಾಸ. ಅದರ ಟ್ರೋಲ್‌ಗಳು ಇನ್ನೂ ಹರಿದಾಡುತ್ತಿರುವಾಗಲೇ ತಂಡ ಆ ದಿನವನ್ನು ಮತ್ತೊಮ್ಮೆ ನೆನಪಿಲ್ಲಿಡುವಂತೆ ಮಾಡಿದ್ದು, ಭಾನುವಾರ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ತಂಡ ಕೇವಲ 68 ರನ್‌ಗೆ ಆಲೌಟಾಗಿ ಮುಖಭಂಗ ಅನುಭವಿಸಿದೆ. ಬಳಿಕ ಬೌಲಿಂಗ್‌ನಲ್ಲೂ ವಿಫಲವಾಗಿ 9 ವಿಕೆಟ್ ಸೋಲನುಭವಿಸಿತು.
2013ರ ಏ.23ರಂದು ಪುಣೆ ವಿರುದ್ಧ ಆರ್‌ಸಿಬಿ 263/5 ಗಳಿಸಿದ್ದು ಈವರೆಗೂ ಐಪಿಎಲ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ರನ್. ಬಳಿಕ 2017ರಲ್ಲಿ ಏಪ್ರಿಲ್ 23ರಂದು ನಡೆದಿದ್ದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕೇವಲ 49 ರನ್‌ಗೆ ಆಲೌಟಾಗಿದ್ದು ಈಗಲೂ ಐಪಿಎಲ್‌ನಲ್ಲಿ ತಂಡವೊಂದರ ಕನಿಷ್ಠ ಮೊತ್ತ ಎನಿಸಿಕೊಂಡಿದೆ.
IPL 2022 ಬ್ಯಾಟಿಂಗ್ ವಿಭಾಗದ ಪರೇಡ್, ಸನ್ ರೈಸರ್ಸ್ ವಿರುದ್ಧ ಹೀನಾಯ ಸೋಲು ಕಂಡ RCB!
ಈ ಪಂದ್ಯ ಆರಂಭಕ್ಕೂ ಮುನ್ನ ಎರಡೂ ತಂಡಗಳು ಗೆಲುವಿನ ಲಯದಲ್ಲಿದ್ದವು. ಕೇನ್ ವಿಲಿಯಮ್ಸನ್ ನೇತೃತ್ವದ ಆರೆಂಜ್ ಆರ್ಮಿ ಆರಂಭಿಕ ಎರಡು ಪಂದ್ಯಗಳನ್ನು ಸೋತ ಬಳಿಕ ಸತತ 4 ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು. ಆರ್‌ಸಿಬಿ ಎದುರು ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬೌಲಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳು ಯಶಸ್ವಿಯಾದರು.
ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಕ್ಷಿಣ ಆಫ್ರಿಕಾದ ಯುವ ವೇಗಿ ಮಾರ್ಕೊ ಯಾನ್ಸನ್ ತಮ್ಮ ಮೊದಲ ಓವರ್‌ನಲ್ಲೇ 3 ವಿಕೆಟ್ ಕಬಳಿಸುವ ಮೂಲಕ ಶಾಕ್ ನೀಡಿದರು. ಕಳೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರಿಂದ ದೊಡ್ಡ ಇನಿಂಗ್ಸ್ ನಿರೀಕ್ಷೆ ಮಾಡಲಾಗಿತ್ತು. ಆದರೆ ಮಾರ್ಕೊ ಯಾನ್ಸನ್ ಆರ್‌ಸಿಬಿಯ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳಾದ ಫಾಫ್ ಡು ಪ್ಲೆಸಿಸ್, ಅನೂಜ್ ರಾವತ್ ಹಾಗೂ ವಿರಾಟ್ ಕೊಹ್ಲಿಯನ್ನು ಒಂದೇ ಓವರ್‌ನಲ್ಲಿ ಬಲಿ ಪಡೆಯುವ ಮೂಲಕ ದೊಡ್ಡ ಶಾಕ್ ನೀಡಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (12) ಹಾಗೂ ಸುಯಶ್ ಪ್ರಭುದೇಸಾಯಿ(15) ಕೊಂಚ ಪ್ರತಿರೋಧ ತೋರುವ ಪ್ರಯತ್ನ ನಡೆಸಿದರಾದರೂ ಅವರನ್ನು ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಸನ್‌ರೈಸರ್ಸ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಆರ್‌ಸಿಬಿ ಆಪತ್ಭಾಂಧವ ದಿನೇಶ್ ಕಾರ್ತಿಕ್ ಶೂನ್ಯ ಸುತ್ತಿದರೆ, ಶಾಬಾಬ್ ಅಹಮ್ಮದ್ ಬ್ಯಾಟಿಂಗ್ 7 ರನ್‌ಗಳಿಗೆ ಸೀಮಿತವಾಯಿತು. ಮ್ಯಾಕ್ಸ್‌ವೆಲ್ ಹಾಗೂ ಪ್ರಭುದೇಸಾಯಿ ಹೊರತುಪಡಿಸಿ ಆರ್‌ಸಿಬಿಯ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಸುಯಶ್ ಪ್ರಭುದೇಸಾಯಿ 15 ರನ್ ಬಾರಿಸಿದ್ದೇ ಆರ್‌ಸಿಬಿ ಪರ ಈ ಪಂದ್ಯದಲ್ಲಿ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.
ಕಡಿಮೆ ಮೊತ್ತವನ್ನು ಬೆನ್ನತ್ತಿದ ಹೈದರಾಬಾದ್ ನಿರೀಕ್ಷೆಯಂತೆಯೇ ದೊಡ್ಡ ಗೆಲುವು ಸಾಧಿಸಿದೆ. ಅಭಿಷೇಕ್ ಶರ್ಮಾ ಹಾಗೂ ಕೇನ್ ವಿಲಿಯಮ್ಸನ್ ಕೊನೆವರೆಗೂ ವಿಕೆಟ್ ಬೀಳದಂತೆ ಎಚ್ಚರಿಕೆ ವಹಿಸಿದರೂ 8ನೇ ಓವರ್ ಎಸೆದ ಹರ್ಷಲ್ ಪಟೇಲ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. 47 ರನ್ ಸಿಡಿಸಿದ ಅಭಿಷೇಕ್ ಅರ್ಧಶತಕ ವಂಚಿತರಾದರು. ವಿಲಿಯಮ್ಸನ್ 16 ರನ್ ಬಾರಿಸಿದರೆ, ರಾಹುಲ್ ತ್ರಿಪಾಠಿ 7 ರನ್ ಗಳಿಸಿ ಇನ್ನೂ 72 ಎಸೆತ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೀನಾಯವಾಗಿ ಸೋಲು ಕಾಣುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳು ಹರಿದಾಡುತ್ತಿವೆ. ಈ ಸಂದರ್ಭದಲ್ಲಿ ಆರ್‌ಸಿಬಿ ವರ್ಸಸ್ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಸಾಕಷ್ಟು ಗಮನ ಸೆಳೆದ ಟಾಪ್ 10 ಮೀಮ್ಸ್‌ಗಳನ್ನು ನಿಮ್ಮ ಮುಂಡಿಡುತ್ತಿದ್ದೇವೆ ನೋಡಿ.
