IPL 2022 ಬ್ಯಾಟಿಂಗ್ ವಿಭಾಗದ ಪರೇಡ್, ಸನ್ ರೈಸರ್ಸ್ ವಿರುದ್ಧ ಹೀನಾಯ ಸೋಲು ಕಂಡ RCB!
ಬ್ಯಾಟಿಂಗ್ ವಿಭಾಗದ ಹೀನಾಯ ನಿರ್ವಹಣೆಗೆ ಬೆಲೆತೆತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಹೀನಾಯ 9 ವಿಕೆಟ್ ಗಳ ಸೋಲು ಕಂಡಿದೆ.ಸನ್ ರೈಸರ್ಸ್ ತಂಡ ಇನ್ನೂ 72 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿರುವ ಕಾರಣ ಆರ್ ಸಿಬಿ ತಂಡದ ರನ್ ರೇಟ್ ಪಾತಾಳಕ್ಕೆ ಇಳಿದಿದೆ.
ಬೈ (ಏ.23): ಐಪಿಎಲ್ ಇತಿಹಾಸದ 6ನೇ ಕನಿಷ್ಠ ಮೊತ್ತವನ್ನು ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore ) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad)ವಿರುದ್ಧ 9 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ, ಇನ್ನಿಂಗ್ಸ್ ನ 2ನೇ ಓವರ್ ನಲ್ಲಿ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಅನುಜ್ ರಾವತ್ ಅವರ ವಿಕೆಟ್ ಗಳನ್ನು ಕಳೆದುಕೊಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಮಾರ್ಕೋ ಜಾನ್ಸೆನ್ (25ಕ್ಕೆ 3), ಟಿ.ನಟರಾಜನ್ (10ಕ್ಕೆ 3), ಜೆ.ಸುಚಿತ್ (12ಕ್ಕೆ 2) ದಾಳಿಗೆ ನಲುಗಿದ ಆರ್ ಸಿಬಿ 16.1 ಓವರ್ ಗಳಲ್ಲಿ 68 ರನ್ ಗೆ ಆಲೌಟ್ ಆಯಿತು.
ಪ್ರತಿಯಾಗಿ ಅಲ್ಪ ಮೊತ್ತದ ಚೇಸಿಂಗ್ ನಲ್ಲಿ ಯಾವ ಸಮಸ್ಯೆಯನ್ನೂ ಎದುರಿಸದ ಸನ್ ರೈಸರ್ಸ್ ತಂಡ 8 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 72 ರನ್ ಬಾರಿಸಿ ಗೆಲುವು ಕಂಡಿತು. ತೀರಾ ಅಲ್ಪ ಮೊತ್ತದ ಗುರಿಯಾಗಿದ್ದರೂ, ಅಭಿಷೇಕ್ ಶರ್ಮ (47ರನ್, 28 ಎಸೆತ, 8 ಬೌಂಡರಿ, 1 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಮೂಲಕ ಗಮನಸೆಳೆದರು.
ಚೇಸಿಂಗ್ ಆರಂಭಿಸಿದ ಸನ್ ರೈಸರ್ಸ ಹೈದರಾಬಾದ್ ತಂಡ ಸಲೀಸಾಗಿ ಮೊತ್ತವನ್ನು ಬೆನ್ನಟ್ಟಿತು. ಯುವ ಆರಂಭಿಕ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮ ಏಕಾಂಗಿಯಾಗಿ ಆರ್ ಸಿಬಿ ಬೌಲರ್ ಗಳನ್ನು ಚೆಂಡಾಡಿದರು. ಮೊಹಮದ್ ಸಿರಾಜ್ ಎಸೆದ ಮೊದಲ ಓವರ್ ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟರೆ, ಹ್ಯಾಸಲ್ ವುಡ್ ಎಸೆದ 2ನೇ ಓವರ್ ನಲ್ಲಿ 8 ರನ್ ನೀಡಿದರು.
ಆ ನಂತರದ ಓವರ್ ಗಳಲ್ಲಿ ಬ್ಯಾಟಿಂಗ್ ಪ್ರತಾಪ ತೋರಿದ ಅಭಿಷೇಕ್ ಶರ್ಮ, ಸುಲಭವಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಸನ್ ರೈಸರ್ಸ್ ತಂಡದ ಆಟವನ್ನು ನೋಡಿದರೆ, ಪಂದ್ಯವನ್ನು ಪವರ್ ಪ್ಲೇ ಒಳಗೇ ಮುಕ್ತಾಯ ಮಾಡುವ ರೀತಿಯಲ್ಲಿ ಕಾಣುತ್ತಿತ್ತು. ಆದರೆ, ಕೇನ್ ವಿಲಿಯಮ್ಸನ್ ತಾಳ್ಮೆಯ ಆಟವಾಡಿದರು. ಹಾಗಿದ್ದರೂ, ಸನ್ ರೈಸರ್ಸ್ ಇನ್ನೂ 000 ಎಸೆತಗಳು ಇರುವಂತೆಯೇ ಗೆಲುವು ದಾಖಲಿಸಿತು.
IPL 2022 ಸನ್ ರೈಸರ್ಸ್ ಉರಿವೇಗದ ದಾಳಿ, 68 ರನ್ ಗೆ ಆರ್ ಸಿಬಿ ಆಲೌಟ್!
8ನೇ ಬಾರಿಗೆ ಐಪಿಎಲ್ ನಲ್ಲಿ 100ಕ್ಕಿಂತ ಕಡಿಮೆ ಮೊತ್ತ ಬಾರಿಸಿದ ಆರ್ ಸಿಬಿ: ಐಪಿಎಲ್ ನಲ್ಲಿ 8ನೇ ಬಾರಿಗೆ 100ಕ್ಕಿಂತ ಕಡಿಮೆ ಮೊತ್ತವನ್ನು ಬಾರಿಸಿದ ಕುಖ್ಯಾತಿಯನ್ನು ಆರ್ ಸಿಬಿ ಪಡೆದುಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ಬಾರಿ ಈ ಕುಖ್ಯಾತಿಗೆ ಭಾಜನವಾಗಿದ್ದರೆ, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ 6 ಬಾರಿ100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಪಂಜಾಬ್ ಕಿಂಗ್ಸ್ ತಂಡ 5 ಬಾರಿ ಈ ಕುಖ್ಯಾತಿ ಪಡೆದುಕೊಂಡಿದೆ.
IPL 2022 ಆರಂಭಿಕ ಹಂತದಲ್ಲಿ RCBಗೆ ಹಿನ್ನಡೆ, ಕೊಹ್ಲಿ ಡಕೌಟ್!
ಐಪಿಎಲ್ ಇತಿಹಾಸದ 6ನೇ ಕನಿಷ್ಠ: ಪಿಎಲ್ ನಲ್ಲಿ ಅತ್ಯಂತ ಕನಿಷ್ಠ ಮೊತ್ತದ ಕುಖ್ಯಾತಿಯನ್ನೂ ಹೊಂದಿರುವ ಆರ್ ಸಿಬಿ ತಂಡಕ್ಕೆ ಇದು ಐಪಿಎಲ್ ನ 6ನೇ ಅತೀ ಕನಿಷ್ಠ ಮೊತ್ತದ ಕುಖ್ಯಾತಿ. 2017ರಲ್ಲಿ ಕೆಕೆಆರ್ ವಿರುದ್ಧ ಕೋಲ್ಕತದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ಕೇವಲ 49 ರನ್ ಗೆ ಆಲೌಟ್ ಆಗಿದ್ದರೆ, 2009ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಆರ್ ಸಿಬಿ ವಿರುದ್ಧ ಕೇಪ್ ಟೌನ್ ನಲ್ಲಿ ಕೇವಲ 58 ರನ್ ಗೆ ಮುಗ್ಗರಿಸಿತ್ತು. 2017 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 66 ರನ್ ಗೆ ಆಲೌಟ್ ಆಗಿದ್ದರೆ, ಅದೇ ವರ್ಷ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 67 ರನ್ ಗೆ ಆಲೌಟ್ ಆಗಿತ್ತು. 2008ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತಂಡ 67 ರನ್ ಗೆ ಆಲೌಟ್ ಆಗಿರುವುದು 5ನೇ ಸ್ಥಾನದಲ್ಲಿದೆ.