* ಹಾಲಿ ಚಾಂಪಿಯನ್ ಚೆನ್ನೈಗಿಂದು ಸನ್‌ರೈಸರ್ಸ್ ಹೈದರಾಬಾದ್ ಸವಾಲು* ಹೈವೋಲ್ಟೇಜ್ ಪಂದ್ಯಕ್ಕೆ ಡಿವೈ ಪಾಟೀಲ್ ಮೈದಾನ ಆತಿಥ್ಯ* ಸನ್‌ರೈಸರ್ಸ್ ಹೈದರಾಬಾದ್ ಪರ ಪಾದಾರ್ಪಣೆ ಮಾಡಿದ ಸುಶಾಂತ್ ಸಿಂಗ್

ಮುಂಬೈ(ಏ.19): 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯ 17ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ (Sunrisers Hyderabad) ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ (Kane Williamson) ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಚೆನ್ನೈ ತಂಡದಲ್ಲಿ ಒಂದು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ

ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದ್ದು, ಮತ್ತೊಂದು ಹೈಸ್ಕೋರಿಂಗ್ ಗೇಮ್ ನಿರೀಕ್ಷೆ ಮಾಡಲಾಗಿದೆ. ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಸುಶಾಂಕ್ ಸಿಂಗ್ (Shashank Singh) ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಯುವ ವೇಗಿ ಮಾರ್ಕೊ ಯಾನ್ಸನ್‌ (Marco Jansen) ತಂಡ ಕೂಡಿಕೊಂಡಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್‌ ಪರ ಡ್ವೇನ್ ಪ್ರಿಟೋರಿಯಸ್ ಬದಲಿಗೆ ಮಾಂತ್ರಿಕ ಸ್ಪಿನ್ನರ್ ಮಹೀಶ್ ತೀಕ್ಷಣ (Maheesh Theekshana) ತಂಡ ಕೂಡಿಕೊಂಡಿದ್ದಾರೆ. ಎರಡೂ ತಂಡಗಳು ಟೂರ್ನಿಯಲ್ಲಿ ಸತತ ಸೋಲುಗಳನ್ನು ಕಂಡಿದ್ದು, ಇಂದು ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. 

ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದ್ದು, ಇದೀಗ ಶತಾಯಗತಾಯ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಏಕಪಕ್ಷೀಯವಾಗಿ ನಡೆದ ಕಾದಾಟದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಎದುರು ಸಿಎಸ್‌ಕೆ ತಂಡವು 6 ವಿಕೆಟ್‌ಗಳ ಸೋಲು ಕಂಡಿತ್ತು. ಇದಾದ ಬಳಿಕ ಲಖನೌ ಸೂಪರ್ ಜೈಂಟ್ಸ್ ಎದುರು 210 ರನ್ ಬಾರಿಸಿದ್ದರೂ, ಚೆನ್ನೈಗೆ ಗೆಲುವು ದಕ್ಕಿರಲಿಲ್ಲ. ಇನ್ನು ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ (Punjab Kings) ಎದುರು ಕೂಡಾ ಚೆನ್ನೈ ಸೋಲಿನ ಆಘಾತ ಅನುಭವಿಸಿತ್ತು.

Scroll to load tweet…

IPL 2022: ಆರ್​ಸಿಬಿ ನಂತರ ಕನ್ನಡಿಗರ ಸಪೋರ್ಟ್ ಯಾವ ತಂಡಕ್ಕೆ ಗೊತ್ತಾ..?

ಇನ್ನೊಂದೆಡೆ ಕೇನ್ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರಿಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಎದುರು 61 ರನ್‌ಗಳ ಅಂತರದ ಸೋಲು ಕಂಡಿದ್ದ ಆರೆಂಜ್ ಆರ್ಮಿ, ಎರಡನೇ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಎದುರು ರೋಚಕ ಸೋಲು ಕಂಡಿತ್ತು. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವುದು ಸನ್‌ರೈಸರ್ಸ್‌ ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿದೆ.

ತಂಡಗಳು ಹೀಗಿವೆ

ಚೆನ್ನೈ ಸೂಪರ್ ಕಿಂಗ್ಸ್‌: ಋುತುರಾಜ್‌ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೋಯಿನ್‌ ಅಲಿ, ಅಂಬಟಿ ರಾಯುಡು, ಎಂ ಎಸ್ ಧೋನಿ, ರವೀಂದ್ರ ಜಡೇಜಾ(ನಾಯಕ), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್‌, ಮಹೀಶ್ ತೀಕ್ಷಣ‌, ತುಷಾರ್ ದೇಶಪಾಂಡೆ‌, ಮುಕೇಶ್‌ ಚೌಧರಿ.

ಸನ್‌ರೈಸರ್ಸ್‌ ಹೈದ್ರಾಬಾದ್‌: ಅಭಿಷೇಕ್ ಶರ್ಮಾ‌, ಕೇನ್ ವಿಲಿಯಮ್ಸನ್‌(ನಾಯಕ), ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌, ನಿಕೋಲಸ್ ಪೂರನ್‌, ವಾಷಿಂಗ್ಟನ್ ಸುಂದರ್‌, ಸುಶಾಂಕ್ ಸಿಂಗ್‌, ಮಾರ್ಕೊ ಯಾನ್ಸೆನ್‌, ಭುವನೇಶ್ವರ್ ಕುಮಾರ್‌, ಉಮ್ರಾನ್ ಮಲಿಕ್‌, ಟಿ ನಟರಾಜನ್‌.

ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್‌ ಸ್ಟೇಡಿಯಂ
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌