ಲಿಯಾಮ್ ಲಿವಿಂಗ್‌ಸ್ಟೋನ್ ಏಕಾಂಗಿ ಹೋರಾಟ ಸನ್‌ರೈಸರ್ಸ್ ಹೈದರಾಬಾದ್ ಮಾರಕ ದಾಳಿ 151 ರನ್ ಸಿಡಿಸಿದ ಪಂಜಾಬ್ ಕಿಂಗ್ಸ್
ಮುಂಬೈ(ಏ.17): ಸನ್‌ರೈಸರ್ಸ್ ಹೈದರಾಬಾದ್ ಮಾರಕ ದಾಳಿ ನಡುವೆ ಲಿಯಾಮ್ ಲಿವಿಂಗ್‌ಸ್ಟೋನ್ ಹೋರಾಟ ನೀಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಅಲ್ಪಮೊತ್ತ ಭೀತಿಯಿಂದ ಪಾರು ಮಾಡಿದ್ದಾರೆ. ಲಿವಿಂಗ್‌ಸ್ಟೋನ್ ಹಾಫ್ ಸೆಂಚುರಿ ನೆರವಿನಿಂದ ಪಂಜಾಬ್ ಕಿಂಗ್ಸ್ 151 ರನ್ ಸಿಡಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ನಾಯಕ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಧವನ್ 8 ರನ್ ಸಿಡಿಸಿ ನಿರ್ಗಮಿಸಿದರು. ಮಯಾಂಕ್ ಅಗರ್ವಾಲ್ ಬದಲು ತಂಡ ಸೇರಿಕೊಂಡ ಪ್ರಭಸಿಮ್ರನ್ ಸಿಂಗ್ ಕೇವಲ 14 ರನ್ ಸಿಡಿಸಿ ನಿರಾಸೆ ಮೂಡಿಸಿದರು.
ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್, ಕ್ರಿಕೆಟ್ ದೇವರ ಕಾಲಿಗೆ ಬಿದ್ದಿದ್ಯಾಕೆ?
ಜಾನಿ ಬೈರ್‌ಸ್ಟೋ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಜೊತೆಯಾಟ ನೀಡುವ ಸೂಚನೆ ನೀಡಿದರು. ಆದರೆ ಜಾನಿ 12 ರನ್ ಸಿಡಿಸಿ ನಿರ್ಗಮಿಸಿದರು. 48 ರನ್ ಸಿಡಿಸುವಷ್ಟರಲ್ಲೇ ಪಂಜಾಬ್ ಕಿಂಗ್ಸ್ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಬಳಿಕ ಲಿಯಾಮ್ ಹೋರಾಟ ಆರಂಭಗೊಂಡಿತು.
ಲಿಯಾಮ್ ಬ್ಯಾಟಿಂಗ್‌ನಿಂದ ಪಂಜಾಬ್ ಚೇತರಿಸಿಕೊಂಡಿತು. ಆದರೆ ಜಿತೇಶ್ ಶರ್ಮಾ 11 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಶಾರುಖ್ ಖಾನ್ 26 ರನ್ ಕಾಣಿಕೆ ನೀಡಿದರು. ಆದರೆ ಏಕಾಂಗಿ ಹೋರಾಟ ನೀಡಿದ ಲಿಯಾಮ್ ಹಾಫ್ ಸೆಂಚುರಿ ಸಿಡಿಸಿದರು.
ಹೋರಾಟ ನೀಡಿದ ಲಿಯಾಮ್ ಲಿವಿಂಗ್‌ಸ್ಟೋನ್ 33 ಎಸೆತದಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 60 ರನ್ ಸಿಡಿಸಿದರು. ಇತ್ತ ಒಡೆನ್ ಸ್ಮಿತ್ 13 ರನ್ ಸಿಡಿಸಿ ಔಟಾದರು . ರಾಹುಲ್ ಚಹಾರ್ ಅಬ್ಬರಿಸಲಿಲ್ಲ. ವೈಭವ್ ಅರೋರಾ ಡಕೌಟ್ ಆದರು. ಅರ್ಶದೀಪ್ ರನೌಟ್‌ಗೆ ಬಲಿಯಾಗುವ ಮೂಲಕ ಪಂಜಾಬ್ ಕಿಂಗ್ಸ್ 151 ರನ್‌ಗೆ ಆಲೌಟ್ ಆಯಿತು. ಹೈದರಾಬಾದ್ ಪರ ಉಮ್ರಾನ್ ಮಲಿಕ್ 4 ವಿಕೆಟ್ ಕಬಳಿಸಿದರೆ, ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿ ಮಿಂಚಿದರು.
IPL 2022 ಕಾರ್ತಿಕ್ ಬ್ಯಾಟಿಂಗ್, ಹೇಜಲ್‌ವುಡ್ ಬೌಲಿಂಗ್, ಡೆಲ್ಲಿ ಮಣಿಸಿದ ಆರ್‌ಸಿಬಿ
ಐಪಿಎಲ್ ಅಂಕಪಟ್ಟಿ:
ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 5 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ. ಇತ್ತ ಸನ್‌ರೈರ್ಸ್ ಹೈದರಾಬಾದ್ ಕೂಡ 5ರಲ್ಲಿ 3 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಅಗ್ರಸ್ಥಾನವನ್ನು ಗುಜರಾತ್ ಟೈಟಾನ್ಸ್ ಅಲಂಕರಿಸಿದೆ. ಗುಜರಾತ್ 5 ಪಂದ್ಯಗಳ ಪೈಕಿ 4 ಗೆಲುವು ಕಂಡಿದೆ. ಲಖನೌ ಸೂಪರ್ ಜೈಂಟ್ಸ್ 6 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ವಿರುದ್ಧದ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ಪಂದ್ಯದಲ್ಲಿ 4 ಗೆಲುವು ದಾಖಲಿಸಿ 3ನೇ ಸ್ಥಾನ ಅಲಂಕರಿಸಿದೆ. ಇನ್ನು ರಾಜಸ್ಥಾನ ರಾಯಲ್ಸ್ 5 ರಲ್ಲಿ 3 ಗೆಲುವು ದಾಖಲಿಸುವ ಮೂಲಕ 4ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 5ನೇ ಸ್ಥಾನದಲ್ಲಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ 6ರಲ್ಲಿ 3 ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಇನ್ನು ಹೈದರಾಬಾದ್ 7ನೇ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 5 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ 8ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 5ರಲ್ಲಿ 1 ಗೆಲವು ದಾಖಲಿಸಿ 9ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 6 ಪಂದ್ಯಗಳನ್ನು ಸೋತು ಕೊನೆಯ ಸ್ಥಾನದಲ್ಲಿದೆ.
