ಡೆಲ್ಲಿ ವಿರುದ್ದ ಆರ್‌ಸಿಬಿ 16 ರನ್ ಗೆಲುವು ಮೊದಲು ಬ್ಯಾಟಿಂಗ್ ಮಾಡಿ ಗೆಲುವು ಸಾಧಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದ ಬೆಂಗಳೂರು

ಮುಂಬೈ(ಏ.16): ಬ್ಯಾಟಿಂಗ್‌ನಲ್ಲಿ ದಿನೇಶ್ ಕಾರ್ತಿಕ್ ಅಬ್ಬರಿಸಿದರೆ, ಬೌಲಿಂಗ್‌ನಲ್ಲಿ ಜೋಶ್ ಹೇಜಲ್‌ವುಡಡ್ ಮಿಂಚಿದ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ 16 ರನ್ ಗೆಲುವು ದಾಖಲಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಪಂದ್ಯ ಗೆದ್ದ ಹೆಗ್ಗಳಿಕೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾತ್ರವಾಗಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. 

190 ರನ್ ಟಾರ್ಗೆಟ್ ನಿರೀಕ್ಷಿಸದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಚೇಸಿಂಗ್ ಅಂದುಕೊಂಡಷ್ಟು ಸುಲಭವಿರಲಿಲ್ಲ. ಆದರೆ ಡ್ಯೂ ಫ್ಯಾಕ್ಟರ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೇಸಿಂಗ್ ಇತಿಹಾಸ, ಅಂಕಿ ಅಂಶಗಳು ಡೆಲ್ಲಿ ಪರವಾಗಿತ್ತು. ಚೇಸಿಂಗ್ ಆರಂಭಿಸಿದ ಡೆಲ್ಲಿ 50 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ 16 ರನ್ ಸಿಡಿಸಿ ಔಟಾದರು.

ಆದರೆ ಉತ್ತಮ ಫಾರ್ಮ್‌ನಲ್ಲಿರುವ ಡೇವಿಡ್ ವಾರ್ನರ್ ಅಬ್ಬರ ಆರಂಭಗೊಂಡಿತು. ವಾರ್ನರ್ ಬ್ಯಾಟಿಂಗ್ ಆರ್‌ಸಿಬಿಗೂ ತಲೆನೋವಾಗಿ ಪರಿಣಮಿಸಿತು. ದಿಟ್ಟ ಹೋರಾಟ ನೀಡಿದ ವಾರ್ನರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ವಾರ್ನರ್ 38 ಎಸೆತದಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 66 ರನ್ ಸಿಡಿಸಿದರು.

ಮಿಚೆಲ್ ಮಾರ್ಶ್ ಹಾಗೂ ನಾಯಕ ರಿಷಬ್ ಪಂತ್ ನಿಧಾನವಾಗಿ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಮಾರ್ಶ್ 14 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಇದರ ಬೆನ್ನಲ್ಲೋ ರೋವ್ಮಾನ್ ಪೊವೆಲ್ ಡಕೌಟ್ ಆದರು. 4 ವಿಕೆಚ್ ಕಬಳಿಸಿ ಪಂದ್ಯದ ಮೇಲೆ ಆರ್‌ಸಿಬಿ ಹಿಡಿತ ಸಾಧಿಸಿತು. ಡೆಲ್ಲಿ ತಂಡ ಒತ್ತಡಕ್ಕೆ ಸಿಲುಕಿತು. 

ರಿಷಬ್ ಪಂತ್ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಲಲಿತ್ ಯಾದವ್ 1 ರನ್ ಸಿಡಿಸಿ ಜೋಶ್ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.ರಿಷಬ್ ಪಂತ್ 17 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 34 ರನ್ ಸಿಡಿಸಿದರು. ಡೆಲ್ಲಿ ತಂಡ ಮತ್ತೆ ಹಿನ್ನಡೆ ಅನುಭವಿಸಿತು. ಶಾರ್ದೂಲ್ ಠಾಕೂರ್ ಹಾಗೂ ಅಕ್ಸರ್ ಪಟೇಲ್ ಮೇಲೆ ಹೆಚ್ಚಿನ ಒತ್ತಡ ಬಿದ್ದಿತು.

ಠಾಕೂರ್ 17 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ ಅಜೇಯ 10 ರನ್ ಹಾಗೂ ಕುಲ್ದೀಪ್ ಯಾದವ್ ಅಜೇಯ 10 ರನ್ ಸಿಡಿಸಿದರು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ನಷ್ಟಕ್ಕೆ 173 ರನ್ ಸಿಡಿಸಿತು. ಆರ್‌ಸಿಬಿ 16 ರನ್ ಗೆಲುವು ದಾಖಲಿಸಿತು. 

ರಾಯಲ್ ಚಾಲೆಂಜರ್ಸ್ ಇನ್ನಿಂಗ್ಸ್
ಡೆಲ್ಲಿ ವಿರುದ್ಧ ಅಬ್ಬರಿಸಲು ಕಣಕ್ಕಿಳಿದ ಆರ್‌ಸಿಬಿ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತ್ತು. ಆದರೆ ದಿನೇಶ್ ಕಾರ್ತಿಕ್ ಸಿಡಿಲಬ್ಬರದ ಬ್ಯಾಟಿಂಗ್, ಗ್ಲೆನ್ ಮ್ಯಾಕ್ಸ್‌ವೆಲ್ ಹೋರಾಟ, ಶಹಬಾಜ್ ಅಹಮ್ಮದ್ ಜೊತೆಯಾಟ ಆರ್‌ಸಿಬಿ ತಂಡಕ್ಕೆ ನೆರವಾಯಿತು. ಅನೂಜ್ ರಾವತ್ ಡಕೌಟ್, ಫಾಫ್ ಡುಪ್ಲೆಸಿಸ್ 8 ಹಾಗೂ ವಿರಾಟ್ ಕೊಹ್ಲಿ 12 ರನ್ ಸಿಡಿಸಿ ಔಟಾದರು. ಮ್ಯಾಕ್ಸ್‌ವೆಲ್ 34 ಎಸೆತದಲ್ಲಿ 55 ರನ್ ಸಿಡಿಸಿದರು. ಮ್ಯಾಕ್ಸ್‌ವೆಲ್ ಹೋರಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು. ಬಳಿಕ ದಿನೇಶ್ ಕಾರ್ತಿಕ್ ಅಬ್ಬರ ಆರಂಭಗೊಂಡಿತು. ಕಾರ್ತಿಕ್ ಸಿಕ್ಸರ್ ಹೊಡೆತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೆಕ್ಕಾಚಾರವೇ ಉಲ್ಟಾ ಹೊಡೆಯಿತು. ಕಾರ್ತಿಕ್‌ಗೆ ಶೆಹಬಾಜ್ ಅಹಮ್ಮದ್ ಉತ್ತಮ ಸಾಥ್ ನೀಡಿದರು. ಕಾರ್ತಿಕ್ ಅಜೇಯ 66 ಹಾಗೂ ಅಹಮ್ಮದ್ ಅಜೇಯ 32 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು.