Asianet Suvarna News Asianet Suvarna News

IPL 2022 ಸನ್ ರೈಸರ್ಸ್ ಗೆ ಭರ್ಜರಿ ಜಯ, ಮೊದಲ ಸೋಲು ಕಂಡ ಗುಜರಾತ್

ಕೇನ್ ವಿಲಿಯಮ್ಸನ್ ಬಾರಿಸಿದ ತಾಳ್ಮೆಯ ಅರ್ಧಶತಕ ಹಾಗೂ ಬೌಲರ್ ಗಳ ಶಿಸ್ತಿನ ದಾಳಿಯ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಹಾಲಿ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಮೊದಲ ಸೋಲು ದಯಪಾಲಿಸಿದೆ.
 

IPL 2022 SRH vs GT  Kane Williamson Half Century and Bowlers help Sunrisers Hyderabad beat Gujarat Titans san
Author
Bengaluru, First Published Apr 11, 2022, 11:20 PM IST

ಮುಂಬೈ (ಏ.11): ನಾಯಕ ಕೇನ್ ವಿಲಿಯಮ್ಸನ್ (Kane Williamson ) ಬಾರಿಸಿದ ತಾಳ್ಮೆಯ ಅರ್ಧಶತಕ ಹಾಗೂ ಬೌಲರ್ ಗಳ ಶಿಸ್ತಿನ ನಿರ್ವಹಣೆಯ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ 15ನೇ ಆವೃತ್ತಿಯ ಐಪಿಎಲ್ (IPL 2022) ನಲ್ಲಿ ತನ್ನ 2ನೇ ಗೆಲುವು ದಾಖಲಿಸಿದೆ. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ (Gujarat Titans) ತಂಡ ಹಾಲಿ ಆವೃತ್ತಿಯ ಮೊದಲ ಸೋಲು ಕಂಡಿದೆ.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ (GT) ತಂಡ, ನಾಯಕ ಹಾರ್ದಿಕ್ ಪಾಂಡ್ಯ (50 ರನ್, 42 ಎಸೆತ, 4 ಬೌಂಡರಿ, 1 ಸಿಕ್ಸರ್) ಬಾರಿಸಿದ ಅರ್ಧಶತಕದ ನೆರವಿನಿಂದ 7 ವಿಕೆಟ್ ಗೆ 162 ರನ್ ಬಾರಿಸಿತು. ಪ್ರತಿಯಾಗಿ ಸನ್ ರೈಸರ್ಸ್ ಹೈದರಾಬಾದ್ (SRH) 19.1 ಓವರ್ ಗಳಲ್ಲಿ 2 ವಿಕೆಟ್ ಗೆ 168 ರನ್ ಬಾರಿಸಿ 8 ವಿಕೆಟ್ ಗೆಲುವು ಕಂಡಿತು. 

ಗೆಲುವಿಗೆ 34 ರನ್ ಬೇಕಿದ್ದಾಗ ಅರ್ಧಶತಕ ಬಾರಿಸಿದ್ದ ಕೇನ್ ವಿಲಿಯಮ್ಸನ್ (57ರನ್, 46 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಔಟಾದರೂ, ನಿಕೋಲಸ್ ಪೂರನ್ (34*ರನ್, 18 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಏಡೆನ್ ಮಾರ್ಕ್ರಮ್ (12) ಆಕರ್ಷಕ ಆಟವಾಡಿ ತಂಡದ ಗೆಲುವನ್ನು ಖಚಿತಪಡಿಸಿದರು.

ಚೇಸಿಂಗ್ ಆರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಲಿಲ್ಲ. ಮೊದಲ ವಿಕೆಟ್ ಗೆ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮ ಅಕರ್ಷಕ 64 ರನ್ ಜೊತೆಯಾಟವಾಡಿ ತಂಡದ ಗೆಲುವನ್ನು ಸುಲಭ ಮಾಡಿದ್ದರು. ಕಳೆದ ಪಂದ್ಯದಲ್ಲಿ ತಂಡದ ಗೆಲುವಿಗೆ ಆಕರ್ಷಕ ಕಾಣಿಕೆ ನೀಡಿದ್ದ ಅಭಿಷೇಕ್ ಶರ್ಮ ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ಗಮನಸೆಳೆದರು. 32 ಎಸೆತಗಳನ್ನು ಎದುರಿಸಿದ ಯಯವ ಆಟಗಾರ 6 ಮನಮೋಹಕ ಬೌಂಡರಿಗಳ ಮೂಲಕ 42 ರನ್ ಬಾರಿಸಿದ್ದರು.

IPL 2022 ಹಾರ್ದಿಕ್ ಪಾಂಡ್ಯ ಅರ್ಧಶತಕ, ಸನ್ ರೈಸರ್ಸ್ ಗೆ ಸವಾಲಿನ ಗುರಿ

ಇನ್ನೊಂದೆಡೆ ಆರಂಭದಲ್ಲಿಯೇ ನಿಖರ ಎಲ್ ಬಿಡಬ್ಲ್ಯುವಿನಿಂದ ಪಾರಾಗಿದ್ದ ಕೇನ್ ವಿಲಿಯಮ್ಸನ್, ಯುವ ಆಟಗಾರ ಅಭಿಷೇಕ್ ಶರ್ಮ ಬ್ಯಾಟಿಂಗ್ ಗೆ ಹಲವು ಬಾರಿ ಸಲಹೆ ನೀಡುತ್ತಿದ್ದರು. ವೇಗದ ಬೌಲಿಂಗ್ ಎದುರಿಸುವಾಗ ಹಾಗೂ ಸ್ವಿಂಗ್ ಎಸೆತಗಳನ್ನು ಎದುರಿಸುವ ವೇಳೆ ಪರದಾಟ ನಡೆಸುತ್ತಿದ್ದ ಅಭಿಷೇಕ್ ಶರ್ಮಗೆ ವಿಲಿಯಮ್ಸನ್ ನೆರವಾದರು. ಇದರಿಂದಾಗಿ ಮೊದಲ ನಾಲ್ಕು ಓವರ್ ಗಳಲ್ಲಿ ಸನ್ ರೈಸರ್ಸ್ ಒಂದೂ ಬೌಂಡರಿಗಳನ್ನು ಬಾರಿಸಿರಲಿಲ್ಲ. ಆದರೆ, ಶಮಿ ಎಸೆದ 5ನೇ ಓವರ್ ನ ಮೊದಲ ಎರಡು ಎಸೆತಗಳನ್ನ ಸಿಕ್ಸರ್ ಹಾಗೂ ಬೌಂಡರಿಗಟ್ಟಿದ ವಿಲಿಯಮ್ಸನ್ ತಂಡದ ರನ್ ವೇಗಕ್ಕೆ ಚಾಲನೆ ನೀಡಿದ್ದರು. ಲಾಕಿ ಫರ್ಗುಸನ್ ಎಸೆದ ಮೊದಲ ಓವರ್ ನಲ್ಲೇ ನಾಲ್ಕು ಬೌಂಡರಿಗಳನ್ನು ಚಚ್ಚುವ ಮೂಲಕ ಆರಂಭಿಕರು ಮೈಚಳಿ ಬಿಟ್ಟು ಆಡಲು ಆರಂಭಿಸಿದ್ದರು.

ರವಿಚಂದ್ರನ್ ಅಶ್ವಿನ್ ರಿಟೈರ್‌ ಔಟ್..! ಹಾಗಂದರೇನು..? ನಿಯಮವೇನು ಹೇಳುತ್ತೆ..?

ಮೊದಲ ವಿಕೆಟ್ ಗೆ 53 ಎಸೆತಗಳಲ್ಲಿ64 ರನ್ ಜೊತೆಯಾಟವಾಡಿ ಈ ಜೋಡಿ ಬೇರ್ಪಟ್ಟಿತು. 9ನೇ ಓವರ್ ನಲ್ಲಿ ತಮ್ಮ ಮೊದಲ ಓವರ್ ಮಾಡಿದ ರಶೀದ್ ಖಾನ್, 5ನೇ ಎಸೆತದಲಲ್ಲಿ ಅಭಿಷೇಕ್ ಶರ್ಮ ವಿಕೆಟ್ ಉರುಳಿಸಿದರು. ಆದರೆ, ಅದಾಗಲೇ ಸನ್ ರೈಸರ್ಸ್ ತಂಡಕ್ಕೆ ಗೆಲುವಿನ ವಿಶ್ವಾಸ ಬಂದಿತ್ತು. 2ನೇ ವಿಕೆಟ್ ಗೆ ವಿಲಿಯಮ್ಸನ್ ಗೆ ಜೊತೆಯಾದ ರಾಹುಲ್ ತ್ರಿಪಾಠಿ (17) ಹೆಚ್ಚು ಹೊತ್ತು ಇರಲಿಲ್ಲ. 11 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಸಿಡಿಸಿದ್ದ ರಾಹುಲ್ ತ್ರಿಪಾಠಿ, ಮೀನಖಂಡದ ಗಾಯದಿಂದಾಗಿ ನಿವೃತ್ತಿ ಪಡೆದುಕೊಂಡರು. ಇದರ ನಡುವೆ ಮೊಹಮದ್ ಶಮಿ, ತ್ರಿಪಾಠಿಯ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದ್ದು, ಹಾರ್ದಿಕ್ ಪಾಂಡ್ಯ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನೊಂದೆಡೆ ಕಲ್ಲು ಬಂಡೆಯ ರೀತಿ ನಿಂತಿದ್ದ ಕೇನ್ ವಿಲಿಯಮ್ಸನ್ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೇನ್ ವಿಲಿಯಮ್ಸನ್, ತಂಡದ ಗೆಲುವಿಗೆ 23 ಎಸೆತಗಳಲ್ಲಿ 34 ರನ್ ಬೇಕಿದ್ದಾಗ ಔಟ್ ಆದರು.

Latest Videos
Follow Us:
Download App:
  • android
  • ios