* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ದತೆ ಆರಂಭ* ಮಾರ್ಚ್ 26ರಿಂದ 2022ನೇ ಸಾಲಿನ ಐಪಿಎಲ್ ಟೂರ್ನಿ ಆರಂಭ* ಇಂದು ಲೀಗ್ ಹಂತದ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟ?
ನವದೆಹಲಿ(ಮಾ.06): ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್‌ನ ಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ ಪ್ರಕಟಿಸುವ ಸಾಧ್ಯತೆಯಿದೆ. ಐಪಿಎಲ್ ಅಭಿಮಾನಿಗಳ ಪಾಲಿಗೆ ಇಂದು ಬಿಸಿಸಿಐ ಸಿಹಿ ಸುದ್ದಿ ನೀಡುವುದು ಬಹುತೇಕ ಖಚಿತ ಎನಿಸಿದೆ. ಮಾರ್ಚ್ 26ರಿಂದ 2022ನೇ ಸಾಲಿನ ಐಪಿಎಲ್‌ಗೆ ಚಾಲನೆ ದೊರೆಯಲಿದ್ದು, ಮೇ 29ಕ್ಕೆ ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಈಗಾಗಲೇ ಖಚಿತಪಡಿಸಿದೆ.
ಭಾನುವಾರ(ಮಾ.6) ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಿದ್ದು, ಪ್ಲೇ-ಆಫ್ ನಡೆಯುವ ಸ್ಥಳ ಮತ್ತು ದಿನಾಂಕವನ್ನು ಮುಂದೆ ಪ್ರಕಟಿಸುತ್ತೇವೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾಗಿ ವರದಿಯಾಗಿದೆ. ಇನ್ನು, ವಿದೇಶಿ ಆಟಗಾರರ ಕ್ವಾರಂಟೈನ್ ಅವಧಿಯನ್ನು 5ರಿಂದ 3 ದಿನಕ್ಕೆ ಇಳಿಸುವ ಪ್ರಸ್ತಾವನೆ ಸಹ ಇದ್ದು, ಈ ಕುರಿತು ಶೀಘ್ರದಲ್ಲೇ ಬಿಸಿಸಿಐ ನಿರ್ಧಾರ ಪ್ರಕಟಿಸಲಿದೆ.
ಭಾನುವಾರ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಬಹುತೇಕ ಪ್ರಕಟಗೊಳ್ಳಲಿದೆ. ಸದ್ಯ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿದೆ. ಲೀಗ್ ಹಂತದ ಪಂದ್ಯಗಳಿಗೆ 25% ಪ್ರೇಕ್ಷಕರಿಗೆ ಮೈದಾನ ಪ್ರವೇಶಿಸಲು ಅವಕಾಶ ನೀಡಲು ತೀರ್ಮಾನಿಸಲಿದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲೇ ಆಫ್ಸ್ ಪಂದ್ಯಗಳು ಎಲ್ಲಿ ಆಯೋಜನೆಗೊಳ್ಳಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಅಹಮದಾಬಾದ್‌ನಲ್ಲಿ ಪ್ಲೇ ಆಫ್ ಪಂದ್ಯಗಳು ನಡೆದರೆ, 50% ಪ್ರೇಕ್ಷಕರು ಮೈದಾನ ಪ್ರವೇಶಕ್ಕೆ ಅವಕಾಶ ನೀಡಬಹುದು. ಆ ಕುರಿತಂತೆ ನಾವು ಯೋಜನೆ ರೂಪಿಸುತ್ತಿದ್ದೇವೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ನಾವು ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸುವ ವಿಶ್ವಾಸವಿದೆ ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಪ್ಲೇ-ಆಫ್ ಹಂತದಲ್ಲಿ 4 ಪಂದ್ಯಗಳು ಇರಲಿವೆ. ಮುಂಬೈನಲ್ಲಿರುವ ವಾಂಖೆಡೆ ಮೈದಾನ, ಡಿ.ವೈ. ಪಾಟೀಲ್ ಮೈದಾನ ಹಾಗೂ ಬ್ರಬೋರ್ನ್ ಮೈದಾನದಲ್ಲಿ ಒಟ್ಟು 55 ಐಪಿಎಲ್ ಲೀಗ್ ಪಂದ್ಯಗಳು ನಡೆದರೆ, ಇನ್ನುಳಿದ 15 ಲೀಗ್ ಪಂದ್ಯಗಳಿಗೆ ಪುಣೆ ಮೈದಾನ ಆತಿಥ್ಯವನ್ನು ವಹಿಸಲಿದೆ. 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಲಖನೌ ಸೂಪರ್‌ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿವೆ.
ಐಪಿಎಲ್ ಆಡುವ ಭಾರತ ಆಟಗಾರಿಗೆ ವಿಶೇಷ ಶಿಬಿರ
ಬೆಂಗಳೂರು: ಐಪಿಎಲ್ ಆಡಲು ಸಿದ್ಧವಾಗಿರುವ ಭಾರತೀಯ ಆಟಗಾರರಿಗೆ ಬಿಸಿಸಿಐ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ 10 ದಿನಗಳ ವಿಶೇಷ ಫಿಟ್ನೆಸ್ ಪರೀಕ್ಷಾ ತರಬೇತಿ ಆಯೋಜಿಸಿದೆ. ಸದ್ಯ ಶ್ರೀಲಂಕಾ ವಿರುದ್ಧ ಟೆಸ್ಟ್ ಆಡುತ್ತಿರುವ ಆಟಗಾರರ ಹೊರತು ಉಳಿದವರು ಶನಿವಾರ ಎನ್‌ಸಿಎಗೆ ಹಾಜರಾಗಲು ಬಿಸಿಸಿಐ ಸೂಚಿಸಿತ್ತು. ಟೂರ್ನಿಯುದ್ದಕ್ಕೂ ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳಲು ಆಯ್ಕೆ ಸಮಿತಿಯ ನೀಡಿದ ಸಲಹೆ ಮೇರೆಗೆ ಬಿಸಿಸಿಐ ಈ ಶಿಬಿರ ಆಯೋಜಿಸಿದೆ ಎಂದು ತಿಳಿದುಬಂದಿದೆ.
