* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಆರ್‌ಸಿಬಿ ನಾಯಕರಾಗಿ ಫಾಫ್ ಡು ಪ್ಲೆಸಿಸ್ ನೇಮಕ* ಫಾಫ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ಋತುರಾಜ್ ಗಾಯಕ್ವಾಡ್* 7 ಕೋಟಿ ರುಪಾಯಿ ನೀಡಿ ಫಾಫ್‌ರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದ ಆರ್‌ಸಿಬಿ
ಬೆಂಗಳೂರು(ಮಾ.13): ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಋತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡು ಪ್ಲೆಸಿಸ್ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿ ಗುರುತಿಸಿಕೊಂಡಿತ್ತು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಡು ಪ್ಲೆಸಿಸ್ (Faf du Plessis) ಹಾಗೂ ಗಾಯಕ್ವಾಡ್ ಜೋಡಿ ಮಹತ್ವದ ಪಾತ್ರ ವಹಿಸಿತ್ತು. ಆದರೆ ಕಳೆದ ತಿಂಗಳು ನಡೆದ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ಫ್ರಾಂಚೈಸಿಯು ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಲು ವಿಫಲವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಹರಾಜಿನಲ್ಲಿ 7 ಕೋಟಿ ರುಪಾಯಿ ನೀಡಿ ಫಾಫ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಇದೀಗ ಐಪಿಎಲ್‌ನ ಹೊಸ ಬೆಳವಣಿಗೆ ಎನ್ನುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮುಂಬರುವ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಫಾಫ್ ಡು ಪ್ಲೆಸಿಸ್ ಅವರಿಗೆ ನಾಯಕ ಪಟ್ಟ ಕಟ್ಟಲಾಗಿದೆ. 2021ನೇ ಸಾಲಿನ ಐಪಿಎಲ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ (Virat Kohli) ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದರು. ಇನ್ನು 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳಿದ್ದರು. ಹೀಗಾಗಿ ಆರ್‌ಸಿಬಿ ಫ್ರಾಂಚೈಸಿಯು ತನ್ನ ನೂತನ ನಾಯಕನ ಹೆಸರನ್ನು ಘೋಷಿಸಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿತ್ತು. ಇದೀಗ ಬೆಂಗಳೂರು ಮೂಲದ ಫ್ರಾಂಚೈಸಿಯು ಸಾಕಷ್ಟು ಅಳೆದು-ತೂಗಿ ಫಾಫ್ ಡು ಪ್ಲೆಸಿಸ್ ಅವರಿಗೆ ನಾಯಕ ಪಟ್ಟ ಕಟ್ಟಿದೆ.
ಶನಿವಾರ ಬೆಂಗಳೂರಿನಲ್ಲಿ ನಡೆದ RCB Unbox ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ನೂತನ ನಾಯಕ ಹೆಸರು ಘೋಷಿಸುವುದರ ಜತೆಗೆ ನೂತನ ಜೆರ್ಸಿಯನ್ನು ಅನಾವರಣ ಮಾಡಿತು. ಸಾಕಷ್ಟು ಅಭಿಮಾನಿಗಳ ನಡುವೆ ನಡೆದ ಸುಂದರ ಕಾರ್ಯಕ್ರಮದಲ್ಲಿ ಫಾಫ್‌ಗೆ ಆರ್‌ಸಿಬಿ ಪಟ್ಟ ಕಟ್ಟಲಾಯಿತು. ತಮ್ಮ ಮೇಲೆ ವಿಶ್ವಾಸವಿಟ್ಟು ಆರ್‌ಸಿಬಿ ನಾಯಕ ಪಟ್ಟ ನೀಡಿರುವುದಕ್ಕೆ ಫಾಫ್ ಡು ಪ್ಲೆಸಿಸ್ ಬೆಂಗಳೂರು ಮೂಲದ ಫ್ರಾಂಚೈಸಿಗೆ ಧನ್ಯವಾದಗಳನ್ನು ಅರ್ಪಿಸಿ ಟ್ವೀಟ್ ಮಾಡಿದ್ದಾರೆ. ಆರ್‌ಸಿಬಿ ತಂಡದ ನಾಯಕರಾಗಿ ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಆರ್‌ಸಿಬಿ ಕಪ್ ಗೆಲ್ಲಲು ನನ್ನಿಂದ ಏನೆಲ್ಲಾ ಸಾಧ್ಯವೋ ಅದನ್ನೆಲ್ಲವನ್ನು ಮಾಡಲು ಸಿದ್ದರಿರುವುದಾಗಿ ಫಾಫ್ ಟ್ವೀಟ್ ಮಾಡಿದ್ದರು.
IPL 2022: ಆರ್‌ಸಿಬಿಯ ಹೊಸ ಜೆರ್ಸಿ ಅನಾವರಣ, ಜೆರ್ಸಿ ತುಂಬಾ ಇಷ್ಟವಾಯ್ತು ಎಂದ ಕಿಂಗ್ ಕೊಹ್ಲಿ..!
ಫಾಫ್ ಡು ಪ್ಲೆಸಿಸ್ ಅವರ ಟ್ವೀಟ್ ಗಮನಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ (Ruturaj Gaikwad), 'ಗುಡ್ ಲಕ್ ಪಾರ್ಟ್ನರ್' ಎಂದು ಭಾವನಾತ್ಮಕವಾಗಿ ಶುಭ ಹಾರೈಸಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಫಾಫ್ ಥ್ಯಾಂಕ್ಯೂ ಎಂದು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಉಭಯ ತಂಡಗಳ ನಡುವಿನ ಈ ಸಂಭಾಷಣೆ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಇನ್ನು ಸಿಎಸ್‌ಕೆ ಮತ್ತೋರ್ವ ಆರಂಭಿಕ ಬ್ಯಾಟರ್ ಆಗಿದ್ದ ಫಾಫ್ ಡು ಪ್ಲೆಸಿಸ್, ಗಾಯಕ್ವಾಡ್ ಅವರಿಗಿಂತ ಕೇವಲ 2 ರನ್ ಕಡಿಮೆ ಬಾರಿಸಿದ್ದರು. ಇದೀಗ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
