* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂದು ಕೆಕೆಆರ್ ಸವಾಲು* ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು* ಗೆಲುವಿನ ಲಯ ಮುಂದುವರೆಸಿಕೊಂಡು ಹೋಗಲು ಕಾಯುತ್ತಿದೆ ಕೆಕೆಆರ್
ನವಿ ಮುಂಬೈ(ಮಾ.30): ಸೋಲಿನೊಂದಿಗೆ 15ನೇ ಆವೃತ್ತಿಯ ಐಪಿಎಲ್ (IPL 2022) ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) (RCB) ಬುಧವಾರ ಕಳೆದ ಬಾರಿ ರನ್ನರ್-ಅಪ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಸವಾಲನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿರುವ ಆರ್‌ಸಿಬಿ ಗೆಲುವಿನ ಖಾತೆಯಲ್ಲಿ ಎದುರು ನೋಡುತ್ತಿದ್ದರೆ, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ (Chennai Super Kings) ಸೋಲುಣಿಸಿದ್ದ ಕೆಕೆಆರ್ ಮತ್ತೊಂದು ಜಯದ ಮೇಲೆ ಕಣ್ಣಿಟ್ಟಿದೆ.
ನಾಯಕತ್ವ ತ್ಯಜಿಸಿ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ (Virat Kohli) ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ನೂತನ ನಾಯಕ ಫಾಫ್ ಡು ಪ್ಲೆಸಿಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗಲು ಎದುರು ನೋಡುತ್ತಿದ್ದಾರೆ. ಚೆನ್ನೈ ವಿರುದ್ಧ ಸಾಧಾರಣ ಪ್ರದರ್ಶನ ನೀಡಿದ್ದ ಯುವ ಆಟಗಾರ ಅನುಜ್ ರಾವತ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಬ್ಯಾಟಿಂಗ್‌ನಲ್ಲಿ ಮಿಂಚಬೇಕಿದೆ. ಅನುಭವಿ ದಿನೇಶ್ ಕಾರ್ತಿಕ್ ಲಯ ಮುಂದುವರಿಸುವ ತವಕದಲ್ಲಿದ್ದಾರೆ. ಶೆರ್ಫಾನೆ ರುಥರ್‌ಫೋರ್ಡ್, ಡೇವಿಡ್ ವಿಲ್ಲಿ ತಂಡಕ್ಕೆ ಬಲ ಒದಗಿಸಲಿದ್ದು, ಹಸರಂಗ, ಶಾಬಾಜ್ ಅಹ್ಮದ್ ಆಲ್ರೌಂಡರ್‌ಗಳ ಹೊಣೆ ನಿಭಾಯಿಸಬೇಕಿದೆ.
ಬೌಲಿಂಗ್ ತಲೆಬಿಸಿ:
ಎಷ್ಟೇ ಉತ್ತಮ ಬ್ಯಾಟರ್‌ಗಳನ್ನು ಹೊಂದಿದ್ದರೂ, ತಂಡದ ಬೌಲರ್‌ಗಳ ಕಳಪೆ ಪ್ರದರ್ಶನ ಈ ಬಾರಿಯೂ ಮುಂದುವರಿದಿದ್ದು ನಾಯಕನ ತಲೆನೋವಿಗೆ ಕಾರಣವಾಗಿದೆ. 7 ಕೋಟಿ ರುಪಾಯಿ ಪಡೆದು ಹರಾಜಿಗೂ ಮೊದಲೇ ತಂಡದಲ್ಲಿ ಉಳಿದಿದ್ದ ವೇಗಿ ಮೊಹಮದ್ ಸಿರಾಜ್ ಕಳೆದ ಪಂದ್ಯದಲ್ಲಿ 4 ಓವರಲ್ಲಿ 59 ರನ್ ನೀಡಿ ಸಂಪೂರ್ಣ ವಿಫಲರಾಗಿದ್ದರು. ಕಳೆದ ಆವೃತ್ತಿಯ ಪರ್ಪಲ್ ಕ್ಯಾಪ್ ಪಡೆದಿದ್ದ ಹರ್ಷಲ್ ಪಟೇಲ್, ಯುವ ಬೌಲರ್ ಆಕಾಶ್ ದೀಪ್ ಕೂಡಾ ದುಬಾರಿಯಾಗಿದ್ದರು. ಕೆಕೆಆರ್ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಾದ ಜವಾಬ್ದಾರಿ ಬೌಲರ್‌ಗಳ ಮೇಲಿದ್ದು, ಬೌಲಿಂಗ್ ವಿಭಾಗ ಉತ್ತಮ ಪ್ರದರ್ಶನ ತೋರಿದರೆ ಮಾತ್ರ ಗೆಲುವು ದಕ್ಕಲಿದೆ. ಇನ್ನು, ತಂಡದ ಕ್ಷೇತ್ರರಕ್ಷಣೆಯೂ ಬಲಿಷ್ಠವಾಗಬೇಕಿದ್ದು, ಕಳೆದ ಪಂದ್ಯದ ತಪ್ಪು ಮರುಕಳಿಸದಂತೆ ನೋಡಬೇಕಿದೆ.
IPL 2022: ಎಬಿ ಡಿವಿಲಿಯರ್ಸ್ ಕಳಿಸಿದ ವಾಯ್ಸ್ ಮೆಸೇಜ್ ಬಗ್ಗೆ ತುಟಿಬಿಚ್ಚಿದ ವಿರಾಟ್ ಕೊಹ್ಲಿ..!
ಮತ್ತೊಂದು ಗೆಲುವಿನ ನಿರೀಕ್ಷೆ:
ಶಿಸ್ತುಬದ್ಧ ಬೌಲಿಂಗ್ ದಾಳಿ ಮೂಲಕ ಚೆನ್ನೈ ಆಟಗಾರರನ್ನು ತಬ್ಬಿಬ್ಬುಗೊಳಿಸಿದ್ದ ಕೆಕೆಆರ್, ಆರ್‌ಸಿಬಿಗೂ ಕಂಟಕವಾಗಲು ಎದುರು ನೋಡುತ್ತಿದೆ. ವೇಗದ ಬೌಲಿಂಗ್ ಪಡೆಯನ್ನು ಉಮೇಶ್ ಯಾದವ್ ಮುನ್ನಡೆಸಲಿದ್ದು, ಶಿವಂ ಮಾವಿ ಮತ್ತು ಆ್ಯಂಡ್ರೆ ರಸೆಲ್ ಉತ್ತಮ ಬೆಂಬಲ ನೀಡಲು ಎದುರು ನೋಡುತ್ತಿದ್ದಾರೆ. ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ತಮ್ಮ ಸ್ಪಿನ್ ಅಸ್ತ್ರದ ಮೂಲಕವೇ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ತವಕದಲ್ಲಿದ್ದಾರೆ. ಇನ್ನು, ಅಜಿಂಕ್ಯ ರಹಾನೆ ತಂಡದ ಬ್ಯಾಟಿಂಗ್ ಆಧಾರಸ್ತಂಭ ಎನಿಸಿಕೊಂಡಿದ್ದು, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್, ಶೆಲ್ಡಾನ್ ಜಾಕ್ಸನ್, ಸ್ಯಾಮ್ ಬಿಲ್ಲಿಂಗ್ ಕೂಡಾ ತಂಡಕ್ಕೆ ನೆರವಾಗಲು ಕಾಯುತ್ತಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಡು ಪ್ಲೆಸಿ(ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಕಾರ್ತಿಕ್, ರುಥರ್‌ಫೋರ್ಡ್, ಶಾಬಾಜ್, ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್, ಆಕಾಶ್ ದೀಪ್, ಸಿರಾಜ್.
ಕೆಕೆಆರ್: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್‌್ಸ, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಶೆಲ್ಡಾನ್ ಜಾಕ್ಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಉಮೇಶ್ ಯಾದವ್
ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ,
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
