* 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಆರ್‌ಸಿಬಿ ಸವಾಲು* ಹ್ಯಾಟ್ರಿಕ್ ಸೋಲಿನಿಂದ ಕಂಗಾಲಾಗಿರುವ ರೋಹಿತ್ ಶರ್ಮಾ ಪಡೆ* ಆರ್‌ಸಿಬಿ ತಂಡಕ್ಕಿಂದು ಗ್ಲೆನ್ ಮ್ಯಾಕ್ಸ್‌ವೆಲ್ ಬಲ
ಪುಣೆ(ಏ.09): ಹೊಸ ನಾಯಕತ್ವ, ಹೊಸ ತಂಡ ಸಂಯೋಜನೆಯೊಂದಿಗೆ ಸುಧಾರಿತ ಪ್ರದರ್ಶನ ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) 15ನೇ ಆವೃತ್ತಿಯ ಐಪಿಎಲ್‌ನಲ್ಲಿ ತನ್ನ ಗೆಲುವಿನ ಲಯ ಮುಂದುವರಿಸಲು ಕಾತರಿಸುತ್ತಿದೆ. ಶನಿವಾರ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಫಾಫ್ ಡು ಪ್ಲೆಸಿಸ್ (Faf du Plessis) ಪಡೆ ಸೆಣಸಲಿದ್ದು, ಈ ಪಂದ್ಯ ಈ ಆವೃತ್ತಿಯ ಬಹು ನಿರೀಕ್ಷಿತ ಪಂದ್ಯಗಳಲ್ಲಿ ಒಂದೆನಿಸಿದೆ. ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಆರ್‌ಸಿಬಿ, ಆ ಬಳಿಕ ಕೆಕೆಆರ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧ ಒತ್ತಡದ ಪರಿಸ್ಥಿತಿಯಿಂದ ಮೇಲೆದ್ದು ಜಯದ ನಗೆ ಬೀರಿತ್ತು. ಎರಡೂ ಪಂದ್ಯಗಳಲ್ಲಿ ತಂಡದ ಬೌಲರ್‌ಗಳ ಆಕರ್ಷಕ ಪ್ರದರ್ಶನ ತೋರಿದ್ದರು. ಮುಂಬೈ ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿ ತನ್ನ ಬೌಲರ್‌ಗಳ ಮೇಲೆಯೇ ಹೆಚ್ಚು ವಿಶ್ವಾಸವಿರಿಸಬಹುದು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell), ಈ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿದ್ದು ಮೊದಲ ಅವಕಾಶದಲ್ಲೇ ಮಿಂಚು ಹರಿಸಲು ಕಾಯುತ್ತಿದ್ದಾರೆ. ಮ್ಯಾಕ್ಸ್‌ವೆಲ್ ಸೇರ್ಪಡೆ ಆರ್‌ಸಿಬಿಗೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ಕ್ಷೇತ್ರಗಳಲ್ಲಿ ಬಲ ಹೆಚ್ಚಿಸಲಿದೆ. ವಿಂಡೀಸ್‌ನ ಶೆರ್ಫಾನೆ ರುಥರ್‌ಫೋರ್ಡ್ ತಮ್ಮ ಸ್ಥಾನವನ್ನು ಮ್ಯಾಕ್ಸ್‌ವೆಲ್‌ಗೆ ಬಿಟ್ಟುಕೊಡುವ ನಿರೀಕ್ಷೆ ಇದೆ. ಫಾಫ್ ಡು ಪ್ಲೆಸಿ, ಅನುಜ್ ರಾವತ್ ಪವರ್-ಪ್ಲೇನಲ್ಲಿ ಇನ್ನಷ್ಟು ವೇಗವಾಗಿ ರನ್ ಗಳಿಸಬೇಕಿದೆ. ವಿರಾಟ್ ಕೊಹ್ಲಿ (Virat Kohli) ದೊಡ್ಡ ಇನ್ನಿಂಗ್ಸ್‌ಗಾಗಿ ಕಾಯುತ್ತಿದ್ದಾರೆ. ದಿನೇಶ್ ಕಾರ್ತಿಕ್, ಶಾಬಾಜ್ ಅಹ್ಮದ್ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿ ಆಡುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಹರ್ಷಲ್ ಪಟೇಲ್, ವನಿಂದು ಹಸರಂಗ ತಂಡದ ಬೌಲಿಂಗ್ ಟ್ರಂಪ್ ಕಾರ್ಡ್ಸ್ ಎನಿಸಿದ್ದು, ಮೊಹಮದ್ ಸಿರಾಜ್ ಹಾಗೂ ಡೇವಿಡ್ ವಿಲ್ಲಿ ಸ್ಥಿರ ಪ್ರದರ್ಶನ ತೋರಬೇಕಿದೆ.
ಒತ್ತಡದಲ್ಲಿ ಮುಂಬೈ: 5 ಬಾರಿ ಚಾಂಪಿಯನ್ ಮುಂಬೈ ತನ್ನ ಬ್ಯಾಟರ್‌ಗಳ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ. ಸೂರ್ಯಕುಮಾರ್ ತಾವಾಡಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ತಾವೆಷ್ಟು ಅಪಾಯಕಾರಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಇಶಾನ್ ಕಿಶನ್(Ishan Kishan), ‘ಬೇಬಿ ಎಬಿಡಿ’ ಖ್ಯಾತಿಯ ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ ನಿರೀಕ್ಷೆ ಮೂಡಿಸಿದ್ದಾರೆ. ರೋಹಿತ್ ಲಯಕ್ಕೆ ಮರಳಲು ಕಾಯುತ್ತಿದ್ದು, ಪೊಲ್ಲಾರ್ಡ್‌ರ ಬ್ಯಾಟಿಂಗ್ ಅನ್ನು ಆರ್‌ಸಿಬಿ ಲಘುವಾಗಿ ಪರಿಗಣಿಸುವ ಹಾಗಿಲ್ಲ.
IPL 2022 ರಾಹುಲ್ ಟೆವಾಟಿಯಾ ಜೋಡಿ ಸಿಕ್ಸರ್ ಗೆ ಪಂಜಾಬ್ ಪಂಚರ್!
ತಂಡದ ಬೌಲಿಂಗ್ ಪಡೆ ಮೊದಲಿಗಿಂತ ದುರ್ಬಲವಾಗಿ ತೋರುತ್ತಿದೆ. ಪ್ರಮುಖ ಬೌಲಿಂಗ್ ಅಸ್ತ್ರ ಎನಿಸಿರುವ ಜಸ್‌ಪ್ರೀತ್ ಬುಮ್ರಾ ಸಹ ದುಬಾರಿಯಾಗುತ್ತಿದ್ದಾರೆ. ಟೈಮಲ್ ಮಿಲ್ಸ್, ಮುರುಗನ್ ಅಶ್ವಿನ್, ಡೇನಿಯಲ್ ಸ್ಯಾಮ್ಸ್, ಬಸಿಲ್ ಥಂಪಿ ಯಾರೊಬ್ಬರೂ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಈ ಪಂದ್ಯದಲ್ಲಿ ಮುಂಬೈ ಕೆಲ ಬದಲಾವಣೆಗಳೊಂದಿಗೆ ಆಡುವ ನಿರೀಕ್ಷೆ ಇದೆ. ತಂಡ ಈ ಪಂದ್ಯದಲ್ಲೂ ಸೋತರೆ ಪ್ಲೇ-ಆಫ್ ಹಾದಿ ಕಠಿಣಗೊಳ್ಳಲಿದೆ.
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಒಟ್ಟು 29 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್ ತಂಡವು ಮೇಲುಗೈ ಸಾಧಿಸಿದೆ. 29 ಪಂದ್ಯಗಳ ಪೈಕಿ ಮುಂಬೈ ತಂಡವು 17 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಆರ್‌ಸಿಬಿ 12 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ಅನೂಜ್ ರಾವತ್, ವಿರಾಟ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಆಕಾಶ್‌ದೀಪ್ ಸಿಂಗ್.
ಮುಂಬೈ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರನ್ ಪೊಲ್ಲಾರ್ಡ್, ರೀಲೆ ಮೆರೆಡಿತ್, ಟೈಮಲ್ ಮಿಲ್ಸ್, ಮುರುಗನ್ ಅಶ್ವಿನ್, ಜಯದೇವ್ ಉನಾದ್ಕತ್, ಜಸ್ಪ್ರೀತ್ ಬುಮ್ರಾ.
ಸ್ಥಳ: ಪುಣೆ, ಎಂಸಿಎ ಕ್ರೀಡಾಂಗಣ,
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ಎಂಸಿಎ ಕ್ರೀಡಾಂಗಣದ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡುವ ತಂಡ 180ಕ್ಕಿಂತ ಹೆಚ್ಚು ಮೊತ್ತ ಕಲೆಹಾಕಿದರೆ ಗೆಲ್ಲುವ ಸಾಧ್ಯತೆ ಹೆಚ್ಚು. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇದೆ. ಈ ಆವೃತ್ತಿಯಲ್ಲಿ 3 ಪಂದ್ಯಗಳಲ್ಲಿ 2ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ.
