ಶುಭ್ ಮಾನ್ ಗಿಲ್ (96) ಸಾಹಸಿಕ ಬ್ಯಾಟಿಂಗ್ ನ ನಡುವೆಯೂ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿನ ಭೀತಿ ಎದುರಿಸಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ, ಕೊನೇ ಎರಡು ಎಸೆತಗಳಲ್ಲಿ 12 ರನ್ ಬೇಕಿದ್ದಾಗ ಜೋಡಿ ಸಿಕ್ಸರ್ ಸಿಡಿಸಿದ ರಾಹುಲ್ ಟೇವಾಟಿಯಾ ತಂಡಕ್ಕೆ ಅದ್ಭುತ ಗೆಲುವು ನೀಡಿದ್ದಾರೆ. 

ಮುಂಬೈ (ಏ.8): ಕೊನೆಯ ಓವರ್ ನಲ್ಲಿ 19 ರನ್ ಗಳನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾದ ಪಂಜಾಬ್ ಕಿಂಗ್ಸ್ ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 6 ವಿಕೆಟ್ ಸೋಲು ಕಂಡಿದೆ. ಆ ಮೂಲಕ ಗುಜರಾತ್ ಟೈಟಾನ್ಸ್ ತಂಡದ ಅಜೇಯ ಓಟ ಮುಂದುವರಿದಿದ್ದರೆ, ಪಂಜಾಬ್ ಕಿಂಗ್ಸ್ ತಂಡ 2ನೇ ಸೋಲು ಕಂಡಿತು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ, ಲಿಯಾಮ್ ಲಿವಿಂಗ್ ಸ್ಟೋನ್ (64ರನ್, 27 ಎಸೆತ, 7 ಬೌಂಡರಿ, 4 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಹಾಗೂ ಇನ್ನಿಂಗ್ಸ್ ನ ಕೊನೆಯಲ್ಲಿ ರಾಹುಲ್ ಚಹರ್ ಬ್ಯಾಟಿಂಗ್ ನಿಂದ 9 ವಿಕೆಟ್ ಗೆ 189 ರನ್ ಕಲೆಹಾಕಿತು. ಪ್ರತಿಯಾಗಿ ಗುಜರಾತ್ ಟೈಟಾನ್ಸ್ ತಂಡ 4 ವಿಕೆಟ್ ಗೆ 190 ರನ್ ಸಿಡಿಸಿ ಗೆಲುವು ಕಂಡಿತು.

ಸತತ 2ನೇ ಪಂದ್ಯದಲ್ಲಿ ಶತಕ ವಂಚಿತರಾದ ಶುಭ್ ಮಾನ್ ಗಿಲ್ 96 ರನ್ (59 ಎಸೆತ, 11 ಬೌಂಡರಿ, 1 ಸಿಕ್ಸರ್) ಇನ್ನೇನು ವ್ಯರ್ಥ ಎನ್ನುವ ಸಮಯದಲ್ಲಿ ಆಪದ್ಭಾಂದವನಾಗಿ ಮೈದಾನಕ್ಕಿಳಿದ ರಾಹುಲ್ ಟೇವಾಟಿಯಾ ಸೂಪರ್ ಆಟವಾಡುವ ಮೂಲಕ ತಂಡಕ್ಕೆ ಗೆಲುವು ನೀಡಿದರು. ಓಡಿಯನ್ ಸ್ಮಿತ್ವ ಎಸೆದ ಕೊನೇ ಓವರ್ ನಲ್ಲಿ 19 ರನ್ ಬೇಕಿದ್ದಾಗ ಮೊದಲ ನಾಲ್ಕು ಎಸೆತಗಳಲ್ಲಿ ಗುಜರಾತ್ ಟೈಟಾನ್ಸ್ ಕೇವಲ 7 ರನ್ ಬಾರಿಸಿತ್ಉತ. ಕೊನೇ ಎರಡು ಎಸೆತಗಳಲ್ಲಿ 12 ರನ್ ಬೇಕಿದ್ದಾಗ ಮಿಡ್ ವಿಕೆಟ್ ಗಳತ್ತ ಮಿಂಚಿನ ಎರಡು ಸಿಕ್ಸರ್ ಸಿಡಿಸಿದ ರಾಹುಲ್ ಟೇವಾಟಿಯಾ ತಂಡಕ್ಕೆ ಅದ್ಭುತ ಜಯ ತಂದರು.

Scroll to load tweet…


ಚೇಸಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಮ್ಯಾಥ್ಯೂ ವೇಡ್ ಹಾಗೂ ಶುಭ್ ಮಾನ್ ಗಿಲ್ (Shubman Gill) ಮೊದಲ ವಿಕೆಟ್ ಗೆ ಬಿರುಸಿನ ಆರಂಭ ನೀಡಿದರು. ವೈಭವ್ ಅರೋರಾ ಹಾಗೂ ಆರ್ಶದೀಪ್ ಸಿಂಗ್ ದಾಳಿಯನ್ನು ವಿಶ್ವಾಸದಿಂದ ಎದುರಿಸಿದ ಜೋಡಿ ಮೊದಲ ಮೂರು ಓವರ್ ಗಳಲ್ಲಿಯೇ 31 ರನ್ ಸಿಡಿಸಿತ್ತು. ಇದರಲ್ಲಿ 6 ಬೌಂಡರಿಗಳಿದ್ದರೆ, ಅದ್ಭುತ ಫಾರ್ಮ್ ನಲ್ಲಿದ್ದ ಶುಭ್ ಮಾನ್ ಗಿಲ್ ತಾವೊಬ್ಬರೇ ಐದು ಬೌಂಡರಿ ಸಿಡಿಸಿದ್ದರು.

ಆದರೆ, ನಾಲ್ಕನೇ ಓವರ್ ವೇಳೆಗೆ ಪಂಜಾಬ್ ತಂಡ ಮೊದಲ ಯಶಸ್ಸು ಕಂಡಿತು. ಶುಭ್ ಮಾನ್ ಗಿಲ್ ಅವರಷ್ಟು ವೇಗದಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದ ವೇಡ್, 7 ಎಸೆತಗಳಲ್ಲಿ 1 ಬೌಂಡರಿ ಇದ್ದ 6 ರನ್ ಬಾರಿಸಿ ರಬಾಡ ಎಸೆತದಲ್ಲಿ ವಿಕಟ್ ಕೀಪರ್ ಜಾನಿ ಬೇರ್ ಸ್ಟೋಗೆ ಕ್ಯಾಚ್ ನೀಡಿ ಹೊರನಡೆದರು. 

IPL 2022 ಅಪರೂಪದ ದಾಖಲೆ ಮಾಡಿದ ಧವನ್, ಟೈಟಾನ್ಸ್ ಗೆ 190 ರನ್ ಸವಾಲು ನೀಡಿದ ಪಂಜಾಬ್

ಆದರೆ, ವೇಡ್ ವಿಕೆಟ್ ಉರುಳಿದ್ದು, ಗುಜರಾತ್ ಪಾಲಿಗೆ ಹಿನ್ನಡೆಯಾಗಲಿಲ್ಲ. ಶುಭ್ ಮಾನ್ ಗಿಲ್ ಗೆ ಮೈದಾನದಲ್ಲಿ ಜೊತೆಯಾದ ಸಾಯಿ ಸುದರ್ಶನ್ ವಿಶ್ವಾಸದಿಂದ ರಬಾಡ, ಒಡಿಯನ್ ಸ್ಮಿತ್ ರಂಥ ಬೌಲರ್ ಗಳನ್ನು ಎದುರಿಸಿದರು. ಇದರಿಂದಾಗಿ 7ನೇ ಓವರ್ ವೇಳೆಗೆ ಗುಜರಾತ್ ತಂಡ 1 ವಿಕೆಟ್ ನಷ್ಟಕ್ಕೆ 66 ರನ್ ಬಾರಿಸಿ ಸುಲಭ ಗೆಲುವಿನ ಹಾದಿಯಲ್ಲಿತ್ತು. 2ನೇ ವಿಕೆಟ್ ಗೆ ಗಿಲ್ ಹಾಗೂ ಸಾಯಿ ಸುದರ್ಶನ್ ಜೋಡಿ 67 ಎಸೆತಗಳಲ್ಲಿ 101 ರನ್ ಜೊತೆಯಾಟವಾಡಿತು. ಇದರಲ್ಲಿ ಸಾಯಿ ಸುದರ್ಶನ್ ಪಾಲು 35 ರನ್ ಗಳಾಗಿದ್ದವು. ಇದಕ್ಕಾಗಿ 30 ಎಸೆತಗಳನ್ನು ಎದುರಿಸಿದ ಸಾಯಿ ಸುದರ್ಶನ್ 4 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದರು.

ಅದ್ಭುತವಾಗಿ ಆಟವಾಡಿದ ಶುಭ್ ಮಾನ್ ಗಿಲ್, ಲಿವಿಂಗ್ ಸ್ಟೋನ್ ಎಸೆತವನ್ನು ಎಕ್ಸ್ಟ್ರಾ ಕವರ್ ನತ್ತ ತಳ್ಳಿ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. 45 ರನ್ ಬಾರಿಸಿದ್ದ ವೇಳೆ ಶುಭ್ ಮಾನ್ ಗಿಲ್ ರಿಟರ್ನ್ ಕ್ಯಾಚ್ ನೀಡಿದ್ದರು. ಆದರೆ, ಕಷ್ಟದ ಚಾನ್ಸ್ ಅನ್ನು ಒಡಿಯನ್ ಸ್ಮಿತ್ ಕೈಚೆಲ್ಲಿದ್ದರು. 10 ಓವರ್ ಗಳ ಅಂತ್ಯದ ವೇಳೆ 94 ರನ್ ಬಾರಿಸಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್ ಮಾನ್ ಗಿಲ್ ಬ್ಯಾಟಿಂಗ್ ಗೆಲುವಿನ ಬಹುದೊಡ್ಡ ಆಸರೆಯಾಗಿ ಕಂಡಿತ್ತು. ಪಂಜಾಬ್ ತಂಡದ ಉತ್ತಮ ಬೌಲಿಂಗ್ ವಿಭಾಗವನ್ನೂ ಬಹಳ ಎಚ್ಚರಿಕೆಯಿಂದ ಗಿಲ್ ಎದುರಿಸಿದರು. ಯಾವ ಹಂತದಲ್ಲೂ ತಾಳ್ಮೆ ಕಳೆದುಕೊಳ್ಳದೆ ಬ್ಯಾಟಿಂಗ್ ನಡೆಸಿದರು. ಬಹುತೇಕವಾಗಿ ಗ್ಯಾಪ್ ಗಳಲ್ಲೇ ಬೌಂಡರಿ ಸಿಡಿಸಿದ ಗಿಲ್, ಚೆಂಡನ್ನು ಆಗಸಕ್ಕೆ ಬಾರಿಸುವುದಕ್ಕಿಂತ ಹೆಚ್ಚಾಗಿ ನೆಲಮಟ್ಟದಲ್ಲೇ ಬೌಂಡರಿ ಲೈನ್ ಗೆ ಕಳುಹಿಸಲು ಹೆಚ್ಚಿನ ಆದ್ಯತೆ ನೀಡಿದ್ದರು.

IPL 2022 ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ, ಪಂಜಾಬ್ ತಂಡದಲ್ಲಿ ಪ್ರಮುಖ ಬದಲಾವಣೆ

66 ಎಸೆತಗಳಲ್ಲಿ 100 ರನ್ ಜೊತೆಯಾಟ ಪೂರೈಸಿದ ಈ ಜೋಡಿಯನ್ನು ರಾಹುಲ್ ಚಹರ್ ಬೇರ್ಪಡಿಸಿದರು. ಚಹರ್ ಎಸೆತವನ್ನು ಸ್ಲಾಗ್ ಸ್ವೀಪ್ ಮಾಡಲು ಯತ್ನಿಸಿದ ಸಾಯಿ ಸುದರ್ಶನ್, ಮಯಾಂಕ್ ಅಗರ್ವಾಲ್ ಗೆ ಕ್ಯಾಚ್ ನೀಡಿ ಹೊರನಡೆದರು. ಆ ಬಳಿಕ ಕ್ರೀಸ್ ನಲ್ಲಿದ್ದ ಶುಭ್ ಮಾನ್ ಗಿಲ್ ಗೆ ಜೊತೆಯಾದ ಹಾರ್ದಿಕ್ ಪಾಂಡ್ಯ 26 ಎಸೆತಗಳಲ್ಲಿ 37 ರನ್ ಗಳ ಜೊತೆಯಾಟವಾಡಿದರು. ಈ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಬೌಲರ್ ಗಳು, ಗುಜರಾತ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು. 19ನೇ ಓವರ್ ನ 5ನೇ ಎಸೆತದಲ್ಲಿ ಶುಭ್ ಮಾನ್ ಗಿಲ್ ಅವರ ವಿಕೆಟ್ ಉರುಳಿಸಿ ರಬಾಡ, ಪಂಜಾಬ್ ಗೆ ಮೇಲುಗೈ ನೀಡಿದ್ದರು.