* ಆರ್‌ಸಿಬಿಗಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸವಾಲು* ಹ್ಯಾಟ್ರಿಕ್ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ ಆರ್‌ಸಿಬಿ* ಟೂರ್ನಿಯಲ್ಲಿ ಸತತ 4 ಸೋಲು ಕಂಡು ಕಂಗಾಲಾಗಿದೆ ಚೆನ್ನೈ ಸೂಪರ್ ಕಿಂಗ್ಸ್
ನವಿ ಮುಂಬೈ(ಏ.12): ಹ್ಯಾಟ್ರಿಕ್ ಗೆಲುವು ಸಾಧಿಸಿ ಉತ್ಸಾಹದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) 15ನೇ ಆವೃತ್ತಿಯ ಐಪಿಎಲ್‌ನಲ್ಲಿ (Indian Premier League) ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದ್ದು, ಮಂಗಳವಾರ ಸತತ 4 ಸೋಲಿನಿಂದ ಕುಗ್ಗಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಫಾಫ್ ಡು ಪ್ಲೆಸಿಸ್ (Faf du Plessis) ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆರ್‌ಸಿಬಿ (RCB) ಆರಂಭಿಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಸೋತಿದ್ದರೂ ಬಳಿಕ ಸುಧಾರಿತ ಪ್ರದರ್ಶನ ನೀಡಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಹೊಸ ನಾಯಕನೊಂದಿಗೆ ಕಣಕ್ಕಿಳಿದಿರುವ ಹಾಲಿ ಚಾಂಪಿಯನ್ ಚೆನ್ನೈ ಆಡಿರುವ ಎಲ್ಲಾ 4 ಪಂದ್ಯಗಳಲ್ಲಿ ಪರಾಭವಗೊಂಡಿದೆ.
ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಸೇರ್ಪಡೆ ಆರ್‌ಸಿಬಿಯ ಬಲ ಹೆಚ್ಚಿಸಿದ್ದು, ಜೋಶ್ ಹೇಜಲ್‌ವುಡ್, ಜೇಸನ್ ಬೆಹ್ರೆನ್‌ಡೊಫ್‌ರ್ ಮೊದಲ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಅನುಜ್ ರಾವತ್, ಫಾಫ್ ಡು ಪ್ಲೆಸಿ, ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಆಧಾರಸ್ತಂಭಗಳಾಗಿದ್ದು, ದಿನೇಶ್ ಕಾರ್ತಿಕ್ (Dinesh Karthik), ಶಾಬಾಜ್ ನದೀಂ ಫಿನಿಶಿಂಗ್ ಹೊಣೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ವನಿಂದು ಹಸರಂಗ, ಆಕಾಶ್ ದೀಪ್ ಮಿಂಚುತ್ತಿದ್ದರೂ, ಮೊಹಮದ್ ಸಿರಾಜ್ ದುಬಾರಿಯಾಗುತ್ತಿರುವುದು ತಂಡಕ್ಕೆ ತಲೆನೋವಾಗಿದೆ. ಮನೆಗೆ ತೆರಳಿರುವ ಹರ್ಷಲ್ ಪಟೇಲ್ (Harshal Patel) ಈ ಪಂದ್ಯಕ್ಕೆ ಗೈರಾಗುವ ಸಾಧ್ಯತೆ ಇದೆ.
ಇನ್ನು, ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಲವು ಬದಲಾವಣೆಗಳಾಗುವ ಸಾಧ್ಯತೆಯಿದೆ. ದೀಪಕ್ ಚಹರ್ (Deepak Chahar) ಅನುಪಸ್ಥಿತಿಯಲ್ಲಿ ಬೌಲಿಂಗ್ ಪಡೆ ದುರ್ಬಲವಾಗಿದ್ದು, ಋುತುರಾಜ್ ಗಾಯಕ್ವಾಡ್ ಇನ್ನಷ್ಟೇ ಲಯಕ್ಕೆ ಮರಳಬೇಕಿದೆ. ಶಿವಂ ದುಬೆ (Shivam Dube) ಮತ್ತು ಡ್ವೇನ್ ಬ್ರಾವೋ ಮಾತ್ರ ಮಿಂಚುತ್ತಿದ್ದಾರೆ. ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೋಯಿನ್ ಅಲಿ ಜವಾಬ್ದಾರಿ ಅರಿತು ಆಡಬೇಕಿದೆ. ರವೀಂದ್ರ ಜಡೇಜಾ (Ravindra Jadeja), ಎಂ.ಎಸ್.ಧೋನಿ (MS Dhoni) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರೆ ಮಾತ್ರ ತಂಡಕ್ಕೆ ಗೆಲುವು ದಕ್ಕಲಿದೆ.
IPL 2022: ಬಿಯರ್ ಬ್ರ್ಯಾಂಡ್‌ನಲ್ಲಿ ಧೋನಿ ಹಣ ಹೂಡಿಕೆ
ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 28 ಪಂದ್ಯಗಳ ಪೈಕಿ 18 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಗೆ ಬೀರಿದ್ದರೆ, 9 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ಸಿಹಿಯುಂಡಿದೆ. ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಲಭಿಸಿರಲಿಲ್ಲ.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ಅನೂಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೊರ್, ಶಾಬಾಜ್ ಅಹಮ್ಮದ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಆಕಾಶ್‌ದೀಪ್ ಸಿಂಗ್, ಜೋಶ್ ಹೇಜಲ್‌ವುಡ್,
ಚೆನ್ನೈ: ಋುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೋಯಿನ್ ಅಲಿ, ಅಂಬಟಿ ರಾಯುಡು, ಎಂ ಎಸ್ ಧೋನಿ, ರವೀಂದ್ರ ಜಡೇಜಾ(ನಾಯಕ), ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್, ಡ್ವೇನ್ ಪ್ರಿಟೋರಿಯಸ್, ಮುಕೇಶ್ ಚೌಧರಿ.
ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್ ಸ್ಟೇಡಿಯಂ
ಪಂದ್ಯ: ಸಂಜೆ 7.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
