IPL 2022 ಭಾರತದ ಭವಿಷ್ಯದ ನಾಯಕ ರೇಸ್‌ನಲ್ಲಿರುವವರಿಗೆ ವೇದಿಕೆ: T20 ವಿಶ್ವಕಪ್‌ಗೆ ಆಡಿಷನ್‌?

ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಮಾರ್ಚ್‌ 26 2022, ಶನಿವಾರದಿಂದ ಪ್ರಾರಂಭವಾಗಲಿದೆ

IPL 2022 Road to T20 World Cup India Will be Looking at Future Captain mnj

T20 ವಿಶ್ವಕಪ್‌ಗೆ ಆಡಿಷನ್‌: ಐಪಿಎಲ್‌ನಲ್ಲಿ ಮಿಂಚುವ ಆಟಗಾರರಿಗೆ ಭಾರತ ತಂಡದಲ್ಲಿ ಬೇಗನೆ ಸ್ಥಾನ ಸಿಗಲಿದೆ. ಈ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಸದೃಢ ತಂಡವನ್ನು ಕಟ್ಟಲು ಭಾರತ ತಂಡ ಎದುರು ನೋಡುತ್ತಿದ್ದು, ಈ ಆವೃತ್ತಿ ತಂಡಕ್ಕೆ ಅಗತ್ಯವಿರುವ ಕೆಲ ಆಟಗಾರರನ್ನು ಹುಡುಕಿ ಕೊಡುವ ನಿರೀಕ್ಷೆ ಇದೆ. ಪ್ರಮುಖವಾಗಿ ಹಾರ್ದಿಕ್‌ ಪಾಂಡ್ಯ ಅವರ ಫಿಟ್ನೆಸ್‌ ಬಗ್ಗೆ ಈ ಆವೃತ್ತಿ ಉತ್ತರಿಸಲಿದೆ. 

ಗುಜರಾತ್‌ ತಂಡವನ್ನು ಮುನ್ನಡೆಸಲಿರುವ ಹಾರ್ದಿಕ್‌ ಬೌಲಿಂಗ್‌ ಮಾಡಲಿದ್ದಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹಾರ್ದಿಕ್‌ರನ್ನು ಹಿಂದಿಕ್ಕಿ ವಿಶ್ವಕಪ್‌ ತಂಡದಲ್ಲಿ ವೆಂಕಟೇಶ್‌ ಅಯ್ಯರ್‌ ಸ್ಥಾನ ಪಡೆಯಬೇಕಿದ್ದರೆ ಈ ಐಪಿಎಲ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರಬೇಕಿದೆ. ಇನ್ನೂ ಕೆಲ ಕ್ರಮಾಂಕಗಳಿಗೆ ಸೂಕ್ತ ಆಟಗಾರರನ್ನು ಬಿಸಿಸಿಐ ಈ ಐಪಿಎಲ್‌ನಲ್ಲಿ ಗುರುತಿಸಲಿದೆ.

ಇದನ್ನೂ ಓದಿ: IPL 2022: ಐಪಿಎಲ್‌ಗೆ ಕಾಲಿಡಲು ಕಾಯ್ತಿದ್ದಾರೆ ಈ 5 ಸ್ಟಾರ್ ಕ್ರಿಕೆಟಿಗರು!

ಭಾರತದ ಭವಿಷ್ಯದ ನಾಯಕ ರೇಸ್‌ನಲ್ಲಿರುವವರಿಗೆ ವೇದಿಕೆ:  ಭಾರತ ತಂಡದ ಭವಿಷ್ಯದ ನಾಯಕ ರೇಸ್‌ನಲ್ಲಿರುವ ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌ ಈ ಐಪಿಎಲ್‌ನಲ್ಲಿ ಒಂದೊಂದು ತಂಡಗಳನ್ನು ಮುನ್ನಡೆಸಲಿದ್ದಾರೆ. ಅವರ ನಾಯಕತ್ವ ಗುಣಗಳು, ಒತ್ತಡ ನಿಭಾಯಿಸುವ ಕೌಶಲ್ಯ, ಆಟಗಾರರನ್ನು ಸಮರ್ಥವಾಗಿ ಬಳಸಿಕೊಳ್ಳುವ ರೀತಿಯ ಬಗ್ಗೆ ಬಿಸಿಸಿಐ ಮೌಲ್ಯಮಾಪನ ನಡೆಸಲಿದೆ. ಈ ಮೂವರಲ್ಲಿ ಯಾರಾದರೂ ತಮ್ಮ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದರೆ ನಾಯಕತ್ವದ ರೇಸ್‌ನಲ್ಲಿ ಅವರ ಮೌಲ್ಯ ಹೆಚ್ಚಲಿದೆ.

ಬಿಸಿಸಿಐ ಮುಂದಿರುವ ಸವಾಲುಗಳು ಏನು?:  2023-27ರ ಅವಧಿಗೆ ಐಪಿಎಲ್‌ ಮಾಧ್ಯಮ ಹಕ್ಕು ಹರಾಜು ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದೆ. 2018ರಿಂದ 2022ರ ಅವಧಿಗೆ ಸ್ಟಾರ್‌ ಸ್ಪೋಟ್ಸ್‌ರ್‍ ಸಂಸ್ಥೆ 16347.5 ಕೋಟಿ ರು. ನೀಡಿ ಆತಿಥ್ಯ ಹಕ್ಕು ಖರೀದಿಸಿತ್ತು. ಈಗ ತಂಡಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಲಿದೆ.

ಅಲ್ಲದೇ ಲೀಗ್‌ನ ಮೌಲ್ಯ ಹಲವು ಪಟ್ಟು ಏರಿಕೆಯಾಗಿದ್ದು ಬಿಸಿಸಿಐ ಏನಿಲ್ಲವೆಂದರೂ 40000 ಕೋಟಿ ರು.ನಿಂದ 50000 ಕೋಟಿ ರು. ನಿರೀಕ್ಷೆ ಮಾಡುತ್ತಿದೆ. ಲೀಗ್‌ನ ಮೌಲ್ಯ ಮತ್ತಷ್ಟುಹೆಚ್ಚಬೇಕು, ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಮಾಧ್ಯಮ ಪ್ರಸಾರ ಹಕ್ಕು ಮಾರಾಟವಾಗಬೇಕಿದ್ದರೆ ಈ ಆವೃತ್ತಿ ಅಭೂತಪೂರ್ವ ಯಶಸ್ಸು ಕಾಣಬೇಕು.

ಕೋವಿಡ್‌ ಪ್ರಕರಣಗಳು ಕಡಿಮೆಯಾಗಿದ್ದರೂ ಬಿಸಿಸಿಐ ಕೇವಲ ಮುಂಬೈ ಹಾಗೂ ಪುಣೆಯಲ್ಲಿ ಲೀಗ್‌ ಹಂತವನ್ನು ಆಯೋಜಿಸುತ್ತಿದೆ. ಅಲ್ಲದೇ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ಅವಕಾಶವನ್ನೂ ನೀಡುತ್ತಿದೆ. ಆದರೆ ಎರಡೇ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಸಾಹಸ ಕೈಕೊಟ್ಟರೆ ಬಿಸಿಸಿಐಗೆ ನಷ್ಟವಾಗಲಿದೆ. ಹೀಗಾಗಿ ಪಂದ್ಯಗಳು ಸ್ಪರ್ಧಾತ್ಮಕವಾಗಿ, ಅಭಿಮಾನಿಗಳಲ್ಲಿ ಆಸಕ್ತಿ ಕಡಿಮೆಯಾಗದಂತೆ ಬಿಸಿಸಿಐ ನೋಡಿಕೊಳ್ಳಬೇಕಿದೆ.

ಇದನ್ನೂ ಓದಿ: IPL 2022: ಟಿ20 ಹಬ್ಬಕ್ಕೆ ಕ್ಷಣಗಣನೆ ಶುರು: ಈ ಸಲ 2 DRS, ಹೊಸ ನಿಯಮಗಳು ಜಾರಿ

ಐಪಿಎಲ್‌ ಮಾಜಿ ಸ್ಟಾ​ರ್‌ ಕ್ರಿಕೆಟಿಗರು ಈಗ ಕೋಚ್‌ಗಳು:  ಐಪಿಎಲ್‌ ಹಲವು ಕ್ರಿಕೆಟಿಗರ ವೃತ್ತಿಬದುಕು ಬದಲಿಸಿರುವುದರ ಜೊತೆಗೆ ನಿವೃತ್ತಿಯಾದ ಆಟಗಾರರಿಗೂ ಹೊಸ ಆಯ್ಕೆಗಳನ್ನು ಕಲ್ಪಿಸಿಕೊಡುತ್ತಿದೆ. ಐಪಿಎಲ್‌ನಲ್ಲಿ ಮಿಂಚಿದ್ದ ಅನೇಕ ಕ್ರಿಕೆಟಿಗರು ಈಗ ಐಪಿಎಲ್‌ ತಂಡಗಳ ಕೋಚ್‌, ಮಾರ್ಗದರ್ಶಕ, ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಆರ್‌ಸಿಬಿ ತಂಡದ ನಾಯಕರಾಗಿದ್ದ ಅನಿಲ್‌ ಕುಂಬ್ಳೆ ಈ ಹಿಂದೆ ಮುಂಬೈ ತಂಡದ ಕೋಚ್‌ ಆಗಿದ್ದರು. ಕಳೆದ 2-3 ವರ್ಷಗಳಿಂದ ಪಂಜಾಬ್‌ ತಂಡದ ಪ್ರಧಾನ ಕೋಚ್‌ ಆಗಿ ಕೆಲಸ ಮಾಡುತ್ತಿದ್ದಾರೆ. 2 ಬಾರಿ ಕೆಕೆಆರ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಗೌತಮ್‌ ಗಂಭೀರ್‌ ಮೊದಲ ಬಾರಿಗೆ ಮೆಂಟರ್‌ ಆಗಿ ಕಾಣಿಸಿಕೊಳ್ಳಲಿದ್ದು, ಲಖನೌ ತಂಡದೊಂದಿಗೆ ಕಾರ‍್ಯನಿರ್ವಹಿಸುತ್ತಿದ್ದಾರೆ. 

ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗರಾದ ಮಹೇಲಾ ಜಯವರ್ಧನೆ ಹಾಗೂ ಕುಮಾರ ಸಂಗಕ್ಕರ ಕ್ರಮವಾಗಿ ಮುಂಬೈ ಹಾಗೂ ರಾಜಸ್ಥಾನ ತಂಡಗಳ ಪ್ರಧಾನ ಕೋಚ್‌ಗಳಾಗಿದ್ದಾರೆ. ಸ್ಟೀಫನ್‌ ಫ್ಲೆಮಿಂಗ್‌ ಐಪಿಎಲ್‌ನ ಅತ್ಯಂತ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರು. ಇವರಲ್ಲದೆ ಶೇನ್‌ ವಾಟನ್ಸ್‌, ಮುತ್ತಯ್ಯ ಮುರಳಿಧರನ್‌, ರಿಕಿ ಪಾಂಟಿಂಗ್‌, ಬ್ರೆಂಡನ್‌ ಮೆಕ್ಕಲಂ, ಮೈಕಲ್‌ ಹಸ್ಸಿ, ಡೇಲ್‌ ಸ್ಟೈನ್‌, ಅಭಿಷೇಕ್‌ ನಾಯರ್‌ ಕೂಡ ಕೋಚ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

Latest Videos
Follow Us:
Download App:
  • android
  • ios