Asianet Suvarna News Asianet Suvarna News

IPL 2022 ಸನ್ ರೈಸರ್ಸ್ ಉರಿವೇಗದ ದಾಳಿ, 68 ರನ್ ಗೆ ಆರ್ ಸಿಬಿ ಆಲೌಟ್!

ಮಾರ್ಕೋ ಜಾನ್ಸೆನ್ ಎಸೆದ ಇನ್ನಿಂಗ್ಸ್ ನ 2ನೇ ಓವರ್ ನಲ್ಲಿಯೇ ಮೂರು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡ ಆರ್ ಸಿಬಿ ತಂಡ ಆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಸನ್ ರೈಸರ್ಸ್ ಹೈದರಾಬಾದ್ ತಂಡ ಇಡೀ ಬೌಲಿಂಗ್ ವಿಭಾಗ ಒಮ್ಮೆಲೆ ಆರ್ ಸಿಬಿಯ ಬ್ಯಾಟಿಂಗ್ ವಿಭಾಗದ ಮೇಲೆ ಮುಗಿಬಿದ್ದಿದ್ದರಿಂದ ತಂಡ ಕೇವಲ 68 ರನ್ ಗೆ ಆಲೌಟ್ ಆಗಿದೆ.

IPL 2022 RCB vs SRH  Marco Jansen T Natarajan  shines Royal Challengers Bangalore allout for 68 vs Sunrisers Hyderabad san
Author
Bengaluru, First Published Apr 23, 2022, 9:06 PM IST

ಮುಂಬೈ (ಏ.23): ಹೀನಾಯ ಬ್ಯಾಟಿಂಗ್ ನಿರ್ವಹಣೆ ತೋರಿದ ಆರ್ ಸಿಬಿ (Royal Challengers Bangalore) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿದೆ. ಮಾರ್ಕೋ ಜಾನ್ಸೆನ್ (Marco Jansen) ಎಸೆದ ಇನ್ನಿಂಗ್ಸ್ ನ 2ನೇ ಓವರ್ ನಲ್ಲಿಯೇ ಆಘಾತ ಕಂಡ ಆರ್ ಸಿಬಿ (RCB), ಸನ್ ರೈಸರ್ಸ್ (Sunrisers Hyderabad) ವಿರುದ್ಧ 000 ರನ್ ಗೆ ಆಲೌಟ್ ಆಗಿದೆ. ಇದು ಐಪಿಎಲ್ ಇತಿಹಾಸದ 6ನೇ ಕನಿಷ್ಠ ಸ್ಕೋರ್ ಎನಿಸಿದೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ, ಇನ್ನಿಂಗ್ಸ್ ನ 2ನೇ ಓವರ್ ನಲ್ಲಿ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಅನುಜ್ ರಾವತ್ ಅವರ ವಿಕೆಟ್ ಗಳನ್ನು ಕಳೆದುಕೊಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಮಾರ್ಕೋ ಜಾನ್ಸೆನ್ (25ಕ್ಕೆ 3), ಟಿ.ನಟರಾಜನ್ (10ಕ್ಕೆ 3), ಜೆ.ಸುಚಿತ್ (12ಕ್ಕೆ 2) ದಾಳಿಗೆ ನಲುಗಿದ ಆರ್ ಸಿಬಿ 16.1 ಓವರ್ ಗಳಲ್ಲಿ 68 ರನ್ ಗೆ ಆಲೌಟ್ ಆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್ ಸಿಬಿ ತಂಡ ಮೊದಲ ಓವರ್ ನಲ್ಲಿ 5 ರನ್ ಬಾರಿಸಿತ್ತು. ಆದರೆ, ಮಾರ್ಕೋ ಜಾನ್ಸೆನ್ ಎಸೆದ 2ನೇ ಓವರ್ ನಲ್ಲಿಯೇ ಆರ್ ಸಿಬಿಯ ದೊಡ್ಡ ಮೊತ್ತದ ಕನಸು ಕಮರಿ ಹೋಯಿತು. ಆಡಿದ 7 ಎಸೆತಗಳಲ್ಲಿ ಒಂದು ಬೌಂಡರಿಯೊಂದಿಗೆ 5 ರನ್ ಬಾರಿಸಿದ ಫಾಫ್ ಡು ಪ್ಲೆಸಿಸ್, 2ನೇ ಓವರ್ ನ 2ನೇ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರೆ, ಮರು ಎಸೆತದಲ್ಲಿಯೇ ವಿರಾಟ್ ಕೊಹ್ಲಿ 2ನೇ ಸ್ಲಿಪ್ ನಲ್ಲಿ ಮಾರ್ಕ್ರಮ್ ಗೆ ಕ್ಯಾಚ್ ನೀಡಿದಾಗ ಇಡೀ ಆರ್ ಸಿಬಿ ಕ್ಯಾಂಪ್ ಆಘಾತಕ್ಕೆ ಒಳಗಾಯಿತು. ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿದ್ದಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿ ಸತತ 2ನೇ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಕಂಡಿದ್ದರು. ಅದೇ ಓವರ್ ನ ಕೊನೆಯ ಎಸೆತದಲ್ಲಿ ಅನುಜ್ ರಾವತ್ ಕೂಡ 2ನೇ ಸ್ಲಿಪ್ ನಲ್ಲಿ ಮಾರ್ಕ್ರಮ್ ಗೆ ವಿಕೆಟ್ ನೀಡಿದಾಗ ಆರ್ ಸಿಬಿ ಕೇವಲ 8 ರನ್ ಬಾರಿಸಿತ್ತು.

ಒಂದೇ ಓವರ್ ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಆಘಾತ ಕಂಡಿದ್ದ ಆರ್ ಸಿಬಿಗೆ ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನ ಅನಿವಾರ್ಯತೆಯಿತ್ತು. ಅದರಂತೆ ಗ್ಲೆನ್ ಮ್ಯಾಕ್ಸ್ ವೆಲ್ (12) ಹಾಗೂ ಸುಯಶ್ ಪ್ರಭುದೇಸಾಯಿ ಚೇತರಿಕೆ ನೀಡುವ ಪ್ರಯತ್ನಕ್ಕೆ ಟಿ. ನಟರಾಜನ್ ಅಡ್ಡಿಯಾದರು. ಅಬ್ಬರದ ಆಟವಾಡುವ ಪ್ರಯತ್ನದಲ್ಲಿದ್ದ ಮ್ಯಾಕ್ಸ್ ವೆಲ್, ಮಿಡ್ ಆಫ್ ನಲ್ಲಿ ಕೇನ್ ವಿಲಿಯಮ್ಸನ್ ಹಿಡಿದ ಕ್ಯಾಚ್ ಗೆ ಹೊರನಡೆದರು. 20 ರನ್ ಗಳಿಗೆ ಆರ್ ಸಿಬಿ ನಾಲ್ಕು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು.

ಈ ವೇಳೆ ಜೊತೆಯಾದ ಸುಯಶ್ ಪ್ರಭುದೇಸಾಯಿ ಹಾಗೂ ಶಾಬಾಜ್ ಅಹ್ಮದ್ ತಂಡದ ಮೊತ್ತವನ್ನು 45ಕ್ಕೆ ಏರಿಸಿದ್ದರು. 20 ಎಸೆತಗಳಲ್ಲಿ 15 ರನ್ ಬಾರಿಸಿದ್ದ ಪ್ರಭುದೇಸಾಯಿ, ಸುಚಿತ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರೆ, ಅದೇ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಕೂಡ ನಿರ್ಗಮನ ಕಾಣುವುದರೊಂದಿಗೆ ಆರ್ ಸಿಬಿ ಆಘಾತ ಕಂಡಿತು. ಹಾಲಿ ಋತುವಿನಲ್ಲಿ ಆರ್ ಸಿಬಿ ಪಾಲಿಗೆ ಆಪತ್ಭಾಂದವರಾಗಿ ಬ್ಯಾಟಿಂಗ್ ಮಾಡಿದ್ದ ದಿನೇಶ್ ಕಾರ್ತಿಕ್ ಮೂರು ಎಸೆತಗಳಲ್ಲಿ ಡಕ್ ಔಟ್ ಆಗಿ ಹೊರನಡೆಯುವುದರೊಂದಿಗೆ ಆರ್ ಸಿಬಿ ಮೂರಂಕಿ ಮೊತ್ತ ಕಾಣುವುದು ದುಸ್ತರ ಎನ್ನುವುದು ಖಚಿತವಾಗಿತ್ತು. ಉಮ್ರಾನ್ ಮಲೀಕ್ ಎಸೆದ 10ನೇ ಓವರ್ ನಲ್ಲಿ ಶಾಬಾಜ್ ಅಹ್ಮದ್ (7)ವಿಕಟ್ ಕೀಪರ್ ನಿಕೋಲಸ್ ಪೂರನ್ ಗೆ ಕ್ಯಾಚ್ ನೀಡಿದ್ದರಿಂದ ಆರ್ ಸಿಬಿ 49 ರನ್ ಗೆ 7ನೇ ವಿಕೆಟ್ ಕಳೆದುಕೊಂಡಿತು. ಈ ಬಳಿಕ ಆರ್ ಸಿಬಿ ತಂಡ ಎಷ್ಟು ರನ್ ಗೆ ಆಲೌಟ್ ಆಗತ್ತದೆ ಎನ್ನುವ ಹೊರತಾಗಿ ಬೇರೆ ಯಾವ ಕುತೂಹಲವೂ ಉಳಿದಿರಲಿಲ್ಲ.

Latest Videos
Follow Us:
Download App:
  • android
  • ios