ಮುಂಬೈ ಇಂಡಿಯನ್ಸ್ ವಿರುದ್ಧದ ಪ್ರಮುಖ ಪಂದ್ಯದಲ್ಲಿ ಆರ್ ಸಿಬಿ ತಂಡ ಟಾಸ್ ಗೆದ್ದಿದ್ದು, ಬೌಲಿಂಗ್ ಆಯ್ದುಕೊಂಡಿದೆ. ಅಭಿಮಾನಿಗಳ ಫೇವರಿಟ್ ಗ್ಲೆನ್ ಮ್ಯಾಕ್ಸ್ ವೆಲ್ ಆರ್ ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪುಣೆ (ಏ.09): ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 18ನೇ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)ಹಾಗೂ ರೋಹಿತ್ ಶರ್ಮ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಆರ್ ಸಿಬಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿದ್ದರೆ, ಆರ್ ಸಿಬಿ ತಂಡ ಒಂದು ಬದಲಾವಣೆ ಮಾಡಿದೆ
ಈ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್ ಎರಡು ಬದಲಾವಣೆಗಳನ್ನು ಮಾಡಿತು. ಜೈದೇವ್ ಉನಾದ್ಕತ್ ಆಡುವ ಅವಕಾಶ ಪಡೆದರೆ, ಬ್ಯಾಟಿಂಗ್ ಆಲ್ರೌಂಡರ್ ರಮಣ್ ದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ಪರವಾಗಿ ಪಾದಾರ್ಪಣೆ ಮಾಡಿದರು. ಟೈಮಲ್ ಮಿಲ್ಸ್ ಬದಲಾಗಿ ಉನಾದ್ಕತ್ ಸ್ಥಾನ ಪಡೆದರೆ, ಡೇನಿಯಲ್ ಸ್ಯಾಮ್ಸ್ ಬದಲಾಗಿ ರಮಣ್ ದೀಪ್ ಸಿಂಗ್ ಅವಕಾಶ ಪಡೆದರು. ಇನ್ನು ಆರ್ ಸಿಬಿ ತಂಡ ಪಂದ್ಯಕ್ಕೆ ಪ್ರಮುಖ ಬದಲಾವಣೆ ಮಾಡಿದ್ದು, ಶೆರ್ಫಾನೆ ರುದರ್ಫೋರ್ಡ್ ಬದಲು ಅಭಿಮಾನಿಗಳ ಫೇವರಿಟ್ ಗ್ಲೆನ್ ಮ್ಯಾಕ್ಸ್ ವೆಲ್ ಸ್ಥಾನ ಪಡೆದುಕೊಂಡಿದ್ದಾರೆ.
ಆರ್ ಸಿಬಿ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್(ವಿ.ಕೀ), ಡೇವಿಡ್ ವಿಲ್ಲಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿ.ಕೀ), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೈರಾನ್ ಪೊಲಾರ್ಡ್, ರಮಣದೀಪ್ ಸಿಂಗ್, ಮುರುಗನ್ ಅಶ್ವಿನ್, ಜಯದೇವ್ ಉನದ್ಕತ್, ಜಸ್ಪ್ರೀತ್ ಬುಮ್ರಾ, ಬಸಿಲ್ ಥಂಪಿ
ಆಡಿರುವ ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಆರ್ ಸಿಬಿ ಐದನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಆರ್ ಸಿಬಿ ನಂತರದ ಎರಡು ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಪ್ರಸ್ತುತ ಅಗ್ರಸ್ಥಾನದಲ್ಲಿರುವ ಕೆಕೆಆರ್ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿದೆ. ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ವಿರುದ್ಧ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡ 8ನೇ ಸ್ಥಾನದಲ್ಲಿದೆ.
ಪಂದ್ಯದಲ್ಲಿ ಏನನ್ನು ನಿರೀಕ್ಷೆ ಮಾಡಬಹುದು: 2022ರ ಐಪಿಎಲ್ ನ ನಾಲ್ಕು ಸ್ಥಳಗಳ ಪೈಕಿ, ಪುಣೆ ಅತ್ಯಂತ ಭಿನ್ನ ಪಂದ್ಯಗಳನ್ನು ನೀಡಿದೆ. ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 210 ರನ್ ಪೇರಿಸಿದರೆ, ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 171 ಹಾಗೂ 162 ರನ್ ಗಳು ದಾಖಲಾಗಿದ್ದವು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಜಯ ಕಂಡರೆ, ಇದೇ ಮೈದಾನದಲ್ಲಿ ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲು ಕಂಡಿತ್ತು. ಆದರೆ, ಆ ಪಂದ್ಯದಲ್ಲಿ ಕಮ್ಮಿನ್ಸ್ ರ ಸಾಹಸಿಕ ಆಟ ದಾಖಲಾಗುವವರೆಗೂ ಪಂದ್ಯ ಸ್ಪರ್ಧಾತ್ಮವಾಗಿಯೇ ನಡೆದಿತ್ತು. ಚೇಸಿಂಗ್ ಗೆ ತಂಡಗಳು ಆದ್ಯತೆ ಕೊಡುವುದು ಜಾಸ್ತಿಯಾಗಿದ್ದರೂ, ಕೊನೆಯ ಹಂತದವರೆಗೂ ಪಂದ್ಯ ರೋಚಕತೆ ಕಾಯ್ದುಕೊಳ್ಳುವಂಥ ಪಿಚ್ ಇದಾಗಿದೆ.
IPL 2022: ಚೆನ್ನೈಗೆ ಸತತ ನಾಲ್ಕನೇ ಸೋಲು, ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್..!
ಮುಖಾಮುಖಿ: ಆರ್ ಸಿಬಿ ಹಾಗೂ ಮುಂಬೈ ತಂಡಗಳು ಈವರೆಗೂ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್ ಸಿಬಿ 12 ಪಂದ್ಯಗಳಲ್ಲಿ ಹಾಗೂ ಮುಂಬೈ 17 ಪಂದ್ಯಗಳಲ್ಲಿ ಜಯ ಕಂಡಿದೆ. ಮುಂಬೈ ತಂಡ ಮುನ್ನಡೆ ಹೊಂದಿದ್ದರೂ, ಆರ್ ಸಿಬಿ ವಿರುದ್ಧ ಆಡಿದ ಕಳೆದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿದೆ.
IPL 2022: ದಿನೇಶ್ ಕಾರ್ತಿಕ್ ಡಿಫರೆಂಟ್ ಹೆಲ್ಮೆಟ್ ಹಾಕಿ ಆಡೋದ್ಯಾಕೆ..?
ನಿಮಗಿದು ಗೊತ್ತೇ?
* ಟಿ20 ಕ್ರಿಕೆಟ್ ನಲ್ಲಿ ಜಸ್ ಪ್ರೀತ್ ಬುಮ್ರಾ ವಿರುದ್ಧ ದಿನೇಶ್ ಕಾರ್ತಿಕ್ ಪ್ರಭುತ್ವ ಸಾಧಿಸಿದ್ದಾರೆ. ಬುಮ್ರಾ ಎಸೆದ 33 ಎಸೆತಗಳಿಂದ 16363ರ ಸರಾಸರಿಯಲ್ಲಿ ದಿನೇಶ್ ಕಾರ್ತಿಕ್ 54 ರನ್ ಸಿಡಿಸಿದ್ದಾರೆ. ಒಮ್ಮೆಯೂ ಬುಮ್ರಾಗೆ ವಿಕೆಟ್ ಒಪ್ಪಿಸಿಲ್ಲ.
* ಮ್ಯಾಕ್ಸ್ ವೆಲ್ ವಿರುದ್ಧ ಬುಮ್ರಾ ದೊಡ್ಡ ಮಟ್ಟದ ಯಶಸ್ಸು ಸಂಪಾದನೆ ಮಾಡಿದ್ದಾರೆ. 15 ಇನ್ನಿಂಗ್ಸ್ ಗಳ ಪೈಕಿ ಮ್ಯಾಕ್ಸ್ ವೆಲ್ ಅನ್ನು 7 ಬಾರಿ ಔಟ್ ಮಾಡಿದ್ದಾರೆ. ಇನ್ನೊಂದೆಡೆ ಮ್ಯಾಕ್ಸ್ ವೆಲ್ ಬುಮ್ರಾರಿಂದ ಎದುರಿಸಿ 65 ಎಸೆತಗಳಿಂದ 75 ರನ್ ಬಾರಿಸಿದ್ದಾರೆ.
* ಹರ್ಷಲ್ ಪಟೇಲ್ ಮುಂಬೈ ಇಂಡಿಯನ್ಸ್ ವಿರುದ್ಧ ಉತ್ತಮ ಫಾರ್ಮ್ ಹೊಂದಿದ್ದಾರೆ. ಐದು ಬಾರಿಯ ಚಾಂಪಿಯನ್ ತಂಡದ ವಿರುದ್ಧ ಆಡಿದ 10 ಪಂದ್ಯಗಳಿಂದ 18 ವಿಕೆಟ್ ಉರುಳಿಸಿದ್ದಾರೆ.
* ರೋಹಿತ್ ಶರ್ಮ ಇನ್ನು 51 ರನ್ ಬಾರಿಸಿದರೆ, ಟಿ20 ಕ್ರಿಕೆಟ್ ನಲ್ಲಿ 10 ಸಾವಿರ ರನ್ ಬಾರಿಸಿದ ಭಾರತದ 2ನೇ ಹಾಗೂ ವಿಶ್ವದ 7ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಮೊದಲಿಗ.
