IPL 2022 ಪರದಾಡುತ್ತಲೇ ಕೆಕೆಆರ್ ವಿರುದ್ಧ ಜಯದ ಗುರಿ ಮುಟ್ಟಿದ ಆರ್ ಸಿಬಿ!
ಎಚ್ಚರಿಕೆಯ ಚೇಸಿಂಗ್ ಮಾಡಿದ ಆರ್ ಸಿಬಿ
ಕೊನೇ ಓವರ್ ನಲ್ಲಿ ಗೆಲುವಿನ ಗುರಿ ಮುಟ್ಟಿದ ಫಾಫ್ ಡು ಪ್ಲೆಸಿಸ್ ಟೀಮ್
ಕೆಕೆಆರ್ ತಂಡವನ್ನು ಮೂರು ವಿಕೆಟ್ ಗಳಿಂದ ಮಣಿಸಿದ ಆರ್ ಸಿಬಿ
ಮುಂಬೈ (ಮಾ. 30): ಶಿಸ್ತಿನ ಬೌಲಿಂಗ್ ದಾಳಿ ಹಾಗೂ ಎಚ್ಚರಿಕೆಯ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಗೆಲುವಿನ ಖಾತೆ ತೆರೆಯಲು ಯಶಸ್ವಿಯಾಗಿದೆ. ಗೆಲುವಿಗೆ ಕೊನೆಯ ಓವರ್ ಗಲ್ಲಿ 7 ರನ್ ಬೇಕಿದ್ದ ಹಂತದಲ್ಲಿ ಆಂಡ್ರೆ ರಸೆಲ್ (Andre Russel) ಎಸೆದ ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿದ ದಿನೇಶ್ ಕಾರ್ತಿಕ್ (Dinesh Karthik), ಮರು ಎಸೆತವನ್ನು ಬೌಂಡರಿಗಟ್ಟಿ ಕೋಲ್ಕತ ನೈಟ್ ರೈಡರ್ಸ್(Kolkata Knight Riders) ವಿರುದ್ಧ ಆರ್ ಸಿಬಿ (RCB) ಜಯಕ್ಕೆ ಕಾರಣರಾದರು.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ (Faf Du Plesis) ಬೌಲಿಂಗ್ ಆಯ್ದುಕೊಂಡರು. ವಾನಿಂದು ಹಸರಂಗ (20ಕ್ಕೆ 4) ಭರ್ಜರಿ ದಾಳಿಯ ನೆರವಿನಿಂದ ಕೆಕೆಆರ್ ತಂಡವನ್ನು ಆರ್ ಸಿಬಿ 18.5 ಓವರ್ ಗಳಲ್ಲಿ 128 ರನ್ ಗೆ ಆಲೌಟ್ ಮಾಡಿತು. ಮೊತ್ತ ಬೆನ್ನಟ್ಟಿದ ಆರ್ ಸಿಬಿ ಚೇಸಿಂಗ್ ನ ಹಲವು ಹಂತಗಳಲ್ಲಿ ಅಪಾಯದ ಸನ್ನಿವೇಶ ಎದುರಿಸಿತಾದರೂ, ಕೊನೆಯಲ್ಲಿ ಹರ್ಷಲ್ ಪಟೇಲ್ ಹಾಗೂ ದಿನೇಶ್ ಕಾರ್ತಿಕ್ ಅವರ ಆಟದಿಂದ 19.2 ಓವರ್ ಗಳಲ್ಲಿ 7 ವಿಕೆಟ್ ಗೆ 132 ರನ್ ಬಾರಿಸಿ ಗೆಲುವಿನ ಗಡಿ ಮುಟ್ಟಿತು.
ಕೆಕೆಆರ್ ತಂಡ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಆರ್ ಸಿಬಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕಳೆದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಜೊತೆ ಮೊದಲ ವಿಕೆಟ್ ಗೆ 50 ರನ್ ಜೊತೆಯಾಟವಾಡಿದ್ದ ಯುವ ಬ್ಯಾಟ್ಸ್ ಮನ್ ಅನುಜ್ ರಾವತ್ ಮೊದಲ ಶೂನ್ಯಕ್ಕೆ ಔಟಾಗಿ ಹೊರನಡೆದರು. ಉಮೇಶ್ ಯಾದವ್ ಎಸೆತವನ್ನು ಬಾರಿಸಲು ಯತ್ನಿಸಿದ ಅನುಜ್ ರಾವತ್, ವಿಕೆಟ್ ಕೀಪರ್ ಶೆಲ್ಡನ್ ಜಾಕ್ಸನ್ ಗೆ ಸುಲಭದ ಕ್ಯಾಚ್ ನೀಡಿ ಹೊರಬಿದ್ದರು.
ಈ ಹಂತದಲ್ಲಿ ತಂಡಕ್ಕೆ ಚೇತರಿಕೆ ನೀಡುವ ಜವಾಬ್ದಾರಿ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಮೇಲಿತ್ತು. ಕೆಕೆಆರ್ ತಂಡವನ್ನು ಹಿಂದಿನ ಎರಡು ಪಂದ್ಯದಲ್ಲಿ ಎದುರಿಸಿದ್ದಾಗ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದ ಫಾಫ್ ಡು ಪ್ಲೆಸಿಸ್, ಸೌಥಿ ಎಸೆತದಲ್ಲಿ ಪಾಯಿಂಟ್ ನಲ್ಲಿ ಅಜಿಂಕ್ಯ ರಹಾನೆ ಗೆ ಕ್ಯಾಚ್ ನೀಡಿ ಹೊರನಡೆದರು. 17 ರನ್ ಗೆ 2 ವಿಕೆಟ್ ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿದ್ದ ಆರ್ ಸಿಬಿ ತಂಡ ಇದೇ ಮೊತ್ತಕ್ಕೆ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಾಗ ಅಪಾಯದ ಸ್ಥಿತಿಗೆ ಇಳಿಯಿತು. ತನ್ನ 2ನೇ ಓವರ್ ಎಸೆಯಲು ಬಂದ ಉಮೇಶ್ ಯಾದವ್ ಮೊದಲ ಎಸೆತದಲ್ಲಿಯೇ, ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 7 ಎಸೆತವನ್ನು ಎದುರಿಸಿದ ವಿರಾಟ್ ಕೊಹ್ಲಿ 12 ರನ್ ಬಾರಿಸಿ ಔಟಾದರು.
IPL 2022 ಹಸರಂಗ ಸೂಪರ್ ಬೌಲಿಂಗ್, ಆರ್ ಸಿಬಿಗೆ 129 ರನ್ ಟಾರ್ಗೆಟ್
17 ರನ್ ಗೆ 3 ವಿಕೆಟ್ ಕಳೆದುಕೊಂಡು ಅಪಾಯದಲ್ಲಿದ್ದ ತಂಡಕ್ಕೆ ಶೇರ್ಫಾನೆ ರುದರ್ಫೋರ್ಡ್ (28) ಹಾಗೂ ಡೇವಿಡ್ ವಿಲ್ಲಿ ಆಸರೆಯಾದರು. 4ನೇ ವಿಕೆಟ್ ಗೆ ಈ ಜೋಡಿ 53 ಎಸೆತಗಳಲ್ಲಿ 45 ರನ್ ಕೂಡಿಸಿತು. ಆ ಮೂಲಕ ಚೇತರಿಕೆ ಕಂಡುಕೊಂಡ ಅರ್ ಸಿಬಿ ಪಂದ್ಯ ಗೆಲ್ಲುವ ನಿಟ್ಟಿನಲ್ಲಿ ಹೋರಾಟ ಆರಂಭಿಸಿತು. ರುದರ್ಫೋರ್ಡ್ ಹಾಗೂ ವಿಲ್ಲಿ ಆರಂಭದಲ್ಲಿ ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದರೆ, 9ನೇ ಓವರ್ ದಾಟಿದ ಬಳಿಕ ಬಿರುಸಿನ ಅಟವಾಡಲು ಆರಂಭಿಸಿದರು. 28 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 18 ರನ್ ಬಾರಿಸಿದ್ದ ಡೇವಿಡ್ ವಿಲ್ಲಿ ವಿಕೆಟ್ ಅನ್ನು ಸುನೀಲ್ ನಾರಾಯಣ್ ಉರುಳಿಸುವ ಮೂಲಕ ಬ್ರೇಕ್ ನೀಡಿದ್ದರು.
IPL 2022 ಸನ್‌ರೈಸರ್ಸ್ ಹೈದರಾಬಾದ್ ಬೆಡಗಿ Kavya Maran ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!
ವಿಲ್ಲಿ ಅವರಿಗೆ ಭಡ್ತಿ ನೀಡಿದ್ದಲ್ಲದೆ, ದಿನೇಶ್ ಕಾರ್ತಿಕ್ ಗೂ ಮುನ್ನ ಶಾಬಾಜ್ ಅಹ್ಮದ್ ಅವರನ್ನು ಕಣಕ್ಕಳಿಸಲು ಆರ್ ಸಿಬಿ ಈ ಹಂತದಲ್ಲಿ ನಿರ್ಧರಿಸಿದ್ದು ವರ್ಕ್ ಔಟ್ ಆಯಿತು. ಐಪಿಎಲ್ ನಲ್ಲಿ 14ನೇ ಓವರ್ ಬಳಿಕ 37ರ ಸರಾಸರಿ ಹೊಂದಿದ್ದ ದಿನೇಶ್ ಕಾರ್ತಿಕ್ ರನ್ನು ಆರ್ ಸಿಬಿ ಕೊನೆ ಹಂತಕ್ಕೆ ಉಳಿಸಿದ್ದರೆ, ಭಡ್ತಿ ಪಡೆದು ಬಂದು ಆಡಿದ ಶಾಬಾಜ್ ಅಹ್ಮದ್ 5ನೇ ವಿಕೆಟ್ ಗೆ ರುದರ್ಫೋರ್ಡ್ ಜೊತೆ ಅಮೂಲ್ಯ 39 ರನ್ ಜೊತೆಯಾಟವಾಡಿದರು. 20 ಎಸೆತ ಎದುರಿಸಿದ ಶಾಬಾಜ್ ಅಹ್ಮದ್ 27 ರನ್ ಸಿಡಿಸುವ ಮೂಲಕ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದರು. ವರುಣ್ ಚಕ್ರವರ್ತಿ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ದ ಶಾಬಾಜ್ ಅಹ್ಮದ್, ಮರು ಎಸೆತದಲ್ಲಿಯೇ ಸ್ಟಂಪ್ ಔಟ್ ಆಗಿ ನಿರ್ಗಮಿಸಿದರು. ವಾನಿಂದು ಹಸರಂಗ ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರೆ, ಹಸರಂಗ ಔಟಾದ ಬಳಿಕ ಕ್ರೀಸ್ ಗಿಳಿದ ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಯತ್ನಪಟ್ಟರು. ಈ ನಡುವೆ ದಿನೇಶ್ ಕಾರ್ತಿಕ್ ಅತ್ಯಂತ ಸುಲಭದ ರನ್ ಔಟ್ ನಿಂದಲೂ ಪಾರಾದರು.