* ಲಖನೌ ಸೂಪರ್ ಜೈಂಟ್ಸ್ ಎದುರು ಆಕರ್ಷಕ ಶತಕ ಚಚ್ಚಿದ ರಜತ್ ಪಾಟೀದಾರ್* ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬಲಗೈ ಬ್ಯಾಟರ್* ತಮ್ಮ ಮೇಲೆ ವಿಶ್ವಾಸ ವಿಟ್ಟಿದ್ದಕ್ಕೆ ಕೊಹ್ಲಿಗೆ ಕೃತಜ್ಞತೆ ಸಲ್ಲಿಸಿದ ಪಾಟೀದಾರ್ 

ಅಹಮದಾಬಾದ್‌(ಮೇ.27): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದವಾದ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಕ್ವಾಲಿಫೈಯರ್ ಹಂತಕ್ಕೆ ಅರ್ಹತೆಗಿಟ್ಟಿಸಿಕೊಂಡಿದೆ. ಆರ್‌ಸಿಬಿ ತಂಡದ ರಜತ್ ಪಾಟೀದಾರ್ ಅಜೇಯ ಶತಕ ಸಿಡಿಸುವ ಮೂಲಕ ಬೆಂಗಳೂರು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇದೀಗ ತನ್ನ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಯುವ ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಎಲಿಮಿನೇಟರ್‌ ಪಂದ್ಯವು ಲಖನೌ ಹಾಗೂ ಬೆಂಗಳೂರು (RCB vs LSG) ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ಇದೆಲ್ಲದರ ನಡುವೆ ಆರ್‌ಸಿಬಿ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಸಂದರ್ಭದಲ್ಲಿ ಕ್ರೀಸ್‌ಗಿಳಿದು ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ರಜತ್, ಕೇವಲ 54 ಎಸೆತಗಳಲ್ಲಿ ವಿಸ್ಪೋಟಕ 112 ಸಿಡಿಸುವ ಮೂಲಕ ಆರ್‌ಸಿಬಿ ತಂಡವು 200+ ರನ್ ಕಲೆಹಾಕುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು. 

15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಜತ್ ಪಾಟೀದಾರ್ (Rajat Patidar) ಅನ್‌ಸೋಲ್ಡ್‌ ಆಗಿದ್ದರು. ಆದರೆ ಆರ್‌ಸಿಬಿ ತಂಡದ ಪಾಲಾಗಿದ್ದ ಕರ್ನಾಟಕದ ಲುವ್ನಿತ್ ಸಿಸೋಡಿಯಾ ಗಾಯಗೊಂಡು ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರಿಂದಾಗಿ, ಬದಲಿ ಆಟಗಾರನ ರೂಪದಲ್ಲಿ ರಜತ್ ಪಾಟೀದಾರ್ ಆರ್‌ಸಿಬಿ ತೆಕ್ಕೆಗೆ ಸೇರ್ಪಡೆಗೊಂಡಿದ್ದರು. ಇದೀಗ ರಜತ್ ಪಾಟೀದಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿರಾಟ್ ಕೊಹ್ಲಿ ಜತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, ಅದರಲ್ಲಿ ನನ್ನನ್ನು ನಂಬಿದ್ದಕ್ಕೆ ಧನ್ಯವಾದಗಳು ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದಾರೆ.

Scroll to load tweet…

ಲಖನೌ ಸೂಪರ್ ಜೈಂಟ್ಸ್ ಹಾಗೂ ಆರ್‌ಸಿಬಿ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲ 11 ಓವರ್ ಮುಕ್ತಾಯದ ವೇಳೆಗೆ ಫಾಫ್ ಡು ಪ್ಲೆಸಿಸ್‌, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ ಹೀಗೆ ಮೂವರು ಆಟಗಾರರು ಪೆವಿಲಿಯನ್ ಸೇರಿದ್ದರು. ಆದರೆ 5ನೇ ವಿಕೆಟ್‌ಗೆ ರಜತ್ ಪಾಟೀದಾರ್ ಹಾಗೂ ದಿನೇಶ್ ಕಾರ್ತಿಕ್ (Dinesh Karthik) ಕೇವಲ 41 ಎಸೆತಗಳಲ್ಲಿ ಮುರಿಯದ 92 ರನ್‌ಗಳ ಜತೆಯಾಟವಾಡುವ ಮೂಲಕ ಆರ್‌ಸಿಬಿ ತಂಡವು 207 ರನ್ ಕಲೆಹಾಕುವಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದರು.

ಇನ್ನು ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ನಾನು ಕಳೆದ ಹಲವು ವರ್ಷಗಳಲ್ಲಿ ಈ ಹಿಂದೆ ಸಾಕಷ್ಟು ಮ್ಯಾಚ್‌ ವಿನ್ನಿಂಗ್ ಇನಿಂಗ್ಸ್‌ಗಳನ್ನು ನೋಡಿದ್ದೇನೆ. ಆದರೆ ರಜತ್ ಪಾಟೀದಾರ್ ಆಡಿದಂತಹ ಇನ್ನಿಂಗ್ಸ್‌ನ್ನು ನಾನು ನೋಡಿರಲಿಲ್ಲ. ಮಹತ್ವದ ಪಂದ್ಯದಲ್ಲಿ ಸಾಕಷ್ಟು ಒತ್ತಡ ಇರುವಂತಹ ಇನಿಂಗ್ಸ್‌ನಲ್ಲಿ ಅದೂ ಪ್ಲೇ ಆಫ್‌ನಲ್ಲಿ ಅನ್‌ಕ್ಯಾಪ್ ಆಟಗಾರ ಬಾರಿಸಿದ ಮೊದಲ ಶತಕ ಇದಾಗಿದ್ದು ನಿಜಕ್ಕೂ ಅದ್ಭುತ ಎಂದು ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ. 

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆಗಿಟ್ಟಿಕೊಂಡಿದ್ದು, ಇಂದು(ಮೇ.27) ನಡೆಯಲಿರುವ ಮತ್ತೊಂದು ಹೈವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.