IPL 2022: ಡೆಲ್ಲಿ ಎದುರು ರಾಜಸ್ಥಾನ ರಾಯಲ್ಸ್ಗೆ ರೋಚಕ ಗೆಲುವು, ಅಂಕಪಟ್ಟಿಯಲ್ಲಿ ಟಾಪರ್..!
* ಐಪಿಎಲ್ ನಲ್ಲಿ ಮತ್ತೊಂದು ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್
* ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ರಾಯಲ್ಸ್
* 19ನೇ ಓವರ್ ಮೇಡನ್ ಮಾಡಿ ಪಂದ್ಯದ ದಿಕ್ಕು ಬದಲಿಸಿದ ಪ್ರಸಿದ್ದ್ ಕೃಷ್ಣ
ಮುಂಬೈ(ಏ.22): ಜೋಸ್ ಬಟ್ಲರ್ (Jos Buttler) ಅಮೋಘ ಶತಕ, ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು 15 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ರಾಜಸ್ಥಾನ ರಾಯಲ್ಸ್ ತಂಡವು ರೋಚಕ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ 5ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ನೀಡಿದ್ದ 223 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಉತ್ತಮ ಆರಂಭವನ್ನೇ ಪಡೆಯಿತು. 4.3 ಓವರ್‌ಗಳಲ್ಲಿ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ 43 ರನ್‌ಗಳ ಜತೆಯಾಟವಾಡಿದರು. ಡೇವಿಡ್ ವಾರ್ನರ್ 14 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 28 ರನ್ ಬಾರಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸರ್ಫರಾಜ್ ಖಾನ್ ಕೇವಲ ಒಂದು ರನ್ ಬಾರಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. 48 ರನ್‌ಗಳಿಗೆ ಡೆಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಮೂರನೇ ವಿಕೆಟ್‌ಗೆ ಪೃಥ್ವಿ ಶಾ ಹಾಗೂ ರಿಷಭ್ ಪಂತ್ 51 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಪೃಥ್ವಿ ಶಾ 27 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ರಿಷಭ್ ಪಂತ್ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 44 ರನ್ ಬಾರಿಸಿ ಪ್ರಸಿದ್ಧ್ ಕೃಷ್ಣಗೆ ಎರಡನೇ ಬಲಿಯಾದರು. ಇನ್ನು ಅಕ್ಷರ್ ಪಟೇಲ್ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಶಾರ್ದೂಲ್ ಠಾಕೂರ್ ಬ್ಯಾಟಿಂಗ್ 10 ರನ್‌ಗಳಿಗೆ ಸೀಮಿತವಾಯಿತು.
IPL 2022: ಜೋಸ್ ಬಟ್ಲರ್ ಸ್ಪೋಟಕ ಶತಕ, ಡೆಲ್ಲಿಗೆ ಕಠಿಣ ಗುರಿ..!
ಇನ್ನು ಮಧ್ಯಮ ಕ್ರಮಾಂಕದಲ್ಲಿ ಲಲಿತ್ ಯಾದವ್ ಕೆಚ್ಚೆದೆಯ ಪ್ರದರ್ಶನ ತೋರುವ ಮೂಲಕ ಡೆಲ್ಲಿ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಕೊನೆಯ 2 ಓವರ್‌ಗಳಲ್ಲಿ ಡೆಲ್ಲಿ ಗೆಲ್ಲಲು 36 ರನ್‌ಗಳ ಅಗತ್ಯವಿತ್ತು. 19ನೇ ಓವರ್ ಬೌಲಿಂಗ್ ಮಾಡಿದ್ದ ನೀಳಕಾಯದ ವೇಗಿ ಪ್ರಸಿದ್ಧ್ ಕೃಷ್ಣ ಮೊದಲ ಎರಡು ಎಸೆತಗಳನ್ನು ಡಾಟ್ ಮಾಡಿದರು. ಮೂರನೇ ಎಸೆತದಲ್ಲಿ ಲಲಿತ್ ಯಾದವ್ ಅವರನ್ನು ಪೆವಿಲಿಯನ್ನಿಗಟ್ಟಿರು. ಅಂತಿಮವಾಗಿ ಪ್ರಸಿದ್ದ್ 19 ಓವರ್ ಮೇಡನ್ ಓವರ್ ಮಾಡುವ ಮೂಲಕ ಪಂದ್ಯ ಸಂಪೂರ್ಣವಾಗಿ ರಾಜಸ್ಥಾನ ರಾಯಲ್ಸ್ ಪರ ವಾಲುವಂತೆ ಮಾಡಿದರು.
ಕೊನೆಯ ಓವರ್‌ನಲ್ಲಿ ಡೆಲ್ಲಿ ಗೆಲ್ಲಲು 36 ರನ್‌ಗಳ ಅಗತ್ಯವಿತ್ತು. ಓಬೆಡ್ ಮೆಕಾಯ್ ಎಸೆದ ಮೊದಲ 3 ಎಸೆತಗಳನ್ನು ರೋಮನ್ ಪೋವೆಲ್ ಸಿಕ್ಸರ್ ಚಚ್ಚುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಹೃದಯಬಡಿತ ಹೆಚ್ಚಿಸಿದರು. ಮೂರನೇ ಸಿಕ್ಸರ್ ಚಚ್ಚಿದ್ದು ನೋ ಬಾಲ್ ನೀಡಬೇಕೆಂದು ಡೆಲ್ಲಿ ತಂಡದ ಆಟಗಾರರು ಅಂಪೈರ್ ಬಳಿ ಮನವಿ ಸಲ್ಲಿಸಿದರು. ಆದರೆ ಅಂಪೈರ್ ಆ ಎಸೆತವನ್ನು ಫುಲ್‌ಟಾಸ್ ಎಂದು ಪರಿಗಣಿಸಿದರು. ಇದಾದ ಬಳಿಕ ರಾಯಲ್ಸ್ ವೇಗಿ ಮೆಕಾಯ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದರು.
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟ್ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ತಂಡವು ಜೋಸ್ ಬಟ್ಲರ್ ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್‌ಗೆ 155 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಕಳೆದ ಕೆಲ ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲವಾಗುತ್ತಿದ್ದ ದೇವದತ್ ಪಡಿಕ್ಕಲ್ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಪಡಿಕ್ಕಲ್ 35 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 54 ರನ್ ಬಾರಿಸಿ ಖಲೀಲ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು. ಬಟ್ಲರ್ 65 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 116 ರನ್ ಬಾರಿಸಿ ಮುಷ್ತಾಫಿಜುರ್ ರೆಹಮಾನ್‌ಗೆ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ನಾಯಕ ಸಂಜು ಸ್ಯಾಮ್ಸನ್ ಸ್ಯಾಮ್ಸನ್ ಕೂಡಾ ತಮ್ಮ ಪಾಲಿಗೆ ಸಿಕ್ಕಂತಹ 19 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಮುಗಿಲೆತ್ತರದ ಸಿಕ್ಸರ್ ಸಹಿತ ಅಜೇಯ 46 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು.