IPL 2022: ಜೋಸ್ ಬಟ್ಲರ್‌ ಸ್ಪೋಟಕ ಶತಕ, ಡೆಲ್ಲಿಗೆ ಕಠಿಣ ಗುರಿ..!

* ವಾಂಖೆಡೆ ಮೈದಾನದಲ್ಲಿ ರನ್ ಮಳೆ ಹರಿಸಿದ ಜೋಸ್ ಬಟ್ಲರ್

* ಮೊದಲು ಬ್ಯಾಟ್ ಮಾಡಿ 222 ರನ್ ಕಲೆಹಾಕಿದ ರಾಜಸ್ಥಾನ ರಾಯಲ್ಸ್‌

* ಪ್ರಸಕ್ತ ಐಪಿಎಲ್‌ನಲ್ಲಿ ಮೂರನೇ ಶತಕ ಸಿಡಿಸಿದ ಜೋಸ್ ಬಟ್ಲರ್

IPL 2022 Jos Buttler blasting century helps Rajasthan Royals set 223 runs target to Delhi Capitals kvn

ಮುಂಬೈ(ಏ.22): ರಾಜಸ್ಥಾನ ರಾಯಲ್ಸ್‌ನ (Rajasthan Royals) ಆರಂಭಿಕ ಬ್ಯಾಟರ್‌ ಜೋಸ್ ಬಟ್ಲರ್‌ (Jos Buttler) 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಮೂರನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇಲ್ಲಿನ ವಾಂಖೆಡೆ ಮೈದಾನದಲ್ಲಿ ಜೋಸ್ ಬಟ್ಲರ್‌(116) ಮತ್ತೊಂದು ಸೊಗಸಾದ ಇನಿಂಗ್ಸ್‌ ಕಟ್ಟಿದರು.ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಬಟ್ಲರ್, ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿ ಮಿಂಚಿದರು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ರನ್‌ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ಗೆ (Delhi Capitals) ಕಠಿಣ ಗುರಿ ನೀಡಿದೆ.

ವಾಂಖೆಡೆ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಜಸ್ಥಾನ ರಾಯಲ್ಸ್ ತಂಡವು ಎಚ್ಚರಿಕೆಯ ಆರಂಭವನ್ನು ಪಡೆಯಿತು. ಆರಂಭಿಕ ಬ್ಯಾಟರ್‌ಗಳಾದ ಜೋಸ್ ಬಟ್ಲರ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ (Devdutt Padikkal) ಪವರ್‌ ಪ್ಲೇನಲ್ಲಿ 44 ರನ್‌ಗಳನ್ನು ಕಲೆಹಾಕಿತು. ಮೊದಲ 6 ಓವರ್‌ಗಳನ್ನು ಎಚ್ಚರಿಕೆಯಿಂದ ಆಡಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸಲಾರಂಭಿಸಿದರು. ಮೊದಲ 10 ಓವರ್‌ನಲ್ಲಿ ಈ ಜೋಡಿ 87 ರನ್ ಕಲೆಹಾಕಿದರು. ಕಳೆದ ಕೆಲ ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲವಾಗುತ್ತಿದ್ದ ದೇವದತ್ ಪಡಿಕ್ಕಲ್ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಪಡಿಕ್ಕಲ್ 35 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 54 ರನ್ ಬಾರಿಸಿ ಖಲೀಲ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಮೊದಲ ವಿಕೆಟ್‌ಗೆ 155 ರನ್‌ಗಳ ಜತೆಯಾಟಕ್ಕೆ ತೆರೆ ಬಿದ್ದಿತು.

ಟೂರ್ನಿಯಲ್ಲಿ ಮೂರನೇ ಶತಕ ಚಚ್ಚಿದ ಜೋಸ್ ಬಟ್ಲರ್: ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರೆಡ್ ಹಾಟ್ ಫಾರ್ಮ್‌ನಲ್ಲಿರುವ ಜೋಸ್ ಬಟ್ಲರ್, ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕಳೆದ ಪಂದ್ಯದಲ್ಲಿ ಕೆಕೆಆರ್ ಎದುರು ಆಕರ್ಷಕ ಶತಕ ಚಚ್ಚಿದ್ದ ಬಟ್ಲರ್, ಇದೀಗ ಡೆಲ್ಲಿ ಎದುರು ಶತಕ ಸಿಡಿಸುವ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಸತತ 2 ಶತಕ ಸಿಡಿಸಿದ ಎರಡನೇ ಬ್ಯಾಟರ್ ಎನ್ನುವ ಕೀರ್ತಿಗೆ ಬಟ್ಲರ್ ಪಾತ್ರರಾದರು. ಈ ಮೊದಲು ಶಿಖರ್ ಧವನ್ ಸತತ 2 ಐಪಿಎಲ್ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಶತಕದೊಂದಿಗೆ ಐಪಿಎಲ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್(6), ವಿರಾಟ್ ಕೊಹ್ಲಿ(5) ಬಳಿಕ ಬಟ್ಲರ್(4) ಮೂರನೇ ಸ್ಥಾನಕ್ಕೇರಿದ್ದಾರೆ. ಐಪಿಎಲ್‌ನ ಮೊದಲ 64 ಇನಿಂಗ್ಸ್‌ಗಳಲ್ಲಿ ಒಮ್ಮೆಯೂ ಮೂರಂಕಿ ಮೊತ್ತ ದಾಖಲಿಸಲು ವಿಫಲರಾಗಿದ್ದ ಜೋಸ್ ಬಟ್ಲರ್, ಕಳೆದ 8 ಇನಿಂಗ್ಸ್‌ಗಳಲ್ಲಿ 4 ಶತಕ ಸಿಡಿಸಿದ್ದಾರೆ. ಈ ಮೊದಲು ವಿರಾಟ್ ಕೊಹ್ಲಿ 9 ಇನಿಂಗ್ಸ್‌ಗಳನ್ನಾಡಿ 4 ಶತಕ ಬಾರಿಸಿದ್ದರು. ಅಂತಿಮವಾಗಿ ಬಟ್ಲರ್ 65 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 116 ರನ್ ಬಾರಿಸಿ ಮುಷ್ತಾಫಿಜುರ್ ರೆಹಮಾನ್‌ಗೆ ವಿಕೆಟ್ ಒಪ್ಪಿಸಿದರು. 

IPL 2022: ರಾಜಸ್ಥಾನ ರಾಯಲ್ಸ್ ಎದುರು ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ

ಕೊಹ್ಲಿ ದಾಖಲೆ ಇನ್ ಡೇಂಜರ್: ಹೌದು, ವಿರಾಟ್ ಕೊಹ್ಲಿ 2016ರ ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ಮೂಲಕ ಒಂದೇ ಆವೃತ್ತಿಯಲ್ಲಿ 4 ಶತಕ ಸಿಡಿಸಿದ್ದರು. ಇದರ ಜತೆಗೆ 2016ರ ಐಪಿಎಲ್‌ನಲ್ಲಿ ಬರೋಬ್ಬರಿ 973 ರನ್‌ ಚಚ್ಚಿದ್ದರು. ಇದೀಗ ಜೋಸ್ ಬಟ್ಲರ್ ಮೂರು ಶತಕ ಸಿಡಿಸಿದ್ದು, ಇನ್ನೊಂದು ಶತಕ ಬಾರಿಸಿದರೆ, ಕೊಹ್ಲಿ ದಾಖಲೆ ಸರಿಗಟ್ಟಲಿದ್ದಾರೆ. ಇನ್ನು ಬಟ್ಲರ್ ಸದ್ಯ ಕೇವಲ 7 ಇನಿಂಗ್ಸ್‌ಗಳನ್ನಾಡಿ 491 ರನ್ ಬಾರಿಸಿದ್ದು, ಇನ್ನು 482 ರನ್ ಬಾರಿಸಿದರೆ, ಕೊಹ್ಲಿ ದಾಖಲೆ ಧೂಳಿಪಟವಾಗಲಿದೆ

ಕೊನೆಯಲ್ಲಿ ನಾಯಕ ಸಂಜು ಸ್ಯಾಮ್ಸನ್‌ ಸ್ಯಾಮ್ಸನ್‌ ಕೂಡಾ ತಮ್ಮ ಪಾಲಿಗೆ ಸಿಕ್ಕಂತಹ 19 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಮುಗಿಲೆತ್ತರದ ಸಿಕ್ಸರ್ ಸಹಿತ ಅಜೇಯ 46 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು. 

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್‌: 222/2
ಜೋಸ್ ಬಟ್ಲರ್: 116
ದೇವದತ್ ಪಡಿಕ್ಕಲ್: 54

ಮುಷ್ತಾಫಿಜುರ್ ರೆಹಮಾನ್: 43/1

(* ರಾಜಸ್ಥಾನ ರಾಯಲ್ಸ್‌ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)

Latest Videos
Follow Us:
Download App:
  • android
  • ios