Asianet Suvarna News Asianet Suvarna News

IPL 2022 ಲಖನೌ ಮಣಿಸಿ ಜಯದ ಹಳಿಗೆ ಮರುಳಲು ರಾಜಸ್ಥಾನ ರಾಯಲ್ಸ್ ರೆಡಿ..!

* ಮುಂಬೈನಲ್ಲಿಂದು ರಾಜಸ್ಥಾನ ರಾಯಲ್ಸ್-ಲಖನೌ ಸೂಪರ್ ಜೈಂಟ್ಸ್‌ ಮುಖಾಮುಖಿ

* ಹ್ಯಾಟ್ರಿಕ್ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ ಲಖನೌ ಸೂಪರ್ ಜೈಂಟ್ಸ್

* ಆರ್‌ಸಿಬಿ ಎದುರು ಸೋತಿರುವ ರಾಜಸ್ಥಾನ ರಾಯಲ್ಸ್‌ಗೆ ಕಮ್‌ಬ್ಯಾಕ್ ಮಾಡುವ ಗುರಿ

IPL 2022 Rajastha Royals take on Lucknow Super Giants in Mumbai kvn
Author
Bengaluru, First Published Apr 10, 2022, 12:24 PM IST | Last Updated Apr 10, 2022, 12:24 PM IST

ಮುಂಬೈ(ಏ.10): ಸೋಲಿನ ಆರಂಭ ಪಡೆದಿದ್ದರೂ ಬಳಿಕ ಪುಟಿದೆದ್ದು ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಐಪಿಎಲ್‌ನ ನೂತನ ತಂಡ ಲಖನೌ ಸೂಪರ್‌ ಜೈಂಟ್ಸ್‌ (Lucknow Super Giants), ಭಾನುವಾರ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಸೆಣಸಾಡಲಿದೆ. ಕನ್ನಡಿಗ ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಖನೌ ಸೂಪರ್ ಜೈಂಟ್ಸ್‌ ಮತ್ತೊಂದು ಗೆಲುವಿನ ಮೂಲಕ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದ್ದರೆ, ಆರಂಭಿಕ ಎರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ಹಾಗೂ ಸನ್‌ರೈಸ​ರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ ಗೆದ್ದರೂ 3ನೇ ಪಂದ್ಯದಲ್ಲಿ ಬೆಂಗಳೂರಿಗೆ ಶರಣಾಗಿದ್ದ ರಾಜಸ್ಥಾನ ಗೆಲುವಿನ ಲಯಕ್ಕೆ ಮರಳಲು ಕಾತರಿಸುತ್ತಿದೆ.

ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಮೊದಲೆರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಆದರೆ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು 170 ರನ್‌ಗಳನ್ನು ಕಾಪಾಡಿಕೊಳ್ಳಲು ವಿಫಲವಾಗುವ ಮೂಲಕ ಟೂರ್ನಿಯಲ್ಲಿ ಮೊದಲ ಸೋಲು ಕಂಡಿತ್ತು. ಒಂದು ಹಂತದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೈಯಲ್ಲಿದ್ದ ಗೆಲುವನ್ನು ಕಸಿಯುವಲ್ಲಿ ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹಮ್ಮದ್ ಜೋಡಿ ಯಶಸ್ವಿಯಾಗಿತ್ತು. ಹೀಗಾಗಿ ರಾಜಸ್ಥಾನ ರಾಯಲ್ಸ್ ತಂಡವು ಇದೀಗ ಗೆಲುವಿನ ಹಳಿಗೆ ಮರಳಲು ಸಜ್ಜಾಗಿದೆ. 

ಜೋಸ್ ಬಟ್ಲರ್‌ (Jos Buttler), ರಾಯಲ್ಸ್ ಪಡೆಗೆ ಸ್ಪೋಟಕ ಆರಂಭ ಒದಗಿಸಿಕೊಡುತ್ತಿರುವುದು, ಯಶಸ್ವಿ ಜೈಸ್ವಾಲ್ ಅವರ ವೈಫಲ್ಯವನ್ನು ಮರೆಮಾಚುವಂತೆ ಮಾಡಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಶಿಮ್ರೊನ್ ಹೆಟ್ಮೇಯರ್ ಅವರಂತಹ ಟಿ20 ಸ್ಪೆಷಲಿಸ್ಟ್ ಬ್ಯಾಟರ್‌ಗಳು ತಂಡಕ್ಕೆ ಆಸರೆಯಾಗುತ್ತಿರುವುದು ರಾಯಲ್ಸ್‌ ಪಡೆಯ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಬೌಲಿಂಗ್‌ನಲ್ಲಿ ಪ್ರಸಿದ್ದ್ ಕೃಷ್ಣ, ಯುಜುವೇಂದ್ರ ಚಹಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್ ಕೂಡಾ ಅಚ್ಚುಕಟ್ಟಾದ ದಾಳಿ ಸಂಘಟಿಸುತ್ತಿದ್ದು, ಬಲಿಷ್ಠ ಲಖನೌ ತಂಡಕ್ಕೆ ಶಾಕ್ ನೀಡಲು ಸಜ್ಜಾಗಿದೆ. 

IPL 2022: ಕೋಲ್ಕತಾ ಸವಾಲು ಗೆಲ್ಲುತ್ತಾ ಡೆಲ್ಲಿ ಕ್ಯಾಪಿಟಲ್ಸ್‌?

ಇನ್ನು ಕೆ.ಎಲ್. ರಾಹುಲ್ ನೇತೃತ್ವದ ಲಖನೌ ತಂಡವು ಮೊದಲ ಪಂದ್ಯದಲ್ಲಿ ಸೋಲಿನ ಹೊರತಾಗಿ ಆ ಬಳಿಕ ಆಡಿದ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಡಿ ಕಾಕ್, ಆಯುಷ್ ಬದೋನಿ, ರಾಹುಲ್, ಎವಿನ್ ಲೆವಿಸ್‌ ಸೇರಿದಂತೆ ಲಖನೌ ಬ್ಯಾಟರ್‌ಗಳು ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಇನ್ನು ಆಲ್ರೌಂಡರ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್ ಹಾಗೂ ಕೃಷ್ಣಪ್ಪ ಗೌತಮ್ ಕೂಡಾ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ರವಿ ಬಿಷ್ಣೋಯಿ ಹಾಗೂ ಆವೇಶ್ ಖಾನ್ ಎದುರಾಳಿ ಬ್ಯಾಟರ್‌ಗಳಿಗೆ ಸುಲಭವಾಗಿ ರನ್ ಬಿಟ್ಟುಕೊಡುತ್ತಿಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಲಖನೌ ಸೂಪರ್ ಜೈಂಟ್ಸ್‌ : ಕೆ.ಎಲ್ ರಾಹುಲ್‌(ನಾಯಕ), ಕ್ವಿಂಟನ್‌ ಡಿ ಕಾಕ್‌, ಎವಿನ್ ಲೆವಿಸ್‌, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ‌, ಕೃಷ್ಣಪ್ಪ ಗೌತಮ್‌, ಜೇಸನ್ ಹೋಲ್ಡರ್‌, ಆಂಡ್ರ್ಯೂ ಟೈ, ರವಿ ಬಿಷ್ಣೋಯ್‌, ಆವೇಶ್ ಖಾನ್‌.

ರಾಜಸ್ಥಾನ ರಾಯಲ್ಸ್ : ಜೋಸ್ ಬಟ್ಲರ್‌, ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌(ನಾಯಕ), ದೇವದತ್ ಪಡಿಕ್ಕಲ್‌, ಶಿಮ್ರೊನ್ ಹೆಟ್ಮೇಯರ್‌, ರಿಯಾನ್ ಪರಾಗ್‌, ನವದೀಪ್ ಸೈನಿ, ರವಿಚಂದ್ರನ್ ಅಶ್ವಿನ್‌, ಯುಜುವೇಂದ್ರ ಚಹಲ್‌, ಟ್ರೆಂಟ್ ಬೌಲ್ಟ್‌, ಪ್ರಸಿದ್ಧ್ ಕೃಷ್ಣ.

ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ, 
ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios