* ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್‌-ಗುಜರಾತ್ ಟೈಟಾನ್ಸ್ ಮುಖಾಮುಖಿ* ಐಪಿಎಲ್‌ 15ನೇ ಆವೃತ್ತಿಯ ಪ್ಲೇ-ಆಫ್‌ನ ಮೊದಲ ಕ್ವಾಲಿಫಯರ್‌ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನ ಆತಿಥ್ಯ* ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಿದರೆ, ಸೋತ ತಂಡಕ್ಕೆ ಫೈನಲ್‌ಗೇರಲು ಮತ್ತೊಂದು ಅವಕಾಶ ಸಿಗಲಿದೆ

ಕೋಲ್ಕತಾ(ಮೇ24): ಮಾರಕ ವೇಗಿಗಳ ಬಲ ಮತ್ತು ಫಿನಿಶರ್‌ಗಳ ದಂಡನ್ನೇ ಹೊಂದಿರುವ ಗುಜರಾತ್‌ ಟೈಟಾನ್ಸ್‌ (Gujarat Titans), ಐಪಿಎಲ್‌ 15ನೇ ಆವೃತ್ತಿಯ ಪ್ಲೇ-ಆಫ್‌ನ ಮೊದಲ ಕ್ವಾಲಿಫಯರ್‌ನಲ್ಲಿ ಮಂಗಳವಾರ ಉತ್ಸಾಹಿ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡದ ಸವಾಲನ್ನು ಎದುರಿಸಲಿದೆ. ಚೊಚ್ಚಲ ಬಾರಿಗೆ ನಾಯಕತ್ವ ವಹಿಸಿಕೊಂಡರೂ, ತಂಡವನ್ನು ಪ್ಲೇ-ಆಫ್‌ಗೇರಿಸುವಲ್ಲಿ ಯಶಸ್ವಿಯಾಗಿರುವ ಹಾರ್ದಿಕ್‌ ಪಾಂಡ್ಯ, ತಮ್ಮ ಆಲ್ರೌಂಡ್‌ ಆಟದ ಮೂಲಕ ಗಮನ ಸೆಳೆದಿರುವುದಲ್ಲದೇ, ತಂಡದ ನಿರ್ವಹಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.

ಮೊದಲ ಕೆಲ ಪಂದ್ಯಗಳಲ್ಲಿ ದುರ್ಬಲ ಎನಿಸಿದ್ದ ತಂಡದ ಆರಂಭಿಕ ಜೋಡಿ ವೃದ್ಧಿಮಾನ್‌ ಸಾಹ ಸೇರ್ಪಡೆಯಿಂದ ಬಲಿಷ್ಠಗೊಂಡಿದೆ. ಸಾಹ ಹಾಗೂ ಶುಭ್‌ಮನ್‌ ಗಿಲ್‌ (Shubman Gill) ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದು, ರಶೀದ್‌ ಖಾನ್‌ (Rashid Khan), ಡೇವಿಡ್‌ ಮಿಲ್ಲರ್‌ (David Miller), ರಾಹುಲ್‌ ತೆವಾಟಿಯಾ ಫಿನಿಶರ್‌ಗಳ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.

ರಶೀದ್‌ ಡೆತ್‌ ಓವರ್‌ಗಳಲ್ಲಿ ಬೌಲ್‌ ಮಾಡಿ ಯಶಸ್ಸು ಸಾಧಿಸುತ್ತಿರುವುದು ಎದುರಾಳಿಗಳ ನಿದ್ದೆ ಕೆಡಿಸಿದೆ. ಮೊಹಮದ್‌ ಶಮಿ ಪವರ್‌-ಪ್ಲೇನಲ್ಲಿ ಅತಿಹೆಚ್ಚು ವಿಕೆಟ್‌ (11) ಕಬಳಿಸಿದ ಬೌಲರ್‌ ಎನಿಸಿದ್ದು, ರಾಯಲ್ಸ್‌ನ ಸ್ಫೋಟಕ ಬ್ಯಾಟರ್‌ಗಳ ಎದುರು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಹೊಸ ಪಿಚ್‌ ಬಳಕೆಯಾಗಲಿರುವ ಕಾರಣ, ಗುಜರಾತ್‌ 3ನೇ ವೇಗಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದ್ದು, ಅಲ್ಜಾರಿ ಜೋಸೆಫ್‌ಗೆ ಸ್ಥಾನ ಸಿಗಬಹುದು. ಕಳೆದ 5 ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಗುಜರಾತ್‌, ತನ್ನ ದೌರ್ಬಲ್ಯಗಳಿಗೆ ಪರಿಹಾರ ಕಂಡುಕೊಂಡು ಮೈದಾನಕ್ಕಿಳಿಯಲು ಎದುರು ನೋಡುತ್ತಿದೆ.

ಬಟ್ಲರ್‌, ಚಹಲ್‌ ಮೇಲೆ ನಿರೀಕ್ಷೆ: ಅತಿಹೆಚ್ಚು ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ಮತ್ತು ಅತಿಹೆಚ್ಚು ವಿಕೆಟ್‌ ಪಡೆದು ಪರ್ಪಲ್‌ ಕ್ಯಾಪ್‌ ಹೊಂದಿರುವ ಜೋಸ್‌ ಬಟ್ಲರ್‌ ಹಾಗೂ ಯಜುವೇಂದ್ರ ಚಹಲ್‌ ಮೇಲೆ ರಾಜಸ್ಥಾನ ಹೆಚ್ಚಿನ ವಿಶ್ವಾಸವಿರಿಸಿದೆ. ಬ್ಯಾಟಿಂಗ್‌ನಲ್ಲಿ ಜೈಸ್ವಾಲ್‌, ಸ್ಯಾಮ್ಸನ್‌, ಪಡಿಕ್ಕಲ್‌, ಹೆಟ್ಮೇಯರ್‌ರಂತಹ ಟಿ20 ತಜ್ಞರ ಬಲವಿದ್ದು, ಆರ್‌.ಅಶ್ವಿನ್‌ ಬೌಲಿಂಗ್‌ ಜೊತೆ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿರುವುದು ತಂಡದ ಪಾಲಿಗೆ ಶುಭ ಸುದ್ದಿ. ವೇಗಿ ಪ್ರಸಿದ್‌್ಧ ಕೃಷ್ಣ ಮೇಲೆ ಭಾರೀ ನಿರೀಕ್ಷೆ ಇದ್ದು, ಈ ಆವೃತ್ತಿಯಲ್ಲಿ ಹೆಚ್ಚು ಕ್ಯಾಚ್‌ಗಳನ್ನು ಹಿಡಿದಿರುವ ರಿಯಾನ್‌ ಪರಾಗ್‌ ಕ್ಷೇತ್ರರಕ್ಷಣೆಯಲ್ಲಿ ಮತ್ತೊಮ್ಮೆ ತಮ್ಮ ಗುಣಮಟ್ಟಉಳಿಸಿಕೊಳ್ಳಬೇಕಿದೆ.

IPL 2022 Playoffs: 3 ವರ್ಷಗಳ ಬಳಿಕ ಈಡನ್ ಗಾರ್ಡನ್ಸ್‌ನಲ್ಲಿ ಐಪಿಎಲ್ ಕಲರವ..!

ಲೀಗ್‌ ಹಂತದಲ್ಲಿ ಈ ಎರಡು ತಂಡಗಳು ಎದುರಾದಾಗ ಗುಜರಾತ್‌ 37 ರನ್‌ಗಳಿಂದ ಗೆದ್ದಿತ್ತು. ಇನ್ನು, ಕ್ವಾಲಿಫಯರ್‌-1ನಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದ್ದು, ಸೋಲುವ ತಂಡಕ್ಕೆ ಇನ್ನೊಂದು ಅವಕಾಶವಿರಲಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಕ್ವಾಲಿಫಯರ್‌-2ನಲ್ಲಿ ಸೆಣಸಲಿದೆ.

ಪಿಚ್‌ ರಿಪೋರ್ಚ್‌

ಈಡನ್‌ ಗಾರ್ಡನ್ಸ್‌ ಪಿಚ್‌ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡಲಿದ್ದು, ಸ್ಪಿನ್ನರ್‌ಗಳು ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ ಹೊಸ ಪಿಚ್‌ ಬಳಕೆಯಾಗಲಿರುವ ಕಾರಣ ವೇಗಿಗಳಿಗೆ ಅನುಕೂಲವಾಗಬಹುದು ಎನ್ನಲಾಗಿದೆ. ಮಳೆ ಮುನ್ಸೂಚನೆ ಇರುವ ಕಾರಣ ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಗುಜರಾತ್‌ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್‌ ಗಿಲ್‌, ಮ್ಯಾಥ್ಯೂ ವೇಡ್‌, ಹಾರ್ದಿಕ್ ಪಾಂಡ್ಯ‌(ನಾಯಕ), ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್ ಖಾನ್‌, ಸಾಯಿಕಿಶೋರ್‌, ಲಾಕಿ ಫಗ್ರ್ಯೂಸನ್‌, ಯಶ್‌ ದಯಾಳ್‌, ಮೊಹಮ್ಮದ್ ಶಮಿ.

ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌(ನಾಯಕ), ಡೇವಿಡ್ ಪಡಿಕ್ಕಲ್‌, ರವಿಚಂದ್ರನ್ ಅಶ್ವಿನ್‌, ಶಿಮ್ರೊನ್‌ ಹೆಟ್ಮೇಯರ್‌, ರಯಾನ್‌ ಪರಾಗ್‌, ಟ್ರೆಂಟ್ ಬೌಲ್ಟ್‌, ರಾಹುಲ್ ಚಹಲ್‌, ಪ್ರಸಿದ್ಧ್ ಕೃಷ್ಣ, ಒಬೆಡ್‌ ಮೆಕಾಯ್‌.

ಸ್ಥಳ: ಕೋಲ್ಕತಾ, ಈಡನ್‌ ಗಾರ್ಡನ್ಸ್
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌