ಲಿಯಾಮ್ ಲಿವಿಂಗ್ ಸ್ಟೋನ್ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಇನ್ನಿಂಗ್ಸ್ ನ ಕೊನೆಯಲ್ಲಿ ರಾಹುಲ್ ಚಹರ್ ಬಾರಿಸಿದ ಅಮೂಲ್ಯ ರನ್ ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 9 ವಿಕೆಟ್ ಗೆ 189 ರನ್ ಗಳ ಉತ್ತಮ ಮೊತ್ತ ಪೇರಿಸಿದೆ.

ಮುಂಬೈ (ಏ, 8): ಕಳೆದ ಪಂದ್ಯದಲ್ಲಿ ಆಲ್ರೌಂಡರ್ ನಿರ್ವಹಣೆಯ ಮೂಲಕ ಗಮನಸೆಳೆದಿದ್ದ ಲಿಯಾಮ್ ಲಿವಿಂಗ್ ಸ್ಟೋನ್ (Liam Livingstone) ಸತತ 2ನೇ ಅರ್ಧಶತಕ ಸಿಡಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. 28 ವರ್ಷದ ಇಂಗ್ಲೆಂಡ್ ಮೂಲದ ಬ್ಯಾಟ್ಸ್ ಮನ್ 27 ಎಸೆತಗಳನ್ನು ಎದುರಿಸಿ 7 ಬೌಂಡರಿ, 4 ಸಿಕ್ಸರ್ ನೊಂದಿಗೆ 64 ರನ್ ಸಿಡಿಸಿದರು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ( Brabourne Stadium) ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ (PBKS) ತಂಡ, ಲಿವಿಂಗ್ ಸ್ಟೋನ್ ಬಾರಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ 9 ವಿಕೆಟ್ ಗೆ 189 ರನ್ ಬಾರಿಸಿತು. ಲಿವಿಂಗ್ ಸ್ಟೋನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು, ಗುಜರಾತ್ ಟೈಟಾನ್ಸ್ (GT) ತಂಡ ಗೆಲುವಿಗೆ 190 ರನ್ ಬಾರಿಸಬೇಕಿದೆ.

ಕಳೆದ ಒಂದೂವರೆ ವರ್ಷಗಳಿಂದ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಫಿಟ್ ನೆಸ್ ಬಗ್ಗೆಯೇ ಹೆಚ್ಚಾಗಿ ಚರ್ಚೆ ನಡೆದಿತ್ತು. ಆದರೆ, ಐಪಿಎಲ್ ಮೂಲಕ ಪಾಂಡ್ಯ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದಂತೆ ಈ ಬಾರಿಯೂ ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ತಾವು ಎಸೆದ ಮೊದಲ ಓವರ್ ನಲ್ಲಿಯೇ ವಿಕೆಟ್ ಪಡೆದರು. 140 ಕಿಲೋಮೀಟರ್ ವೇಗದಲ್ಲಿ ಎಸೆದ ಚೆಂಡನ್ನು ಮಯಾಂಕ್ ಅಗರ್ವಾಲ್ ಫುಲ್ ಮಾಡಲು ಯತ್ನಿಸಿದರು. ಆದರೆ, ಶಾರ್ಟ್ ಮಿಡ್ ವಿಕೆಟ್ ನತ್ತ ರಶೀದ್ ಖಾನ್ (Rashid Khan) ಕ್ಯಾಚ್ ಪಡೆದುಕೊಳ್ಳುವುದರೊಂದಿಗೆ ಪಂಜಾಬ್ ಕಿಂಗ್ಸ್ ಮೊದಲ ವಿಕೆಟ್ ಕಳೆದುಕೊಂಡಿತು. ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದ ಜಾನಿ ಬೇರ್ ಸ್ಟೋ, ಶಮಿ ಎಸೆತವನ್ನು ಬೌಂಡರಿಗಟ್ಟುವ ಮೂಲಕ ರನ್ ಖಾತೆ ತೆರೆದಿದ್ದರು.

8 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 8 ರನ್ ಬಾರಿಸಿದ್ದ ಬೇರ್ ಸ್ಟೋ, ಲಾಕಿ ಫರ್ಗುಸನ್ ಗೆ ವಿಕೆಟ್ ಒಪ್ಪಿಸಿದಾಗ ಪಂಜಾಬ್ ಕಿಂಗ್ಸ್ 34 ರನ್ ಬಾರಿಸಿತ್ತು. ಪವರ್ ಪ್ಲೇ ಮುಕ್ತಾಯದ ವೇಳೆಗ 43 ರನ್ ಗಳಿಸಿತ್ತು. ಇದು ಹಾಲಿ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಪವರ್ ಪ್ಲೇಯಲ್ಲಿ ಬಾರಿಸಿದ ಅತ್ಯಂತ ಕನಿಷ್ಠ ಸ್ಕೋರ್ ಆಗಿದೆ. 

3ನೇ ವಿಕೆಟ್ ಗೆ ಜೊತೆಯಾದ ಶಿಖರ್ ಧವನ್ (35ರನ್, 30 ಎಸೆತ, 4 ಬೌಂಡರಿ) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಅಮೂಲ್ಯ 52 ರನ್ ಕಲೆಹಾಕಿದರು. ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಲಿವಿಂಗ್ ಸ್ಟೋನ್, ದರ್ಶನ್ ನಲ್ಕಂಡೆಯನ್ನು ಸರಿಯಾಗಿ ಬೆಂಡೆತ್ತಿದರು. ರಶೀದ್ ಖಾನ್, ಹಾರ್ದಿಕ್ ಪಾಂಡ್ಯ ಎಲ್ಲರ ಎಸೆತಗಳನ್ನೂ ಯಾವ ಹಿಂಜರಿಕೆಯೂ ಇಲ್ಲದೆ ಲಿವಿಂಗ್ ಸ್ಟೋನ್ ಬ್ಯಾಟಿಂಗ್ ಮಾಡಿದ್ದರಿಂದ 10 ಓವರ್ ಗಳ ವೇಳೆಗೆ ಪಂಜಾಬ್ ಕಿಂಗ್ಸ್ 2 ವಿಕೆಟ್ ಗೆ 86 ರರನ್ ಬಾರಿಸಿತ್ತು. ರಶೀದ್ ಖಾನ್ ಎಸೆದ 11ನೇ ಓವರ್ ನ ಮೊದಲ ಎಸೆತದಲ್ಲೇ ಶಿಖರ್ ಧವನ್ ವಿಕೆಟ್ ಒಪ್ಪಿಸಿದರು.

ತಂಡದ ರನ್ ಗತಿಯನ್ನು ಏರಿಸುವ ಜವಾಬ್ದಾರಿ ಹೊತ್ತುಕೊಂಡ ಲಿವಿಂಗ್ ಸ್ಟೋನ್ 4ನೇ ವಿಕೆಟ್ ಗೆ ಜಿತೇಶ್ ಶರ್ಮ (23 ರನ್, 11 ಎಸೆತ, 1 ಬೌಂಡರಿ, 2 ಸಿಕ್ಸರ್) ಜೊತೆ 18 ಎಸೆತಗಳಲ್ಲಿ 38 ರನ್ ಜೊತೆಯಾಟವಾಡಿದರು. ಇದರಲ್ಲಿ ಬಹುತೇಕ ಪಾಲು ಜಿತೇಶ್ ಶರ್ಮ ಅವರದ್ದಾಗಿತ್ತು. ದರ್ಶನ್ ನಲ್ಕಂಡೆ ಎಸೆದ 14ನೇ ಓವರ್ ನ ಮೊದಲ ಎರಡು ಎಸೆತಗಳಲ್ಲಿ ಜಿತೇಶ್ ಶರ್ಮ ಹಾಗೂ ಆಲ್ರೌಂಡರ್ ಒಡಿಯನ್ ಸ್ಮಿತ್ ವಿಕೆಟ್ ಉರುಳಿಸಿದ್ದು ಪಂಜಾಬ್ ಪಾಲಿಗೆ ಆಘಾತಕಾರಿಯಾಗಿ ಪರಿಣಮಿಸಿತು.

IPL 2022 ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ, ಪಂಜಾಬ್ ತಂಡದಲ್ಲಿ ಪ್ರಮುಖ ಬದಲಾವಣೆ

ಹೋರಾಟದ ಇನ್ನಿಂಗ್ಸ್ ಆಡಿದ ಲಿಯಾಮ್ ಲಿವಿಂಗ್ ಸ್ಟೋನ್ ತಂಡದ ಮೊತ್ತ 150ರ ಗಡಿ ದಾಟುತ್ತಿದ್ದಂತೆ ಔಟಾದರು. ಈ ವೇಳೆ ಇನ್ನಿಂಗ್ಸ್ ನಲ್ಲಿ ಇನ್ನೂ 27 ಎಸೆತಗಳು ಬಾಕಿ ಇದ್ದವು. ಆದರೆ, ಬಿಗಿ ದಾಳಿ ನಡೆಸಿದ ಗುಜರಾತ್ ಟೈಟಾನ್ಸ್, ಹೆಚ್ಚಿನ ರನ್ ಬಿಟ್ಟುಕೊಡಲಿಲ್ಲ. ಗುಜರಾತ್ ಟೈಟಾನ್ಸ್ ಪರವಾಗಿ ರಶೀದ್ ಖಾನ್ ಮೂರು ಪ್ರಮುಖ ವಿಕೆಟ್ ಗಳನ್ನು ಉರುಳಿಸಿ ಮಿಂಚಿದರು.

IPL 2022: ಐಪಿಎಲ್​​​​ನಲ್ಲಿ ಧೋನಿ ಮತ್ತೊಂದು ಕಿರಿಕ್..!

ಟಿ20ಯಲ್ಲಿ 1 ಸಾವಿರ ಬೌಂಡರಿ ಫೋರ್ಸ್ ದಾಖಲೆ ಮಾಡಿದ ಧವನ್: ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸಿದರು. ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ 1 ಸಾವಿರ ಬೌಂಡರಿ ಫೋರ್ಸ್ ಗಳನ್ನು ಬಾರಿಸಿದ ಕೇವಲ ಐದನೇ ಬ್ಯಾಟ್ಸ್ ಮನ್ ಎನಿಸಿದರು. ಕ್ರಿಸ್ ಗೇಲ್ 1132 ಬೌಂಡರಿ ಫೋರ್ಸ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಅಲೆಕ್ಸ್ ಹ್ಯಾಲ್ಸ್ (1054), ಡೇವಿಡ್ ವಾರ್ನರ್ (1005) ಹಾಗೂ ಆರನ್ ಫಿಂಚ್ (1004) ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ.