* ಲಖನೌ ಸೂಪರ್ ಜೈಂಟ್ಸ್ ತಂಡಕ್ಕಿಂದು ಮುಂಬೈ ಇಂಡಿಯನ್ಸ್ ಸವಾಲು* ಟೂರ್ನಿಯ ಮೊದಲ ಗೆಲುವಿಗಾಗಿ ಹಾತೊರೆಯುತ್ತಿದೆ ರೋಹಿತ್ ಶರ್ಮಾ ಪಡೆ* ಈಗಾಗಲೇ ಸತತ 7 ಸೋಲು ಕಂಡು ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್
ಮುಂಬೈ(ಏ.24): ಆಡಿರುವ ಎಲ್ಲಾ ಪಂದ್ಯಗಳಲ್ಲಿ ಸೋಲುವುದರೊಂದಿಗೆ 15ನೇ ಆವೃತ್ತಿ ಐಪಿಎಲ್ (Indian Premier League) ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ದಾಖಲೆಯ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಮೊದಲ ಗೆಲುವಿನ ತವಕದಲ್ಲಿದ್ದು, ಭಾನುವಾರ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಸವಾಲನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ವಾಂಖೆಡೆ ಮೈದಾನ ಆತಿಥ್ಯವನ್ನು ವಹಿಸಿದೆ
ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಸತತ 7 ಪಂದ್ಯಗಳ ಸೋಲುಗಳೊಂದಿಗೆ ದಾಖಲೆ ಬರೆದಿದ್ದು, ಇನ್ನೊಂದು ಪಂದ್ಯದ ಸೋಲು ತಂಡವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲಿದೆ. ಗೆಲುವಿಗಾಗಿ ಎಲ್ಲಾ ಪ್ರಯೋಗಗಳನ್ನು ನಡೆಸಿದರೂ ತಂಡಕ್ಕೆ ಸೋಲು ಬೆಂಬಿಡದೆ ಕಾಡುತ್ತಿದ್ದು, ಈ ಪಂದ್ಯದಲ್ಲಿ ಮತ್ತೆ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್ ತಂಡವು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಐಪಿಎಲ್‌ನಲ್ಲಿ ವೈಫಲ್ಯ ಅನುಭವಿಸುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ದಯನೀಯ ವೈಫಲ್ಯ ಅನುಭವಿಸುತ್ತಿರುವುದರಿಂದ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಬೀಳುವಂತೆ ಮಾಡಿದೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ತಿಲಕ್ ವರ್ಮಾ (Tilak Verma) ಜವಾಬ್ದಾರಿಯುತ ಪ್ರದರ್ಶನ ತೋರುತ್ತಿದ್ದಾರೆ. ಇದೀಗ ಬ್ಯಾಟರ್‌ಗಳ ಜತೆಗೆ ಬೌಲರ್‌ಗಳು ಕೂಡಾ ಜವಾಬ್ದಾರಿಯುತ ಪ್ರದರ್ಶನ ತೋರಿದರೆ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಲು ಯಶಸ್ವಿಯಾಗಬಹುದು.
IPL 2022: ಪ್ಲೇ-ಆಫ್ ವೇಳಾಪಟ್ಟಿ ಎಡವಟ್ಟು!
ಇನ್ನು ಕೆ.ಎಲ್.ರಾಹುಲ್ (KL Rahul) ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು 7 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಕಂಡಿದ್ದು, ಎಲ್ಲಾ ವಿಭಾಗಗಳಲ್ಲಿ ಬಲಿಷ್ಠವಾಗಿ ತೋರುತ್ತಿದೆ. ಇನ್ನು ಕೆ.ಎಲ್. ರಾಹುಲ್ ಅವರನ್ನು ಕಟ್ಟಿ ಹಾಕುವುದು ಮುಂಬೈ ಇಂಡಿಯನ್ಸ್ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ. ಯಾಕೆಂದರೆ 2018ರಿಂದೀಚೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಕೆ.ಎಲ್. ರಾಹುಲ್ 94.5ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 2018ರಿಂದೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ದ ಕೆ.ಎಲ್. ರಾಹುಲ್ ಕ್ರಮವಾಗಿ 24, 94, 71, 100*, 17, 77, 60*, 21 ಹಾಗೂ 103* ರನ್ ಬಾರಿಸಿದ್ದಾರೆ. ಲಖನೌ ನಾಯಕ ಕೆ.ಎಲ್ ರಾಹುಲ್, ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜೋಸ್ ಬಟ್ಲರ್ ಹಾಗೂ ಹಾರ್ದಿಕ್ ಪಾಂಡ್ಯ ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹೃತಿಕ್ ಶೊಕೀನ್, ಕೀರನ್ ಪೊಲ್ಲಾರ್ಡ್, ಡೇನಿಯಲ್ ಸ್ಯಾಮ್ಸ್, ಜಯದೇವ್ ಉನಾದ್ಕತ್, ರಿಲೇ ಮೆರೆಡಿತ್, ಜಸ್ಪ್ರೀತ್ ಬುಮ್ರಾ.
ಲಖನೌ ಸೂಪರ್ ಜೈಂಟ್ಸ್: ಕೆ.ಎಲ್. ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋಯ್ನಿಸ್, ಜೇಸನ್ ಹೋಲ್ಡರ್, ದುಸ್ಮಂತಾ ಚಮೀರ, ರವಿ ಬಿಷ್ಣೋಯ್, ಆವೇಶ್ ಖಾನ್.
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
