* ಇಂಡಿಯನ್ ಪ್ರೀಮಿಯರ್‌ ಲೀಗ್‌ ಪ್ಲೇ ಆಫ್‌ ವೇಳಾಪಟ್ಟಿ ಪ್ರಕಟ* ಪ್ಲೇ-ಆಫ್‌ ವೇಳಾಪಟ್ಟಿ ಪ್ರಕಟಿಸುವ ವೇಳೆ ತಪ್ಪು ಮಾಡಿದ ಬಿಸಿಸಿಐ* ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫೈಯರ್ ಪಂದ್ಯ ಮೇ 26, 27ಕ್ಕೆ ನಿಗದಿ

ಮುಂಬೈ(ಏ.24): ಐಪಿಎಲ್‌ ಪ್ಲೇ-ಆಫ್‌ ವೇಳಾಪಟ್ಟಿ (IPL Paly Off Schedule) ಸಿದ್ಧಪಡಿಸುವ ವೇಳೆ ಬಿಸಿಸಿಐ (BCCI) ಭಾರೀ ಎಡವಟ್ಟು ಮಾಡಿದೆ. ಮೊದಲ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಪಂದ್ಯಗಳು ಮೇ 24 ಹಾಗೂ 26ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿದ್ದು, 2ನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಕ್ರಮವಾಗಿ ಮೇ 27, 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿದೆ. ಐಪಿಎಲ್‌ ಲೀಗ್ ಪಂದ್ಯಗಳು ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲಿವೆ.

ಇನ್ನು ಎಲಿಮಿನೇಟರ್‌ ಪಂದ್ಯದಲ್ಲಿ ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋಲುವ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್‌ ಪಂದ್ಯ ಮೇ 26ಕ್ಕೆ ಕೋಲ್ಕತಾದಲ್ಲಿ ನಿಗದಿಯಾಗಿದ್ದು, 2ನೇ ಕ್ವಾಲಿಫೈಯರ್‌ ಮೇ 27ಕ್ಕೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಮೇ 26ರಂದು ಗೆಲ್ಲುವ ತಂಡ ಅಂದೇ ರಾತ್ರಿ ಅಹಮದಾಬಾದ್‌ಗೆ ಪ್ರಯಾಣಿಸಿ ಮತ್ತೊಂದು ಪಂದ್ಯ ಆಡಬೇಕಿದೆ. ಇದೇ ವೇಳೆ 3 ತಂಡಗಳ ಮಹಿಳಾ ಚಾಲೆಂಜರ್‌ ಟೂರ್ನಿಯನ್ನು ಮೇ 24ರಿಂದ 28ರ ವರೆಗೂ ಲಖನೌನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಐಪಿಎಲ್‌ ಪ್ಲೇ-ಆಫ್‌ಗೆ ಶೇ.100ರಷ್ಟು ಪ್ರೇಕ್ಷಕರು

ಮುಂಬೈ: ಫೈನಲ್‌ ಸೇರಿದಂತೆ ಐಪಿಎಲ್‌ 15ನೇ ಆವೃತ್ತಿಯ ಪ್ಲೇ-ಆಫ್‌ ಪಂದ್ಯಗಳಿಗೆ ಶೇ.100ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶ ಕಲ್ಪಿಸಲು ಬಿಸಿಸಿಐ ನಿರ್ಧರಿಸಿದೆ. ಶನಿವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮೊದಲ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಪಂದ್ಯಗಳು ಮೇ 24 ಹಾಗೂ 26ರಂದು ಕೋಲ್ಕತಾದಲ್ಲಿ ನಡೆಯಲಿದ್ದು, 2ನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಕ್ರಮವಾಗಿ ಮೇ 27, 29ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. 

ವಿರಾಟ್‌ ಕೊಹ್ಲಿ ಸತತ 2ನೇ ಡಕೌಟ್‌!

ನವಿ ಮುಂಬೈ: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲರಾಗುತ್ತಿರುವ ಟೀಂ ಇಂಡಿಯಾ (Team India) ಹಾಗೂ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಐಪಿಎಲ್‌ನಲ್ಲೂ ಈಗ ತಮ್ಮ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಶನಿವಾರ ಸನ್‌ರೈಸ​ರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧದ ಪಂದ್ಯದಲ್ಲಿ ಅವರು ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾಗಿ ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧವೂ ಶೂನ್ಯಕ್ಕೆ ನಿರ್ಗಮಿಸಿದ್ದ ಕೊಹ್ಲಿಗೆ ಇದು ಸತತ 2ನೇ ಡಕೌಟ್‌. ಎರಡೂ ಕೂಡಾ ಗೋಲ್ಡನ್‌ ಡಕೌಟ್‌ ಆಗಿರುವುದು ವಿಶೇಷ. ಕೊಹ್ಲಿ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ ಸತತ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಒಟ್ಟಾರೆ 215 ಪಂದ್ಯಗಳಲ್ಲಿ ಅವರು 8 ಬಾರಿ ಶೂನ್ಯ ಸುತ್ತಿದ್ದಾರೆ. 14 ಬಾರಿ ಶೂನ್ಯಕ್ಕೆ ಔಟಾಗಿರುವ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

IPL 2022 ಬ್ಯಾಟಿಂಗ್ ವಿಭಾಗದ ಪರೇಡ್, ಸನ್ ರೈಸರ್ಸ್ ವಿರುದ್ಧ ಹೀನಾಯ ಸೋಲು ಕಂಡ RCB!

ಕೊಹ್ಲಿ ಈ ಆವೃತ್ತಿ ಐಪಿಎಲ್‌ನಲ್ಲಿ 8 ಪಂದ್ಯಗಳಲ್ಲಿ 17ರ ಸರಾಸರಿಯಲ್ಲಿ ಕೇವಲ 119 ರನ್‌ ಗಳಿಸಿದ್ದಾರೆ. ಯಾವುದೇ ಅರ್ಧಶತಕ ಬಾರಿಸದ ಅವರು 2 ಪಂದ್ಯಗಳಲ್ಲಿ ಮಾತ್ರ 40+ ರನ್‌ ಗಳಿಸಿದ್ದಾರೆ. ಈಗಾಗಲೇ ಶತಕ ಬಾರಿಸದೆ 100 ಸ್ಪರ್ಧಾತ್ಮಕ ಪಂದ್ಯಗಳನ್ನು ಪೂರೈಸಿರುವ ಕೊಹ್ಲಿಗೆ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.