* ಐಪಿಎಲ್‌ನ ಬದ್ದ ಎದುರಾಳಿಗಳಾದ ಮುಂಬೈ-ಚೆನ್ನೈ ನಡುವೆ ಫೈಟ್* ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿವೆ ಉಭಯ ತಂಡಗಳು* ಇಂದಾದರೂ ಗೆಲುವಿನ ಖಾತೆ ತೆರೆಯುತ್ತಾ ಮುಂಬೈ ಇಂಡಿಯನ್ಸ್? 

ನವಿ ಮುಂಬೈ(ಏ.21): ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್‌ (Mumbai Indians) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings), ಈ ಆವೃತ್ತಿಯಲ್ಲಿ ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಗುರಿಯಾಗಿದ್ದು, ಗುರುವಾರ ಈ ತಂಡಗಳ ನಡುವಿನ ಪರಸ್ಪರ ಮುಖಾಮುಖಿ ಭಾರೀ ಮಹತ್ವ ಪಡೆದಿದೆ. ಈ ಎರಡೂ ತಂಡಗಳು ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದ್ದು, ಪ್ಲೇ ಆಫ್‌ ಪ್ರವೇಶಿಸಬೇಕಿದ್ದರೆ, ಇಂದಿನಿಂದ ಪ್ರತಿ ಪಂದ್ಯದಲ್ಲೂ ಗೆಲುವು ಅನಿವಾರ್ಯ.

ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು ಈ ಆವೃತ್ತಿಯಲ್ಲಿ ಆಡಿದ ಎಲ್ಲಾ 6 ಪಂದ್ಯಗಳಲ್ಲಿ ಸೋಲನುಭವಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 6 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಕಂಡಿದೆ. ಮುಂಬೈಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಒಂದು ವೇಳೆ ಸೋತರೆ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬೀಳುವುದರ ಜೊತೆಗೆ ಸೋಲಿನಲ್ಲೂ ಹೊಸ ದಾಖಲೆ ಬರೆಯಲಿದೆ. ಯಾವುದೇ ತಂಡ ಇದುವರೆಗೆ ಐಪಿಎಲ್‌ ಆವೃತ್ತಿಯೊಂದರಲ್ಲಿ ಮೊದಲ 7 ಪಂದ್ಯಗಳಲ್ಲಿ ಸೋತ ಇತಿಹಾಸವಿಲ್ಲ. ಈ ಮೊದಲು ಡೆಲ್ಲಿ(2013), ಆರ್‌ಸಿಬಿ(2019) ತಂಡಗಳು ಮೊದಲ 6 ಪಂದ್ಯಗಳಲ್ಲಿ ಸೋತಿದ್ದವು. 

ಮುಂಬೈ ಇಂಡಿಯನ್ಸ್‌ ಪರ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಕೈಕೊಡುತ್ತಿದ್ದು, ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ತೋರಲು ವಿಫಲವಾಗುತ್ತಿರುವುದು ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ. ರೋಹಿತ್ ಶರ್ಮಾ ಬ್ಯಾಟಿಂಗ್ ಸರಾಗವಾಗಿ ರನ್ ಹರಿದು ಬರುತ್ತಿಲ್ಲ. ಇನ್ನು ಜಸ್ಪ್ರೀತ್ ಬುಮ್ರಾ (Jasprit Bumrah) ಮಾರಕ ದಾಳಿ ಸಂಘಟಿಸುತ್ತಿದ್ದರೂ ಉಳಿದ ಬೌಲರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಕೀರನ್ ಪೊಲ್ಲಾರ್ಡ್ ಜವಾಬ್ದಾರಿಯುತ ಪ್ರದರ್ಶನ ತೋರಿದರೆ, ಮುಂಬೈ ತಂಡವು ಹಾಲಿ ಚಾಂಪಿಯನ್ ಸಿಎಸ್‌ಕೆ ಮೇಲೆ ಪ್ರಾಬಲ್ಯ ಮೆರೆಯಬಹುದಾಗಿದೆ.

Kieron Pollard Retire ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪೊಲ್ಲಾರ್ಡ್‌ ದಿಢೀರ್ ವಿದಾಯ

ಇನ್ನು ಚೆನ್ನೈಗೂ ಗೆಲುವು ಅನಿವಾರ್ಯ. ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 5 ಪಂದ್ಯಗಳನ್ನು ಸೋತಿರುವ ತಂಡ ಈ ಪಂದ್ಯವನ್ನೂ ಕಳೆದುಕೊಂಡರೆ ಪ್ಲೇ-ಆಫ್‌ ಹಾದಿ ಮತ್ತಷ್ಟು ಕಠಿಣವಾಗಲಿದೆ. ಹೀಗಾದರೆ ಮುಂದಿನ 7 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು ಅದೃಷ್ಠವೂ ಕೈ ಹಿಡಿದರೆ ಮಾತ್ರ ಪ್ಲೇ-ಆಫ್‌ ಪ್ರವೇಶಿಸಲಿದೆ.

ಐಪಿಎಲ್‌ನ ಎರಡು ಸಾಂಪ್ರದಾಯಿಕ ಎದುರಾಳಿಗಳು ಎಂದು ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇದುವರೆಗೂ ಒಟ್ಟು 32 ಬಾರಿ ಮುಖಾಮುಖಿಯಾಗಿದ್ದು, 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಕೊಂಚ ಮೇಲುಗೈ ಸಾಧಿಸಿದೆ. 32 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವು 19 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ರೋಹಿತ್ ಶರ್ಮಾ‌(ನಾಯಕ), ಇಶಾನ್ ಕಿಶನ್‌, ಡೆವಾಲ್ಡ್ ಬ್ರೆವಿಸ್‌, ಸೂರ್ಯಕುಮಾರ್‌ ಯಾದವ್, ತಿಲಕ್ ವರ್ಮಾ‌, ಕೀರನ್ ಪೊಲ್ಲಾರ್ಡ್‌, ಫ್ಯಾಬಿನ್ ಆ್ಯಲೆನ್‌, ಜಯದೇವ್ ಉನಾದ್ಕತ್‌, ಮುರುಗನ್.ಅಶ್ವಿನ್‌, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್‌.

ಚೆನ್ನೈ: ಋುತುರಾಜ್‌ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೋಯಿನ್ ಅಲಿ‌, ಅಂಬಟಿ ರಾಯುಡು, ರವೀಂದ್ರ ಜಡೇಜಾ(ನಾಯಕ), ಶಿವಂ ದುಬೆ, ಎಂ ಎಸ್ ಧೋನಿ, ಡ್ವೇನ್ ಬ್ರಾವೊ, ಮಹೀಶ್ ತೀಕ್ಷಣ, ಕ್ರಿಸ್ ಜೋರ್ಡನ್‌, ಮುಕೇಶ್ ಚೌಧರಿ‌.

ಸ್ಥಳ: ನವಿ ಮುಂಬೈ ಡಿ.ವೈ.ಪಾಟೀಲ್‌ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌