* ರಿಷಭ್ ಪಂತ್ ನೇತೃತ್ವದ ಡೆಲ್ಲಿಗಿಂದು ಲಖನೌ ಸೂಪರ್ ಜೈಂಟ್ಸ್ ಸವಾಲು* ಟೀಂ ಇಂಡಿಯಾ ಭಾವಿ ನಾಯಕರ ನಡುವಿನ ಪೈಪೋಟಿ?* ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ ಲಖನೌ ಸೂಪರ್ ಜೈಂಟ್ಸ್
ನವಿ ಮುಂಬೈ(ಏ.07): ಟೀಂ ಇಂಡಿಯಾ (Team India) ಭವಿಷ್ಯದ ನಾಯಕರು ಎಂದೇ ಕರೆಯಲ್ಪಡುವ ರಿಷಭ್ ಪಂತ್ (Rishabh Pant) ಹಾಗೂ ಕೆ.ಎಲ್.ರಾಹುಲ್ (KL Rahul) ನಡುವಿನ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡಗಳು ಮುಖಾಮುಖಿಯಾಗಲಿದ್ದು, ಡೆಲ್ಲಿ ಪುಟಿದೇಳಲು ಎದುರು ನೋಡುತ್ತಿದ್ದರೆ, ಲಖನೌ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದೆ.
ಲಖನೌ ಸೂಪರ್ ಜೈಂಟ್ಸ್ ತಂಡವು ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ಗೆ ಶರಣಾಗಿದ್ದರೂ, ಬಳಿಕ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಗೆಲುವು ಸಾಧಿಸಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಗೆದ್ದರೂ ಬಳಿಕ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಆಘಾತಕಾರಿ ಸೋಲನುಭವಿಸಿದೆ.
ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಡೇವಿಡ್ ವಾರ್ನರ್ (David Warner) ಹಾಗೂ ಏನ್ರಿಚ್ ನೋಕಿಯ ಸೇರ್ಪಡೆ ಡೆಲ್ಲಿ ತಂಡಕ್ಕೆ ಬಲ ಒದಗಿಸಲಿದೆ. ಡೇವಿಡ್ ವಾರ್ನರ್ ಆಡಬೇಕಾದರೆ ಟಿಮ್ ಸೀಫರ್ಚ್ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಮುಸ್ತಾಫಿಜುರ್ ರೆಹಮಾನ್ ಅಥವಾ ರೋವ್ಮನ್ ಪೊವೆಲ್ ಬದಲು ಏನ್ರಿಚ್ ನೋಕಿಯಾ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಇದೆ. ಪಾಕಿಸ್ತಾನ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿಳಿದ ಡೇವಿಡ್ ವಾರ್ನರ್, ಇದೀಗ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ಪರ ಇನಿಂಗ್ಸ್ ಆರಂಭಿಸಲು ಎದುರು ನೋಡುತ್ತಿದ್ದಾರೆ. ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಮೂಲಕವೇ ಡೇವಿಡ್ ವಾರ್ನರ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಸನ್‌ರೈಸರ್ಸ್ ತಂಡದ ನಾಯಕರಾಗಿ ಯಶಸ್ಸು ಗಳಿಸಿ, ಇದೀಗ ಮತ್ತೊಮ್ಮೆ ಡೆಲ್ಲಿಗೆ ಬಲ ತುಂಬಲು ಎದುರು ನೋಡುತ್ತಿದ್ದಾರೆ.
IPL 2022: ಪ್ಯಾಟ್ ಕಮಿನ್ಸ್ ಆರ್ಭಟಕ್ಕೆ ಮುಂಬೈ ಇಂಡಿಯನ್ಸ್ ಧೂಳೀಪಟ...!
ಇನ್ನೊಂದೆಡೆ, ಸತತ 2 ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾದಲ್ಲಿರುವ ಲಖನೌ ಸೂಪರ್ ಜೈಂಟ್ಸ್ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಸೇರ್ಪಡೆ ಮತ್ತಷ್ಟು ಬಲ ನೀಡಿದೆ. ಅವರು ಆ್ಯಂಡ್ರೂ ಟೈ ಬದಲು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಕ್ವಿಂಟನ್ ಡಿ ಕಾಕ್, ಆಯುಷ್ ಬದೋನಿ, ಎವಿನ್ ಲೆವಿಸ್ ಹಾಗೂ ದೀಪಕ್ ಹೂಡಾ ಭರ್ಜರಿ ಫಾರ್ಮ್‌ನಲ್ಲಿರುವುದು ಲಖನೌ ತಂಡದ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಇನ್ನು ತಂಡದ ಬೌಲರ್‌ಗಳು ಕೂಡಾ ಕರಾರುವಕ್ಕಾದ ದಾಳಿ ನಡೆಸುವ ಮೂಲಕ ಕಳೆದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕೃನಾಲ್ ಪಾಂಡ್ಯ ಹಾಗೂ ಜೇಸನ್ ಹೋಲ್ಡರ್ ಎದುರಾಳಿ ಬ್ಯಾಟರ್‌ಗಳಿಗೆ ಸುಲಭವಾಗಿ ರನ್ ಬಾರಿಸಲು ಅವಕಾಶ ಮಾಡಿಕೊಡುತ್ತಿಲ್ಲ. ಇನ್ನು ಯುವ ವೇಗಿ ಆವೇಶ್ ಖಾನ್ ಕೂಡಾ ಮಿಂಚಿನ ವೇಗದಲ್ಲಿ ದಾಳಿ ನಡೆಸುತ್ತಿದ್ದು, ಬಲಿಷ್ಠ ಡೆಲ್ಲಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಸರ್ಫರಾಜ್ ಖಾನ್/ಯಶ್ ಧುಳ್, ರಿಷಭ್ ಪಂತ್(ನಾಯಕ), ಲಲಿತ್ ಯಾದವ್, ರೋವ್ಮನ್ ಪೊವೆಲ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹಮದ್/ಚೇತನ್ ಚೇತನ್, ಏನ್ರಿಚ್ ನೋಕಿಯಾ
ಲಖನೌ ಸೂಪರ್ ಜೈಂಟ್ಸ್: ಕೆ.ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಎವಿನ್ ಲೆವಿಸ್, ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಆವೇಶ್ ಖಾನ್.
ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್ ಕ್ರೀಡಾಂಗಣ,
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
