ಐಪಿಎಲ್ ಪ್ಲೇ-ಆಫ್: ಸೋಲುವ ತಂಡ ಟೂರ್ನಿಯಿಂದ ಹೊರಕ್ಕೆಗೆಲ್ಲುವ ತಂಡಕ್ಕೆ ಕ್ವಾಲಿಫಯರ್-2 ಪಂದ್ಯಕ್ಕೆ ಅರ್ಹತೆಲೀಗ್ ಹಂತದ ಪಂದ್ಯದಲ್ಲಿ ಲಖನೌ ವಿರುದ್ಧ ಗೆದ್ದಿದ್ದ ಆರ್‌ಸಿಬಿಗೆ ಮತ್ತೊಂದು ಜಯದ ಗುರಿ
ಕೋಲ್ಕತ್ತ (ಮೇ. 25): ನಿರ್ಣಾಯಕ ಹಂತದಲ್ಲಿ ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ (Virat Kohli), ನಾಟಕೀಯ ರೀತಿಯಲ್ಲಿ ಸಿಕ್ಕ ಪ್ಲೇ-ಆಫ್ (Paly Off) ಪ್ರವೇಶ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದ್ದು, ಬುಧವಾರ ಬಲಿಷ್ಠ ಲಖನೌ ಸೂಪರ್‌ಜೈಂಟ್ಸ್ (Lucknow Super Giants )ವಿರುದ್ಧದ ಎಲಿಮಿನೇಟರ್ (Eliminator ) ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ (Faf Du Plesis) ಪಡೆ ಗೆಲುವಿನ ನಿರೀಕ್ಷೆಯಲ್ಲಿದೆ.
ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದ ವಿರಾಟ್, ಗುಜರಾತ್ ವಿರುದ್ಧದ ಪಂದ್ಯದಲ್ಲಿ 54 ಎಸೆತಗಳಲ್ಲಿ 73 ರನ್ ಗಳಿಸಿ ಲಯ ಕಂಡುಕೊಂಡರು. ಈ ಆವೃತ್ತಿಯಲ್ಲಿ ಅವರು ಬಾರಿಸಿದ ಕೇವಲ 2ನೇ ಅರ್ಧಶತಕ ಅದು. ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಗೆದ್ದರೂ ಆರ್‌ಸಿಬಿ ಪ್ಲೇ-ಆಫ್ ಭವಿಷ್ಯ ಮುಂಬೈ ಇಂಡಿಯನ್ಸ್ ಕೈಯಲ್ಲಿತ್ತು. ಡೆಲ್ಲಿ ವಿರುದ್ಧ ಮುಂಬೈ ಗೆದ್ದಿದ್ದರಿಂದ ಆರ್‌ಸಿಬಿ ಪ್ಲೇ-ಆಫ್‌ಗೆ ಪ್ರವೇಶ ಪಡೆದಿದ್ದು, ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.
ಕೊಹ್ಲಿ ಜೊತೆ ಡು ಪ್ಲೆಸಿಸ್ ಸಹ ಉತ್ತಮ ಲಯದಲ್ಲಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಮೇಲೂ ದೊಡ್ಡ ಜವಾಬ್ದಾರಿ ಇದೆ. ಬೌಲಿಂಗ್‌ನಲ್ಲಿ ಜೋಶ್ ಹೇಜಲ್‌ವುಡ್, ಹರ್ಷಲ್ ಪಟೇಲ್, ವಾನಿಂಡು ಹಸರಂಗ ತಂಡದ ಟ್ರಂಪ್ ಕಾರ್ಡ್ಸ್ ಎನಿಸಿದ್ದು, ಈ ಮೂವರು ಸೇರಿ ಒಟ್ಟು 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಾಬಾಜ್ ಅಹ್ಮದ್, ಮ್ಯಾಕ್ಸ್‌ವೆಲ್ ಎದುರಾಳಿಯ ರನ್‌ರೇಟ್‌ಗೆ ಕಡಿವಾಣ ಹಾಕಬೇಕಿದ್ದು, ನಿರ್ಣಾಯಕ ಪಂದ್ಯದಲ್ಲಿ ತಂಡ ಮೊಹಮದ್ ಸಿರಾಜ್‌ರನ್ನು ಕಣಕ್ಕಿಳಿಸುತ್ತದೆಯೋ ಅಥವಾ ಸಿದ್ಧಾಥ್‌ರ್ ಕೌಲ್‌ರನ್ನೇ ಮುಂದುವರಿಸುತ್ತೋ ಎನ್ನುವ ಕುತೂಹಲವಿದೆ.
ಆರ್‌ಸಿಬಿಯ ಸ್ಫೋಟಕ ಬ್ಯಾಟರ್‌ಗಳಿಗೆ ಲಖನೌದ ಯುವ ವೇಗಿಗಳಾದ ಆವೇಶ್ ಖಾನ್ ಮತ್ತು ಮೋಹ್ಸಿನ್ ಖಾನ್ ಸವಾಲೆಸೆಯಲಿದ್ದಾರೆ. ಇವರಿಬ್ಬರ ಜೊತೆ ಅನುಭವಿ ಜೇಸನ್ ಹೋಲ್ಡರ್ ಮತ್ತು ದುಷ್ಮಾಂತ ಚಮೀರ ಸಹ ಇದ್ದಾರೆ. ಆದರೆ ಇವರಿಬ್ಬರು ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ವಿಫಲವಾಗಿದ್ದು, ನಾಯಕ ಕೆ.ಎಲ್.ರಾಹುಲ್‌ರ ತಲೆಬಿಸಿ ಹೆಚ್ಚಿಸಿದೆ.
ರಾಹುಲ್, ಡಿ ಕಾಕ್ ಭೀತಿ: ಆರ್‌ಸಿಬಿಗೆ ಲಖನೌದ ಆರಂಭಿಕರಾದ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್‌ರ ಭೀತಿ ಸಹಜವಾಗಿಯೇ ಕಾಡಲಿದೆ. ಈ ಇಬ್ಬರು ಸೇರಿ ಈ ಆವೃತ್ತಿಯಲ್ಲಿ 1039 ರನ್ ಕಲೆಹಾಕಿದ್ದು, ವೈಯಕ್ತಿಕವಾಗಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 210 ರನ್ ಜೊತೆಯಾಟವಾಡಿ ದಾಖಲೆ ಬರೆದಿದ್ದ ಈ ಜೋಡಿಯನ್ನು ಆರಂಭದಲ್ಲೇ ಪೆವಿಲಿಯನ್‌ಗಟ್ಟದೆ ಇದ್ದರೆ ಆರ್‌ಸಿಬಿಗೆ ಅಪಾಯ ಕಟ್ಟಿಟ್ಟಬುತ್ತಿ.
IPL 2022 ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್, ರಾಜಸ್ಥಾನ ಮಣಿಸಿ ಫೈನಲ್ ಪ್ರವೇಶಿಸಿದ ಗುಜರಾತ್!
ಈ ಆವೃತ್ತಿಯಲ್ಲಿ 4 ಅರ್ಧಶತಕಗಳನ್ನು ಬಾರಿಸಿರುವ ದೀಪಕ್ ಹೂಡಾ ಮೇಲೂ ತಂಡ ಹೆಚ್ಚಿನ ವಿಶ್ವಾಸವಿರಿಸಿದೆ. ಈ ಮೂವರನ್ನು ಹೊರತುಪಡಿಸಿ ತಂಡದ ಉಳಿದ್ಯಾವ ಬ್ಯಾಟರ್‌ಗಳು ಅಷ್ಟಾಗಿ ಪರಿಣಾಮಕಾರಿ ಎನಿಸಿಲ್ಲ. ಮಧ್ಯಮ ಕ್ರಮಾಂಕದ ಸಮಸ್ಯೆ ಲಖನೌಗೆ ನಾಕೌಟ್ ಪಂದ್ಯದಲ್ಲಿ ಮುಳುವಾಗಬಹುದು.
ಬೆಂಗಳೂರು ನನ್ನ ಎರಡನೇ ತವರು: ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಎಬಿ ಡಿವಿಲಿಯರ್ಸ್..!
ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದಾಗ ಲಖನೌಗೆ ಆರ್‌ಸಿಬಿ 17 ರನ್‌ಗಳ ಸೋಲುಣಿಸಿತ್ತು. ಮತ್ತೊಂದು ಗೆಲುವಿನೊಂದಿಗೆ ಫೈನಲ್ ರೇಸ್‌ನಲ್ಲಿ ಉಳಿಯಲು ಬೆಂಗಳೂರು ತಂಡ ಎದುರು ನೋಡುತ್ತಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಕ್ವಾಲಿಫಯರ್-2 ಪಂದ್ಯಕ್ಕೆ ಅರ್ಹತೆ ಗಿಟ್ಟಿಸಲಿದ್ದು, ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ಪತಿದಾರ್, ಮ್ಯಾಕ್ಸ್‌ವೆಲ್, ಮಹಿಪಾಲ್, ಶಾಬಾಜ್, ಕಾರ್ತಿಕ್, ಹಸರಂಗ, ಹರ್ಷಲ್, ಸಿರಾಜ್/ಸಿದ್ಧಾರ್ಥ್, ಹೇಜಲ್‌ವುಡ್.
ಲಖನೌ: ಡಿ ಕಾಕ್, ರಾಹುಲ್(ನಾಯಕ), ಲೆವಿಸ್, ಹೂಡಾ, ಮನನ್ ವೋಹ್ರಾ, ಸ್ಟೋಯ್ನಿಸ್, ಹೋಲ್ಡರ್, ಕೆ.ಗೌತಮ್, ಮೋಹ್ಸಿನ್, ಆವೇಶ್, ರವಿ ಬಿಷ್ಣೋಯ್.
ಸ್ಥಳ: ಕೋಲ್ಕತಾ, ಈಡನ್ ಗಾರ್ಡನ್ಸ್, ಪಂದ್ಯ: ಸಂಜೆ 7.30ಕ್ಕೆ, ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
