* 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 26ರಿಂದ ಆರಂಭ* ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ಬಂದಿಳಿದ ಟೈಮಲ್ ಮಿಲ್ಸ್* ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲು ತುದಿಗಾಲಿನಲ್ಲಿ ನಿಂತ ಇಂಗ್ಲೆಂಡ್ ಎಡಗೈ ವೇಗಿ
ಮುಂಬೈ(ಮಾ.14): 5 ಬಾರಿಯ ಐಪಿಎಲ್ ಚಾಂಪಿಯನ್, ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಇದೀಗ 2022ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಗೆ ಸಜ್ಜಾಗಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದೆ. ಇದೀಗ ಇಂಗ್ಲೆಂಡ್ ತಂಡದ ಎಡಗೈ ಮಾರಕ ವೇಗಿ ಟೈಮಲ್ ಮಿಲ್ಸ್ (Tymal Mills) ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 29 ವರ್ಷದ ಟೈಮಲ್ ಮಿಲ್ಸ್ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ತಮ್ಮ ಕುಟುಂಬದೊಂದಿಗೆ ಈಗಾಗಲೇ ಮುಂಬೈಗೆ ಬಂದಿಳಿದಿದ್ದು, ಸದ್ಯ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟಿ20 ಸ್ಪೆಷಲಿಸ್ಟ್ ಬೌಲರ್ ಆಗಿ ಗುರುತಿಸಿಕೊಂಡಿರುವ ಟೈಮಲ್ ಮಿಲ್ಸ್, ಐಪಿಎಲ್‌ನಲ್ಲಿ ಜಾದೂ ಮಾಡಲು ಎದುರು ನೋಡುತ್ತಿದ್ದಾರೆ.
ಟೈಮಲ್ ಮಿಲ್ಸ್ ತಮ್ಮ ಕರಾರುವಕ್ಕಾದ ಯಾರ್ಕರ್ ಹಾಗೂ ವೇಗದ ಬೌಲಿಂಗ್‌ನಲ್ಲಿ ವೇರಿಯೇಷನ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬು ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇದೀಗ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ (Jasprit Bumrah) ಜತೆಗೂಡಿ ಮಾರಕ ದಾಳಿ ನಡೆಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 1.5 ಕೋಟಿ ರುಪಾಯಿ ನೀಡಿ ಟೈಮಲ್ ಮಿಲ್ಸ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮೆಗಾ ಹರಾಜಿನಲ್ಲಿ ಜೋಫ್ರಾ ಆರ್ಚರ್ (Jofra Archar) ಅವರನ್ನು ಖರೀದಿಸಿದೆಯಾದರೂ, ಆರ್ಚರ್ ಫಿಟ್ನೆಸ್ ಸಮಸ್ಯೆಯಿಂದಾಗಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಟೈಮಲ್ ಮಿಲ್ಸ್, ಮುಂಬೈ ಇಂಡಿಯನ್ಸ್ ತಂಡವು ಆಡಲಿರುವ ಎಲ್ಲಾ ಪಂದ್ಯಗಳಲ್ಲೂ ಕಣಕ್ಕಿಳಿಯುವ ಸಾಧ್ಯತೆಯಿದೆ.
ಇಂಗ್ಲೆಂಡ್ ತಂಡದ ಪರ 12 ಟಿ20 ಪಂದ್ಯಗಳನ್ನಾಡಿರುವ ಟೈಮಲ್ ಮಿಲ್ಸ್
ಎಡಗೈ ವೇಗದ ಬೌಲರ್ ಟೈಮಲ್ ಮಿಲ್ಸ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಪರ 12 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ 11 ವಿಕೆಟ್ ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೈಮಲ್ಸ್ ಹೆಚ್ಚೇನು ಕಮಾಲ್ ಮಾಡದೇ ಇದ್ದರೂ ಸಹಾ, ವಿವಿಧ ಫ್ರಾಂಚೈಸಿ ಲೀಗ್ ಟಿ20 ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ.
IPL 2022: ಜಗತ್ತಿನ ಯಾವ ಕ್ರಿಕೆಟಿಗನೂ ಎಬಿ ಡಿವಿಲಿಯರ್ಸ್ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದ ಫಾಫ್..!
ನಾನು ನನ್ನ ಹೊಸ ತಂಡದ ಸಹ ಆಟಗಾರರನ್ನು ಭೇಟಿಯಾಗಲು ಉತ್ಸುಕರಾಗಿದ್ಧೇನೆ. ಸಹಜವಾಗಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಫ್ರಾಂಚೈಸಿಯಾಗಿದೆ. ವಿಶ್ವಕಪ್ ಟೂರ್ನಿಯ ವೇಳೆ ಕೆಲಕಾಲ ಜಸ್ಪ್ರೀತ್ ಜತೆ ಮಾತನಾಡುವ ಅವಕಾಶ ಸಿಕ್ಕಿತ್ತು. ಇದೀಗ ಅವರ ಜತೆ ಚೆಂಡು ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ. ಈ ಮೊದಲು ನಾನು ವಾಂಖೆಡೆ ಮೈದಾನದಲ್ಲಿ ಪಂದ್ಯವನ್ನಾಡಿಲ್ಲ. 2017ರ ಬಳಿಕ ನಾನೀಗ ಮೊದಲ ಬಾರಿಗೆ ಐಪಿಎಲ್ ಆಡಲು ಸಿದ್ದನಾಗಿದ್ದೇನೆ. ನನಗೆ ಈ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ ಎಂದು ಟೈಮಲ್ ಮಿಲ್ಸ್ ಹೇಳಿದ್ದಾರೆ.
ಕಳೆದ ಕೆಲವು ಐಪಿಎಲ್ ಆವೃತ್ತಿಗಳಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಮಾರಕ ದಾಳಿ ನಡೆಸುವ ಮೂಲಕ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಆದರೆ ಕಳೆದ ತಿಂಗಳು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಟ್ರೆಂಟ್ ಬೌಲ್ಟ್‌ರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಬುಮ್ರಾ ಜತೆ ಈ ಬಾರಿ ಟೈಮಲ್ ಮಿಲ್ಸ್ ಮುಂಬೈ ಇಂಡಿಯನ್ಸ್ ಪರ ವೇಗದ ಬೌಲಿಂಗ್ ಸಾರಥ್ಯ ವಹಿಸುವ ಸಾಧ್ಯತೆಯಿದೆ.
