* ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಿಂದು ಕೋಲ್ಕತಾ ನೈಟ್ ರೈಡರ್ಸ್ ಸವಾಲು* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಉಭತ ತಂಡಗಳು* ಕೆಕೆಆರ್ ಸೋತರೇ ಅಧಿಕೃತವಾಗಿ ಪ್ಲೇ ಆಫ್‌ ರೇಸ್‌ನಿಂದ ಔಟ್

ಪುಣೆ(ಮೇ.14): 15ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ (IPL 2022 Play offs) ಪ್ರವೇಶಿಸಲು ಕೊನೆ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಮಾಜಿ ಚಾಂಪಿಯನ್‌ಗಳಾದ ಸನ್‌ರೈಸ​ರ್ಸ್‌ ಹೈದರಾಬಾದ್‌ (Sunrisers Hyderabad) ಹಾಗೂ ಕೋಲ್ಕತಾ ನೈಟ್‌ರೈಡ​ರ್ಸ್‌ (Kolkata Knight Riders) ತಂಡಗಳು ಶನಿವಾರ ಪರಸ್ಪರ ಮುಖಾಮುಖಿಯಾಗಲಿವೆ. ಇದು ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂಸಿಎ ಮೈದಾನ ಆತಿಥ್ಯವನ್ನು ವಹಿಸಿದೆ.

ಟೂರ್ನಿಯ ಆರಂಭಿಕ ಆಘಾತದಿಂದ ಹೊರಬಂದು ಬಳಿಕ ಸತತ 5 ಪಂದ್ಯ ಗೆದ್ದಿದ್ದ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ಕೊನೆಯ 4 ಪಂದ್ಯಗಳಲ್ಲಿ ಪರಾಭವಗೊಂಡಿದೆ. ತಂಡ 11 ಪಂದ್ಯಗಳಿಂದ ಕೇವಲ 10 ಅಂಕ ಪಡೆದಿದ್ದು ಈ ಪಂದ್ಯದಲ್ಲೂ ಸೋತರೆ ಪ್ಲೇ-ಆಫ್‌ನಿಂದ ಬಹುತೇಕ ಹೊರಬೀಳಲಿದೆ. ಗೆದ್ದರೆ ಪ್ಲೇ-ಆಫ್‌ ರೇಸ್‌ ಮತ್ತಷ್ಟು ರೋಚಕತೆ ಸೃಷ್ಟಿಸಲಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಗೆಲುವು ದಾಖಲಿಸಬೇಕಿದ್ದರೆ, ಬ್ಯಾಟಿಂಗ್ ವಿಭಾಗದಲ್ಲಿ ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್, ಏಯ್ಡನ್ ಮಾರ್ಕ್‌ರಮ್, ರಾಹುಲ್ ತ್ರಿಪಾಠಿ ಹಾಗೂ ನಿಕೋಲಸ್ ಪೂರನ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಾಗಿದೆ. ಇನ್ನು ಬೌಲಿಂಗ್‌ನಲ್ಲಿ ಉಮ್ರಾನ್ ಮಲ್ಲಿಕ್, ಭುವನೇಶ್ವರ್ ಕುಮಾರ್, ಟಿ ನಟರಾಜನ್ ಜತೆಗೆ ಜಗದೀಶ ಸುಚಿತ್ ಮಾರಕ ದಾಳಿ ಸಂಘಟಿಸಬೇಕಾಗಿದೆ.

ಅತ್ತ ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಈ ಬಾರಿ ಅಸ್ಥಿರ ಪ್ರದರ್ಶನ ತೋರುತ್ತಿದ್ದು, 12 ಪಂದ್ಯಗಳಿಂದ ಕೇವಲ 10 ಅಂಕ ಸಂಪಾದಿಸಿದೆ. ಈ ಪಂದ್ಯದಲ್ಲಿ ಗೆದ್ದರೂ ತಂಡ ಪ್ಲೇ-ಆಫ್‌ ಪ್ರವೇಶಿಸುವುದು ಅನುಮಾನ. ಸೋತರೆ ಪ್ಲೇ-ಆಫ್‌ನಿಂದ ಅಧಿಕೃತವಾಗಿ ಹೊರಗುಳಿಯಲಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ್ದ ಕೆಕೆಆರ್ ತಂಡವು ಈ ಬಾರಿ ಎಲ್ಲಾ ಪ್ರಯೋಗಗಳನ್ನು ನಡೆಸಿಯೂ ಕೈ ಸುಟ್ಟುಕೊಳ್ಳುತ್ತಿದೆ. ಕೆಕೆಆರ್ ತಂಡದಲ್ಲಿ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಸುನಿಲ್ ನರೈನ್, ಆಂಡ್ರೆ ರಸೆಲ್, ಟಿಮ್ ಸೌಥಿ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರಿದ್ದರೂ ಸಹಾ ಅಂದುಕೊಂಡಂತಹ ಯಶಸ್ಸು ದಕ್ಕುತ್ತಿಲ್ಲ. 

IPL 2022: ಪೃಥ್ವಿ ಶಾಗೆ ಟೈಫಾಯ್ಡ್‌ ಜ್ವರ, ಟೂರ್ನಿಯಿಂದಲೇ ಔಟ್..?

ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಒಟ್ಟು 22 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೆಕೆಆರ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 22 ಪಂದ್ಯಗಳ ಪೈಕಿ ಕೆಕೆಆರ್ ತಂಡವು 14 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಸನ್‌ರೈಸರ್ಸ್‌ ಹೈದ್ರಾಬಾದ್‌: ಅಭಿಷೇಕ್ ಶರ್ಮಾ‌, ಕೇನ್ ವಿಲಿಯಮ್ಸನ್‌(ನಾಯಕ), ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌, ನಿಕೋಲಸ್ ಪೂರನ್‌, ಜಗದೀಶ ಸುಚಿತ್‌, ಶಶಾಂಕ್ ಸಿಂಗ್‌, ಭುವನೇಶ್ವರ್ ಭುವನೇಶ್ವರ್‌, ಟಿ ನಟರಾಜನ್‌, ಉಮ್ರಾನ್ ಮಲಿಕ್‌, ಫಜಿಲ್‌ಹಕ್‌ ಫಾರೂಕಿ.

ಕೆಕೆಆರ್‌: ವೆಂಕಟೇಶ್‌ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌(ನಾಯಕ), ನಿತಿಶ್ ರಾಣಾ, ಆಂಡ್ರೆ ರಸೆಲ್‌, ರಿಂಕು ಸಿಂಗ್, ಶೆಲ್ಡನ್ ಜಾಕ್ಸನ್‌, ಸುನಿಲ್ ನರೈನ್‌, ಟಿಮ್ ಸೌಥಿ, ಉಮೇಶ್ ಯಾದವ್‌, ವರುಣ್‌ ಚಕ್ರವರ್ತಿ.

ಸ್ಥಳ: ಎಂಸಿಎ ಕ್ರೀಡಾಂಗಣ ಪುಣೆ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌